Asianet Suvarna News Asianet Suvarna News

ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ: ಯದುವೀರ್‌ ಕೃಷ್ಣದತ್ತ ಒಡೆಯರ್‌

ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ, ಮುಂದೆ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆಯನ್ನೂ ಮಾಡುವುದಿಲ್ಲ ಎಂದು ಮೈಸೂರು ರಾಜ ವಂಶಸ್ಥ ಯದುವೀರ್‌ ಸ್ಪಷ್ಟಪಡಿಸಿದರು. 

I am not interested in politics Says Yaduveer Krishnadatta Chamaraja Wadiyar gvd
Author
First Published May 23, 2023, 1:30 AM IST

ಭಾರತೀನಗರ (ಮೇ.23): ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ, ಮುಂದೆ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆಯನ್ನೂ ಮಾಡುವುದಿಲ್ಲ ಎಂದು ಮೈಸೂರು ರಾಜ ವಂಶಸ್ಥ ಯದುವೀರ್‌ ಸ್ಪಷ್ಟಪಡಿಸಿದರು. ಚುನಾವಣೆಗಳು ಬಂದ ಸಮಯದಲ್ಲೆಲ್ಲಾ ಸ್ಪರ್ಧೆಯ ವಿಚಾರ ಬರುತ್ತಿದ್ದರೂ ನಾನು ಅದರ ಬಗ್ಗೆ ಗಮನಕೊಡುವುದಿಲ್ಲ. ಅರಮನೆ ಸಂಪ್ರದಾಯ, ಆಚಾರ-ವಿಚಾರಗಳಿಗೆ ಬದ್ಧನಾಗಿ ನಡೆಯುವುದಕ್ಕಷ್ಟೇ ಪ್ರಾಮುಖ್ಯತೆ ನೀಡುತ್ತೇನೆ. ಜನರು ಪ್ರೀತಿಯಿಂದ ಕರೆದಲ್ಲಿಗೆ ಹೋಗಿ ಬರುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮುಂದೆಯೂ ಮುಂದುವರೆಸುತ್ತೇನೆ ಎಂದು ರಾಜಕೀಯ ಪ್ರವೇಶ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ನೂತನ ಸರ್ಕಾರ ಈಗಷ್ಟೇ ಅಧಿಕಾರಕ್ಕೆ ಬಂದಿದೆ. ಮೊನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಗಲೇ ಆಡಳಿತವನ್ನು ತುಲನೆ ಮಾಡುವುದಕ್ಕೆ ಸಾಧ್ಯವಿಲ್ಲ. ಅವರಿಗೆ ಸಮಯಾವಕಾಶ ಕೊಟ್ಟು ನೋಡೋಣ. ಜನಪರವಾದ ಆಡಳಿತ ನೀಡಬೇಕೆಂಬುದು ನಮ್ಮ ಆಶಯವಾಗಿದೆ. ಅದಕ್ಕೆ ಪೂರಕವಾಗಿ ಅವರು ಏನೇನು ನೀತಿ-ನಿಯಮಗಳನ್ನು ರೂಪಿಸಿಕೊಂಡಿದ್ದಾರೆ ಎನ್ನುವುದನ್ನು ಸ್ವಲ್ಪ ಕಾಲದವರೆಗೆ ಕಾದುನೋಡಬೇಕಿದೆ ಎಂದು ಹೇಳಿದರು.

ಅಡುಗೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಯಾದಗಿರಿಯಲ್ಲಿ ತಪ್ಪಿದ ಭಾರೀ ದುರಂತ!

ಪ್ಲಾಸ್ಟಿಕ್‌ ಎನ್ನುವುದೊಂದು ಮಹಾಮಾರಿ. ಅದು ಭೂಮಿಯೊಳಗೆ ಸೇರಿ ವಿಷವಾಗದಂತೆ ತಡೆಯಬೇಕಿದೆ. ಅದನ್ನು ನಿಷೇಧಿಸುವ ದೇವಸ್ಥಾನಗಳಿರುವ ಜಾಗದಿಂದಲೇ ಆರಂಭವಾಗಬೇಕು. ಆಗ ಅದಕ್ಕೊಂದು ಅರ್ಥ ಬರುತ್ತದೆ. ಪ್ರತಿಯೊಬ್ಬರೂ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಿದಾಗ ಪ್ರಕೃತಿ ಸೌಂದರ್ಯ ಹಾಗೂ ಭೂಮಿಯ ಆರೋಗ್ಯವನ್ನು ಕಾಪಾಡಬಹುದು. ಪ್ಲಾಸ್ಟಿಕ್‌ ಹೆಚ್ಚು ಬಳಸದೆ ಪರಿಸರವನ್ನು ಪ್ಲಾಸ್ಟಿಕ್‌ ಮುಕ್ತ ವಲಯಮಾಡಿ ಹಸಿರಿಕರಣಗೊಳಿಸಬೇಕು ಎಂದು ಸಲಹೆ ನೀಡಿದರು.

