ಶಾಸಕ ಜಿ.ಟಿ. ದೇವೇಗೌಡರು ತಾವು ಜೆಡಿಎಸ್‌ನಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿಯೇ ಸ್ಪರ್ಧಿಸುವುದಾಗಿ ಹೇಳುವ ಮೂಲಕ, ಸಾ.ರಾ. ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

ಮೈಸೂರು: ನಾನೀಗ ಜೆಡಿಎಸ್ ಶಾಸಕನಾಗಿದ್ದು, ಮುಂದಿನ ಚುನಾವಣೆಯಲ್ಲೂ ಈ ಪಕ್ಷದ ಅಭ್ಯರ್ಥಿಯಾಗಿಯೇ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ. ದೇವೇಗೌಡ ತಿಳಿಸುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಯಾವುದೇ ರೀತಿಯ ದ್ರೋಹ ಮಾಡಿಲ್ಲ. ಹಲವಾರು ವರ್ಷಗಳ ಕಾಲ ಪಕ್ಷದಲ್ಲಿದ್ದುಕೊಂಡು ಪಕ್ಷ ಕಟ್ಟಿ ಸಂಘಟನೆ ಮಾಡಿದ್ದೇನೆ ಎಂದರು.

ಜೆಡಿಎಸ್ ನಿಂದ ಒಂದು ಹೆಜ್ಜೆಯನ್ನು ಆಚೆಗೆ ಇಟ್ಟಿಲ್ಲ

ನಾನು ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಜೊತೆಯಲ್ಲಿ ಸಾಗಿ ಬಂದಿದ್ದೇನೆ. ನಾನೇನು ಪಕ್ಷದ ಹಿರಿಯ ‌ನಾಯಕರ ವಿರುದ್ಧ ಮಾತ‌ನಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಲ್ಲ. ನನ್ನ ಕ್ಷೇತ್ರ ಬಹಳ ದೊಡ್ದದಿದೆ. ಹೀಗಾಗಿ, ನನ್ನ ಕ್ಷೇತ್ರದಲ್ಲಿ ಓಡಾಡುತ್ತಿದ್ದೇ‌‌ನೆ. ನಾನು ಜೆಡಿಎಸ್ ನಲ್ಲೇ ಇದ್ದೇನೆ. ಜೆಡಿಎಸ್ ನಿಂದ ಒಂದು ಹೆಜ್ಜೆಯನ್ನು ಆಚೆಗೆ ಇಟ್ಟಿಲ್ಲ. ಪಕ್ಷದಲ್ಲಿ ‌ನಡೆದ ಕೆಲ ಬೆಳವಣಿಗೆಗಳಿಂದ ವೈಯಕ್ತಿಕವಾಗಿ ನನಗೆ ನೋವಾಗಿದೆ. ನನ್ನ ನೋವನ್ನು ತೋಡಿಕೊಂಡಿದ್ದೇನೆ. ನಾನು ಜೆಡಿಎಸ್ ತೊರೆದಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು.

