ಪ್ರತಿಪಕ್ಷ ನಾಯಕ ಹುದ್ದೆಗೆ ನಾನೂ ಆಕಾಂಕ್ಷಿ: ಅಶ್ವತ್ಥನಾರಾಯಣ್
ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಆಗಿದೆ. ಇನ್ನು ವಿರೋಧ ಪಕ್ಷದ ನಾಯಕರನ್ನಾಗಿ ಸೂಕ್ತವಾದ ವ್ಯಕ್ತಿಯನ್ನು ನಮ್ಮ ನಾಯಕರು ನೇಮಕ ಮಾಡುತ್ತಾರೆ. ವಿಧಾನಸಭೆಯಲ್ಲಿ 66 ಜನ ಬಿಜೆಪಿಯ ಶಾಸಕರಿದ್ದಾರೆ. ಎಲ್ಲರೂ ವಿರೋಧ ಪಕ್ಷದ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ನಾನು ಸಹ ಆಕಾಂಕ್ಷಿಯೇ ಎಂದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್
ಮೈಸೂರು(ನ.11): ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಆಗಿದೆ. ಇನ್ನು ವಿರೋಧ ಪಕ್ಷದ ನಾಯಕರನ್ನಾಗಿ ಸೂಕ್ತವಾದ ವ್ಯಕ್ತಿಯನ್ನು ನಮ್ಮ ನಾಯಕರು ನೇಮಕ ಮಾಡುತ್ತಾರೆ. ವಿಧಾನಸಭೆಯಲ್ಲಿ 66 ಜನ ಬಿಜೆಪಿಯ ಶಾಸಕರಿದ್ದಾರೆ. ಎಲ್ಲರೂ ವಿರೋಧ ಪಕ್ಷದ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ನಾನು ಸಹ ಆಕಾಂಕ್ಷಿಯೇ ಎಂದರು.
ಬಿಜೆಪಿಯೇ ವಿರೋಧ ಪಕ್ಷ:
ವಿಧಾನಸಭೆಯಲ್ಲಿ ಕಾನೂನಾತ್ಮಕವಾಗಿ ಬಿಜೆಪಿ ವಿರೋಧ ಪಕ್ಷ. ನಮ್ಮಲ್ಲೇ ಬೇಕಾದಷ್ಟು ನಾಯಕರಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಆಗಿರಬಹುದು. ಅಂದಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಬೇಕು ಅಂತಾ ಏನೂ ಇಲ್ಲ ಎಂದವರು ತಿಳಿಸಿದರು.
ವಿಜಯೇಂದ್ರಗೆ ಸಿಕ್ಕಿರುವುದು ಅಧಿಕಾರ ಅಲ್ಲ, ಜವಾಬ್ದಾರಿ: ಸಿ.ಟಿ.ರವಿ
ಹೃದಯ ತುಂಬಿ ಸ್ವಾಗತ:
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ಆಗಿರುವುದಕ್ಕೆ ನಾನು ಹೃದಯ ತುಂಬಿ ಸ್ವಾಗತ ಮಾಡುತ್ತೇನೆ. ವಿಜಯೇಂದ್ರ ಯುವಕ ಇದ್ದಾರೆ. ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಾರೆ. ಸಾಕಷ್ಟು ಜನ ಹಿರಿ, ಕಿರಿಯ ಆಕಾಂಕ್ಷಿಗಳಿದ್ದರು. ಆದರೆ ಕಿರಿಯರಿಗೆ ಕೊಡಬಾರದು ಅಂತೇನಿಲ್ಲ ಎಂದರು. ಇನ್ನು, ವಿ.ಸೋಮಣ್ಣ ಪ್ರಭಾವಿ ನಾಯಕರು. ಅವರಿಗೆ ಎಲ್ಲಾ ರೀತಿಯ ಅರ್ಹತೆ ಇತ್ತು. ಸಿ.ಟಿ.ರವಿ ಅವರಿಗೂ ಪಕ್ಷ ಅನೇಕ ಹುದ್ದೆಗಳನ್ನು ನೀಡಿದೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದವರು ಹೇಳಿದರು.