ನಾನು 6.5 ಕೋಟಿ ಕನ್ನಡಿಗರ ವಕ್ತಾರ: ಕುಮಾರಸ್ವಾಮಿ ತಿರುಗೇಟು
ತಮ್ಮನ್ನು ಬಿಜೆಪಿ ವಕ್ತಾರ ಎಂದು ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡಿದರು. ಜನತೆಯು ನನ್ನನ್ನು ಪ್ರತಿಪಕ್ಷ ಸ್ಥಾನದಲ್ಲಿ ಇರಿಸಿದ್ದಾರೆ. ಅವರ ಪರವಾಗಿ ಸರ್ಕಾರವನ್ನು ಪ್ರಶ್ನಿಸುವುದೇ ನನ್ನ ಕೆಲಸ ಮತ್ತು ಜನರ ಪರವಾಗಿ ನಾನು ದನಿಯೆತ್ತಲೇ ಬೇಕಿದೆ. ಅವರ ಕಾವಲುಗಾರನಾಗಿ ಕೆಲಸ ಮಾಡುತ್ತೇನೆ. ನನ್ನ ದನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು(ಆ.16): ನಾನು ಆರೂವರೆ ಕೋಟಿ ಕನ್ನಡಿಗರ ವಕ್ತಾರನೇ ಹೊರತು ಯಾವುದೇ ಪಕ್ಷದ ವಕ್ತಾರ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮ್ಮನ್ನು ಬಿಜೆಪಿ ವಕ್ತಾರ ಎಂದು ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡಿದರು. ಜನತೆಯು ನನ್ನನ್ನು ಪ್ರತಿಪಕ್ಷ ಸ್ಥಾನದಲ್ಲಿ ಇರಿಸಿದ್ದಾರೆ. ಅವರ ಪರವಾಗಿ ಸರ್ಕಾರವನ್ನು ಪ್ರಶ್ನಿಸುವುದೇ ನನ್ನ ಕೆಲಸ ಮತ್ತು ಜನರ ಪರವಾಗಿ ನಾನು ದನಿಯೆತ್ತಲೇ ಬೇಕಿದೆ. ಅವರ ಕಾವಲುಗಾರನಾಗಿ ಕೆಲಸ ಮಾಡುತ್ತೇನೆ. ನನ್ನ ದನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪಾಪದ ಹಣದಲ್ಲಿ ವಿದೇಶ ಪ್ರವಾಸ ಅಗತ್ಯವಿಲ್ಲ: ಚಲುವರಾಯಸ್ವಾಮಿಗೆ ಎಚ್‌ಡಿಕೆ ತಿರುಗೇಟು
ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷದವರು ದೇಶದಲ್ಲಿ ಗರೀಬಿ ಹಟಾವೋ ಮಾಡುತ್ತೇವೆ ಎಂದರು. 1971ರಲ್ಲಿ ಮೊಳಗಿದ ಈ ಘೋಷಣೆಯು ಘೋಷಣೆಯಾಗಿಯೇ ಉಳಿದಿದೆ. ಈಗ 77ನೇ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿದ್ದಾಗಲೂ ಬಡತನ ನಿವಾರಣೆ, ಪುಕ್ಕಟೆ ವಿಷಯಗಳ ಬಗ್ಗೆಯೇ ಮಾತನಾಡಲಾಗುತ್ತಿದೆ. ಹಾಗಿದ್ದರೆ ಹಿಂದೆ ಮಾಡಿದ ಘೋಷಣೆಗಳು, ಹಮ್ಮಿಕೊಂಡ ಕಾರ್ಯಕ್ರಮಗಳೆಲ್ಲವೂ ಎಲ್ಲಿ ಹೋದವು? ಕಾಂಗ್ರೆಸ್ ಪಕ್ಷದವರು ಸಮಾನತೆ ತರುತ್ತೇವೆ ಎಂದಿದ್ದಾರೆ. ಯಾವುದರಲ್ಲಿ ಸಮಾನತೆ ತರುತ್ತಾರೆ. ಪುಕ್ಕಟೆ ಕೊಡುವ ಮೂಲಕ ಎಲ್ಲರೂ ತಮ್ಮ ಮುಂದೆ ಕೈ ಒಡ್ಡುವಂತೆ ಮಾಡಿದ್ದಾರೆ. ದುಡಿಯವ ಕೈಗಳಿಗೆ ಶಕ್ತಿ ತುಂಬುವ ಬದಲು ಅವರ ಕೈ ಚಾಚಿ ನಿಲ್ಲುವಂತೆ ಮಾಡಿದ್ದಾರೆ. ಜನರನ್ನು ಕೈಯೊಡ್ಡಿ ನಿಲ್ಲಿಸುವ ವಿಚಾರದಲ್ಲಿ ಇವರು ಸಮಾನತೆ ಸಾಧಿಸುತ್ತಿದ್ದಾರೆ. ಇದಕ್ಕಿಂತ ದುಸ್ಥಿತಿ ಇನ್ನೇನಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ನಾಡಿನ ಜನರು ತಮ್ಮ ರಕ್ತ ಸುರಿಸಿ ಖಜಾನೆ ತುಂಬುತ್ತಿದ್ದಾರೆ. ಹಿಂದೆ ಯಾವುದಾದರೂ ಕಾರ್ಯಕ್ರಮ ಬಂದರೆ ಹಣವನ್ನು ಎಲ್ಲಿಂತ ತರುವುದು? ಎನ್ನುವ ಪ್ರಶ್ನೆ ಇರುತ್ತಿತ್ತು. ಈಗ ಸಂಪತ್ತಿಗೆ ಕೊರತೆ ಇಲ್ಲ. ಆದರೆ, ಇರುವ ಹಣವನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ ಎಂದು ಆಳುವ ಮಂದಿಯನ್ನು ಕೇಳಬೇಕಾದ ಸ್ಥಿತಿ ಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಒಂದೇ ಒಂದು ಈಸ್ಟ್ ಇಂಡಿಯಾ ಕಂಪನಿ ಇತ್ತು. ಈಗ ಹೆಜ್ಜೆಹೆಜ್ಜೆಗೂ ಅಂತಹ ಕಂಪನಿಗಳು ಕಾಣುತ್ತಿವೆ. ರಾಷ್ಟ್ರೀಯ ಪಕ್ಷಗಳು ಈಸ್ಟ್ ಇಂಡಿಯಾ ಕಂಪನಿಗಳಂತೆ ಜನರನ್ನು ಸುಲಿಗೆ ಮಾಡುತ್ತಿವೆ. ಈ ದೇಶದ ಸಂಪತ್ತಿಗೆ ಶಕ್ತಿ ತುಂಬುವ ಕೆಲಸವನ್ನು ಕನ್ನಡಿಗರು ಮಾಡುತ್ತಿದ್ದಾರೆ. ಕರ್ನಾಟಕವು ತೆರಿಗೆ ಸಂಗ್ರಹ ಮಾಡಿ ಕೇಂದ್ರದ ಖಜಾನೆ ತುಂಬುವ ಎರಡನೇ ಸಂಪದ್ಭರಿತ ರಾಜ್ಯವಾಗಿದೆ. ಆದರೆ, ನಮಗೆ ಆಗುತ್ತಿರುವ ಅನ್ಯಾಯ ಬಗ್ಗೆ ದನಿ ಎತ್ತುವವರು ಯಾರು? ಎಂದರು.