ದ್ರೋಹ ಮಾಡಿಲ್ಲ

ಚಾಮುಂಡೇಶ್ವರಿ ಕ್ಷೇತ್ರದ ಜನತೆಗೆ, ಯಾವುದೇ ನಾಯಕರಿಗೂ ದ್ರೋಹ ಮಾಡೋ ಬುದ್ದಿ ನನಗಿಲ್ಲ. ನಾನು ನಾಯಕತ್ವ ನೋಡಿ ಬೆಂಬಲ ಕೊಡುವವನು. ಈ ಹಿಂದಿನಿಂದಲೂ ಎಲ್ಲಾ ಚುನಾವಣೆಗಳಲ್ಲೂ ಗೆದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕುಮಾರಪರ್ವ ಪ್ರಾರಂಭ ಮಾಡಿದ್ದು. ಯಡಿಯೂರಪ್ಪರ ಜೊತೆ ಮರಳಿ ಮನೆಗೆ ಕಾರ್ಯಕ್ರಮ ಮಾಡಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋದ ನಂತರ ಕುಮಾರಸ್ವಾಮಿ ಮೆರವಣಿಗೆ ಮಾಡಿ ಕರೆ ತಂದಿದ್ದು ನಾನೇ. ಕುಮಾರಸ್ವಾಮಿಯನ್ನು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿಸಿದ್ದು ನಾನೇ. ಜೆಡಿಎಸ್ ನಲ್ಲಿ ಅನೇಕ ಜವಾಬ್ದಾರಿ ನಿಭಾಯಿಸಿದ್ದೇನೆ. ದೇವೇಗೌಡರ ಆಶೀರ್ವಾದದಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ.. ಈಗಲೂ ಅವರಿಗೆ ಬೆಂಬಲ ಕೊಟ್ಟು ಶಾಸಕನಾಗಿ ಕೆಲಸ ಮಾಡಿದ್ದೇನೆ. ಜೆಡಿಎಸ್ ಪಕ್ಷವನ್ನು ಕೂಡ ಕಟ್ಟಿದ್ದೇನೆ ಎಂದು ಅವರು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಜನತೆ ನನ್ನನ್ನು ತಮ್ಮ ಮನೆ ಮಗನ ರೀತಿ ನೋಡಿಕೊಂಡು ಬಂದಿದ್ದಾರೆ. ಈಗಲೂ ಜೆಡಿಎಸ್ ನಲ್ಲಿ ಇದ್ದೇನೆ. ಮುಂದೆಯೂ ಜೆಡಿಎಸ್ ನಲ್ಲೇ ಉಳಿಯುತ್ತೇನೆ. ನಾನು ಪಕ್ಷದಿಂದ ದೂರ ಉಳಿದಿದ್ದ ಮಾತ್ರಕ್ಕೆ ಯಾರ ವಿರುದ್ಧವೂ ಯಾವತ್ತು ಮಾತನಾಡಿಲ್ಲ ಎಂದರು.

ಇದನ್ನೂ ಓದಿ: ಪ್ರತಾಪ್ ಸಿಂಹ ಕಣ್ಣಿಟ್ಟ ಚಾಮರಾಜ ಕ್ಷೇತ್ರಕ್ಕೆ ನಿಖಿಲ್ ಎಂಟ್ರಿ? ಜಿಟಿ ದೇವೇಗೌಡ ಪಕ್ಷದಿಂದ ಔಟ್‌? ಸಾ.ರಾ ಮಹೇಶ್‌ ಚಾಮುಂಡೇಶ್ವರಿ ಕ್ಷೇತ್ರ!

ಎಲ್ಲವೂ ಕ್ಷೇತ್ರದ ಅಭಿವೃದ್ಧಿಗೋಸ್ಕರ ಎಂದ ಜಿಟಿಡಿ

ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರ. ಈ ಕ್ಷೇತ್ರದ ಸೇವೆ ಸಲ್ಲಿಸಿ ದಣಿದಿದ್ದೇನೆ. ನನ್ನ ಕೈ ಹಿಡಿದವರ ಸೇವೆ ಮಾಡಬೇಕು. ಈ ಕಾರಣಕ್ಕಾಗಿ ಕ್ಷೇತ್ರದಲ್ಲಿ ಹೆಚ್ಚು ಓಡಾಟ ಮಾಡ್ತಿದ್ದೇನೆ. ಚುನಾವಣೆಗೆ ಇನ್ನೂ ಎರಡು ವರ್ಷ ನಾಲ್ಕು ತಿಂಗಳು ಇದೆ. ಪುನರ್ ವಿಂಗಡಣೆ ಆದರೆ ಮೂರು ವರ್ಷ ಇದೆ. ಕ್ಷೇತ್ರದ ಅಭಿವೃದ್ಧಿಗೋಸ್ಕರ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಹತ್ತಿರಕ್ಕೆ ಹೋಗಿದ್ದೇನೆ. ಇದನ್ನು ಬಿಟ್ಟರೆ ಬೇರೇನೂ ಇಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಜಿಟಿಡಿಗೆ ಎಂಟ್ರಿ ಇಲ್ಲ, ಮೈತ್ರಿಯಲ್ಲಿ ಚಾಮರಾಜ ಕ್ಷೇತ್ರದ ಬೇಡಿಕೆ, ದೇವೇಗೌಡರ ಜತೆ ಸಭೆ ಬಳಿಕ ಸಾ.ರಾ. ಮಹೇಶ್ ಹೇಳಿಕೆ