Asianet Suvarna News Asianet Suvarna News

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಪಕ್ಷ ಬಲಪಡಿಸಲು ಸ್ಪರ್ಧಿಸಿದ್ದೇನೆ, ಮಲ್ಲಿಕಾರ್ಜುನ ಖರ್ಗೆ

ಚುನಾವಣೆ ನಂತರ ಎಲ್ಲರ ಜತೆ ಚರ್ಚಿಸಿ ಪಕ್ಷ ಸುಧಾರಣೆ ಬಗ್ಗೆ ನಿರ್ಣಯ, ಒಬ್ಬನೇ ವ್ಯಕ್ತಿ ಯಾವ ನಿರ್ಧಾರಗಳನ್ನೂ ಕೈಗೊಳ್ಳಲ್ಲ ‘ಹೈಕಮಾಂಡ್‌ ಸಂಸ್ಕೃತಿ ಬದಲಿಸುವೆ’ ಎಂದಿದ್ದ ತರೂರ್‌ಗೆ ಖರ್ಗೆ ಉತ್ತರ

I Contested to Strengthen the Congress Party Says Mallikarjun Kharge grg
Author
First Published Oct 3, 2022, 1:00 AM IST

ನವದೆಹಲಿ(ಅ.03):  ‘ಪಕ್ಷ ಸುಧಾರಣೆ ಬಗ್ಗೆ ಏನೇ ಕ್ರಮ ಕೈಗೊಳ್ಳಬೇಕಾದರೂ ಪಕ್ಷದ ಅಧ್ಯಕ್ಷೀಯ ಚುನಾವಣೆ ನಂತರ ಎಲ್ಲರ ಜತೆ ಚರ್ಚಿಸಿ ಕೈಗೊಳ್ಳಲಾಗುವುದು. ಒಬ್ಬನೇ ವ್ಯಕ್ತಿ ಯಾವ ನಿರ್ಧಾರಗಳನ್ನೂ ಕೈಗೊಳ್ಳುವುದಿಲ್ಲ. ಪಕ್ಷ ಬಲಪಡಿಸಲೆಂದೇ ನಾನು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೀಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಖರ್ಗೆ ಅಧ್ಯಕ್ಷರಾದರೆ ಪಕ್ಷದಲ್ಲಿ ಯಥಾಸ್ಥಿತಿ ಮುಂದುವರಿಯತ್ತದೆ. ನಾನು ಅಧ್ಯಕ್ಷನಾದರೆ ಪಕ್ಷದಲ್ಲಿ ಬದಲಾವಣೆ ಆಗಲಿದೆ. ಹೈಕಮಾಂಡ್‌ ಸಂಸ್ಕೃತಿಗೆ ತೆರೆ ಬೀಳಲಿದೆ’ ಎಂಬ ತಮ್ಮ ವಿರುದ್ಧದ ಅಭ್ಯರ್ಥಿ ಶಶಿ ತರೂರ್‌ ಅವರ ಹೇಳಿಕೆಗೆ ಖರ್ಗೆ ಈ ಮೇಲಿನಂತೆ ಉತ್ತರ ನೀಡಿದರು.

‘ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸುವುದು ಒಳ್ಳೆಯದು ಎಂದು ಈ ಹಿಂದೆ ನಾನು ಶಶಿ ತರೂರ್‌ಗೆ ಹೇಳಿದ್ದೆ. ಆದರೆ ಅವರು ಸ್ಪರ್ಧಿಸಿದರು. ಗಾಂಧಿ ಕುಟುಂಬದ ಯಾರೂ ಸ್ಪರ್ಧಿಸಲ್ಲ ಎಂದು ಖಚಿತವಾದ ಬಳಿಕ, ಇತರ ಯುವ ಹಾಗೂ ಹಿರಿಯ ನಾಯಕರು ನನಗೆ ಸ್ಪರ್ಧಿಸುವಂತೆ ಕೋರಿದರು. ನಾನು ಚುನಾವಣೆಗೆ ನಿಲ್ಲಬೇಕೆಂದು ಸೂಚಿಸಿದ್ದು ಸೋನಿಯಾ ಗಾಂಧಿ ಅಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ‘ನಾನು ಯಾರನ್ನು ವಿರೋಧಿಸಲು ಚುನಾವಣೆಗೆ ನಿಂತಿಲ್ಲ. ಪಕ್ಷ ಬಲಪಡಿಸಲೆಂದು ನಿಂತಿದ್ದೇನೆ’ ಎಂದರು.

ಶಶಿ ತರೂರ್‌ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯೇ ತಪ್ಪು, ಕಾಶ್ಮೀರ, ಲಡಾಖ್‌ ಪ್ರದೇಶವೇ ನಾಪತ್ತೆ!

'ನಾನು ದಲಿತ ನಾಯಕ ಎಂದು ಚುನಾವಣೆಗೆ ನಿಂತಿಲ್ಲ. ಕಾಂಗ್ರೆಸ್‌ ಮುಖಂಡನಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದೂ ಅವರು ಹೇಳಿದರು. ‘ಒಬ್ಬನಿಗೆ ಒಂದೇ ಹುದ್ದೆ ನೀತಿಗೆ ಬದ್ಧನಾಗಿ ನಾನು ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಖರ್ಗೆ ಸ್ಪಷ್ಟಪಡಿಸಿದರು.

ಇಬ್ಬರು ವಕ್ತಾರರ ರಾಜೀನಾಮೆ:

ಈ ನಡುವೆ, ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪಕ್ಷದ ವಕ್ತಾರರಾದ ನಾಸಿರ್‌ ಹುಸೇನ್‌ ಹಾಗೂ ಗೌರವ್‌ ವಲ್ಲಭ್‌ ಅವರು ‘ನಾವು ಖರ್ಗೆ ಅವರ ಪರ ಪ್ರಚಾರ ಮಾಡಲಿದ್ದೇವೆ. ಹೀಗಾಗಿ ವಕ್ತಾರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇವೆ’ ಎಂದು ಪ್ರಕಟಿಸಿದರು.
 

Follow Us:
Download App:
  • android
  • ios