ದೇವಸ್ಥಾನಗಳ ಮಹತ್ವ ತಿಳಿಸುವ ಅಗತ್ಯವಿದೆ: ನಮ್ಮ ಮುಂದಿನ ಪೀಳಿಗೆಗೆ ದೇವಸ್ಥಾನಗಳ ಮಹತ್ವ ತಿಳಿಸುವ ಅಗತ್ಯವಿದೆ ಎಂದು ಮೈಸೂರು ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ಕಾಡುಕೋತ್ತನಹಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೈಂಕರ್ಯ ಕಾರ್ಯದಲ್ಲಿ ಪೂಜೆ ನೆರವೇರಿಸಿ ನಂತರ ಗ್ರಾಮದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, 800 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ 400 ವರ್ಷಗಳ ಕಾಲ ನಮ್ಮ ಮೈಸೂರು ಮಹಾರಾಜಾ ಸಂಸ್ಥಾನಕ್ಕೆ ಒಳಪಟ್ಟಿರುವುದನ್ನು ಕೇಳಿ ನನಗೆ ಅತೀವ ಸಂತೋಷ ತಂದಿದೆ ಎಂದರು.

ಇಲ್ಲಿನ ಗ್ರಾಮಸ್ಥರ ನಂಟು ನಮ್ಮ ಸಂಸ್ಥಾನಕ್ಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಕೇಳಿ ತಿಳಿದಿದ್ದೇನೆ. ಅದು ಹಾಗೆಯೇ ಮುಂದುವರಿಯಲಿ. ಸುಮಾರು 2 ಕೋಟಿ ರು. ಹೆಚ್ಚಿನ ಹಣದಲ್ಲಿ ನಿರ್ಮಾಣವಾಗುತ್ತಿರುವ ಈ ದೇವಾಲಯದ ವಾಸ್ತುಶಿಲ್ಪವನ್ನು ಹಳೆಯ ಶೈಲಿಯಲ್ಲಿಯೇ ನಿರ್ಮಿಸಿ ಮುಂದಿನ ಪೀಳಿಗೆಗೆ ದೇವಸ್ಥಾನದ ಮಹತ್ವವನ್ನು ತಿಳಿಸುವ ಅಗತ್ಯವಿದೆ ಎಂದು ಹೇಳಿದರು. ದೇವಸ್ಥಾನ ನಿರ್ಮಾಣದ ನಂತರ ಪೂಜಾ ಕಾರ್ಯಕ್ರಮ ನಡೆಸುವುದರ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡು ಇಲ್ಲಿನ ಜನರ ಅಭಿವೃದ್ಧಿಯ ಜೊತೆಗೆ ನಾಡಿನ ಅಭ್ಯುದಯಕ್ಕೆ ಕಾರಣಿಕರ್ತರಾಗಬೇಕು. 

ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ!

ಹಿಂದಿನ ಕಾಲದಲ್ಲಿ ದೇವಸ್ಥಾನದಿಂದಲೇ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದನ್ನು ನಾವು ಮುಂದುವರಿಸಬೇಕಾಗಿದೆ. ಅದಕ್ಕಾಗಿ ಯಾವುದೇ ಸಂದರ್ಭದಲ್ಲಿ ಮೈಸೂರು ಸಂಸ್ಥಾನ ನಿಮ್ಮ ಜೊತೆ ಇರಲಿದೆ ಎಂದು ಹೇಳಿದರು. ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಶೀಘ್ರದಲ್ಲಿ ಮುಕ್ತಾಯಗೊಂಡು ಲೋಕಾರ್ಪಣೆಯಾಗಲಿ. ದೇವಸ್ಥಾನದ ಆರಂಭೋತ್ಸವಕ್ಕೆ ನಾನು ಖುದ್ದು ಹಾಜರಿರುತ್ತೇನೆ. ಯಾವುದೇ ಕಾರ್ಯಕ್ರಮದ ಒತ್ತಡವಿದ್ದರೂ ಅದನ್ನು ಬದಿಗಿರಿಸಿ ಇಂತಹ ಲೋಕ ಕಲ್ಯಾಣದ ಸತ್ಕಾರ್ಯದಲ್ಲಿ ಭಾಗಿಯಾಗಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಪೂರ್ಣ ಕುಂಭದೊಡನೆ ಸ್ವಾಗತಿಸಿ ದೇವಸ್ಥಾನ ನಿರ್ಮಾಣ ಕಾರ್ಯದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರಿಂದ ಪೂಜಾ ಕೈಂಕರ್ಯ ನಡೆಸಲಾಯಿತು.

Follow Us:
Download App:
  • android
  • ios