ಮೂರು ತಿಂಗಳಲ್ಲಿ ನಾನೇ ಮುಖ್ಯಮಂತ್ರಿ: ಕುಮಾರಸ್ವಾಮಿ
ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಮೋಸ ಕಂಪನಿಯಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದೆ ರೈತರಿಗೆ ಸರ್ಕಾರದಿಂದಲೇ ಬೆಳೆ ವಿಮೆ ಜಾರಿಗೆ ತರುತ್ತೇನೆ: ಎಚ್.ಡಿ.ಕುಮಾರಸ್ವಾಮಿ
ಆಳಂದ(ಜ.10): ಬರುವ ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯ ಬಳಿಕ ನಾನೇ ಮುಖ್ಯಮಂತ್ರಿಯಾಗಲಿದ್ದು, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಖಜೂರಿ ಗ್ರಾಮದಲ್ಲಿ ಸೋಮವಾರ ನಡೆದ ಪಕ್ಷದ ಪಂಚರತ್ನ ರಥಯಾತ್ರೆಯ ರೋಡ್ ಶೋನಲ್ಲಿ ಅನೇಕ ರೈತರು ತಮ್ಮ ಸಾಲದ ಮನ್ನಾವಾದರು ಕೈಗೊಳ್ಳುತ್ತಿಲ್ಲ ಎಂದು ಎಂಬ ಅಳಲಿಗೆ ಸ್ಪಂದಿಸಿ ಅವರು ಮಾತನಾಡಿದರು.
ಅಧಿಕಾರದಲ್ಲಿದ್ದಾಗ ತಾವು ಮಾಡಿದ ರೈತ ಸಾಲಮನ್ನಾ ಈ ಸರ್ಕಾರ ಪೂರ್ಣವಾಗಿ ಜಾರಿಗೆ ತರದೆ, ಸಾಕಷ್ಟುಕಡೆ ಸಮಸ್ಯೆ ಮಾಡಿದ್ದಾರೆ. ಸಾಲದ 95ರ ಫಾರಂ ತಿರಸ್ಕೃತವಾದರೆ ಸಂಬಂಧಿತ ಅಧಿಕಾರಿಗಳ ಮಧ್ಯಸ್ಥಿಕೆ ವಹಿಸಿ ಕ್ರಮ ಕೈಗೊಳ್ಳಬೇಕಿತ್ತು. ಅಧಿಕಾರದಲ್ಲಿ 500 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದನ್ನು ರಾಜ್ಯ ಸರ್ಕಾರ ಸಾಲಮನ್ನಾಕ್ಕೆ ಬಳಕೆ ಮಾಡದೆ ಬೇರೆ ಕಡೆ ವರ್ಗಾಯಿಸಿದೆ ಎಂದು ದೂರಿದರು. ನಿಮ್ಮ ಸಮಸ್ಯೆಗಳಿಗೆ ಮೂರು ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಸಾಲಮನ್ನಾ ಸೇರಿ ಎಲ್ಲ ಸಮಸ್ಯೆ ಬಗೆ ಹರಿಸುತ್ತೇನೆಂದರು.
ಲೂಟಿ ಗ್ಯಾಂಗ್ ಓಡಿಸಲು ಜೆಡಿಎಸ್‌ಗೆ ಅಧಿಕಾರ ಕೊಡಿ: ಎಚ್.ಡಿ.ಕುಮಾರಸ್ವಾಮಿ
ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಮೋಸ ಕಂಪನಿಯಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದೆ ರೈತರಿಗೆ ಸರ್ಕಾರದಿಂದಲೇ ಬೆಳೆ ವಿಮೆ ಜಾರಿಗೆ ತರುತ್ತೇನೆ. ನಷ್ಟವಾದ ತೊಗರಿಗೆ ಬೆಳೆ ವಿಮೆ ಕೊಡುವುದು ಬಿಡುವುದು ಗೊತ್ತಿಲ್ಲ. ಆದರೆ ಮೂರು ತಿಂಗಳಲ್ಲಿ ಅಧಿಕಾರಕ್ಕೆ ಬಂದು ಸಂಪೂರ್ಣವಾಗಿ ಈ ಭಾಗದ ಒಣಗಿದ ತೊಗರಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿದ ಅವರು, 2006ರಲ್ಲಿ ಆಕಸ್ಮಿಕವಾಗಿ ಸಿಎಂ ಆಗಿ ಗ್ರಾಮವಾಸ್ತವ್ಯ ಮಾಡಿದಾಗ ಬೀದರನಲ್ಲಿನ ಕಬ್ಬು ಕಟ್ಟಾವು ಆಗದ ಉಳಿದ ರೈತರಿಗೆ ಪರಿಹಾರ ಕೊಟ್ಟಿದ್ದೇನೆ. ರೈತರ ಇಂಥ ಅನೇಕ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರಕ್ಕೆ ಏನಾಗಿದೆ ಎಂದು ಪ್ರಶ್ನಿಸಿದರು.
ಯಾತ್ರೆಯಲ್ಲಿ ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ, ಅಲ್ಪಸಂಖ್ಯಾತರ ಘಟಕದ ರಾಜ್ಯ ಮುಖಂಡ ಜಫರ್ ಹುಸೇನ, ತಾಲೂಕು ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ, ಯುವ ಘಟಕದ ಅಧ್ಯಕ್ಷ ಶರಣ ಕುಲಕರ್ಣಿ ಸೇರಿದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.