ಜಂಪಿಂಗ್ ಪಾಲಿಟಿಕ್ಸ್: ಬಿಜೆಪಿ, ಜೆಡಿಎಸ್‌ನಿಂದ ನೂರಾರು ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ನಡೆಯತ್ತಿದ್ದು ಹಾಲಿ ಶಾಸಕರ ಸಮ್ಮುಖದಲ್ಲಿ ಬಿಜೆಪಿ, ಜೆಡಿಎಸ್‌ನಿಂದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ. 

Hundreds of Workers from BJP JDS Join Congress in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಏ.06):  ಕಾಫಿನಾಡಿನಲ್ಲಿ ಜಂಪಿಂಗ್ ಪಾಲಿಟಿಕ್ಸ್ ಜೋರಾಗಿದೆ. ಅದರಲ್ಲೂ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ನಡೆಯತ್ತಿದ್ದು ಹಾಲಿ ಶಾಸಕರ ಸಮ್ಮುಖದಲ್ಲಿ ಬಿಜೆಪಿ, ಜೆಡಿಎಸ್‌ನಿಂದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೊಪ್ಪ ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ  ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ವಿಜಯಾನಂದ ಕಾಂಗ್ರೆಸ್ ಸೇರ್ಪಡೆಯಾದರು. 

ಲೋಕಾಯುಕ್ತಕ್ಕೆ ದೂರು ನೀಡಿ ವಾಪಸ್‌ ಪಡೆದಿದ್ದ ವಿಜಯಾನಂದ ಕಾಂಗ್ರೆಸ್‌ಗೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಚುನಾವಣಾ ಉಸ್ತುವಾರಿ ಹಾಗೂ ಪ್ರಚಾರ ಸಮಿತಿಯ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಮುಖಂಡ ಪ್ರಕಾಶ್ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಈ ಹಿಂದೆ ಜೆಡಿಎಸ್ ಸೇರಿದ್ದ ಸುನಿಲ್ ನಿಡುವಾನೆ ಹಾಗೂ ಟಿ. ಡಿ ರಾಜೇಗೌಡ ಅವರ ವಿರುದ್ಧ ಸಿದ್ಧಾರ್ಥ್ ಹೆಗಡೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಾಜಿ ಶಾಸಕ ಜೀವರಾಜ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವಿಜಯಾನಂದ  ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ವಿಜಯಾನಂದ್ ಈ ಹಿಂದೆ ಕೊಪ್ಪ ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮಾಜಿ ಶಾಸಕ ಜೀವರಾಜ್ ಅವರ ಆಪ್ತ ವಲಯದಲ್ಲಿ ಕೂಡ ಗುರುತಿಸಿಕೊಂಡಿದ್ದ ವಿಜಯಾನಂದ ಅವರು ಅಕ್ರಮ ಆಸ್ತಿ ಸಂಬಂಧಿಸಿದಂತೆ ಟಿ. ಡಿ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಸಿ.ಟಿ.ರವಿಯೇ ಗೆಲ್ಲೋದು, ಕಾಂಗ್ರೆಸ್ ಮುಖಂಡನ ಆಡಿಯೋ ವೈರಲ್: ಪಕ್ಷದಿಂದ ವಜಾ

ದಿವಂಗತ ಸಿದ್ದಾರ್ಥ್ ಒಡೆತನದ ಕಾಫಿ ತೋಟ ಖರೀದಿ ಅಕ್ರಮ ಆರೋಪ : 

ದಿವಂಗತ ಸಿದ್ಧಾರ್ಥ್ ಒಡೆತನದ ಕಾಫಿತೋಟದ ಆಸ್ತಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಸಲ್ಲಿಸಿದ್ದರು. ಶಾಸಕ ಟಿ. ಡಿ ರಾಜೇಗೌಡ 200 ಕೋಟಿ ಆಸ್ತಿ ಹೊಂದಿದ್ದು, 13 ಕೋಟಿ ಮುದ್ರಾಂಕ ಶುಲ್ಕ ಹಾಗೂ 60 ಕೋಟಿ ಆದಾಯ ತೆರಿಗೆ ಕಟ್ಟದೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ವಿಜಯಾನಂದ ದೂರು ನೀಡಿದ್ದಾರೆ ಎಂದು ಮಾಜಿ ಶಾಸಕ ಜೀವರಾಜ್ ಆರೋಪಿಸಿದ್ದರು ಆ ಕೇಸ್ ಗೆ ಸಂಬಂಧಿಸದಂತೆ ಜೀವರಾಜ್ ಬೀಸಿದ ಆಮಿಷದ ಬಲೆಗೆ ನಾನು ಬಲಿಯಾಗಿ ಸಹಿ ಮಾಡಿದ್ದೇನೆ. ಜೀವರಾಜ್ ಅವರು ದೂರಿನ ವಿವರಣೆ ಅಥವಾ ಪ್ರತಿಯನ್ನಾಗಲಿ ನನಗೆ ತೋರಿಸಿಲ್ಲ. ಅವರ ಆಸ್ತಿ ಖರೀದಿ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನಾನು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದರು.

ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಹೋಬಳಿ ಹಲಸೂರಿನಲ್ಲಿ 211 ಎಕರೆ ಜಾಮೀನನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ತಮ್ಮ ಪತ್ನಿ ಮತ್ತು ಮಗನ ಹೆಸರಿನಲ್ಲಿ ಖರೀದಿಸಿದ್ದಾರೆ. ಪ್ರಸ್ತುತ ಶಭಾನ್ ರಂಜಾನ್ ಟ್ರಸ್ಟ್ನಲ್ಲಿ ನಾಲ್ವರು ಪಾಲುದಾರರಿದ್ದು, ಇಬ್ಬರು ನಿವೃತ್ತಿ ಹೊಂದುತ್ತಿದ್ದಂತೆ ಶಾಸಕರ ಪತ್ನಿ ಪಾಲುದಾರರಾಗುತ್ತಾರೆ. ಕೆಲವು ದಿನಗಳ ಬಳಿಕ ಮತ್ತಿಬ್ಬರು ನಿವೃತ್ತಿ ಹೊಂದಿದ್ದು, ಶಾಸಕರ ಮಗ ರಾಜ್ದೇವ್ ಟ್ರಸ್ಟ್ ಪ್ರವೇಶಿಸಲಿದ್ದಾರೆ. ಈ ಮೂಲಕ ಶಾಸಕರ ಪತ್ನಿ ಮತ್ತು ಮಗ ಅರ್ಧದಷ್ಟು ಪಾಲುದಾರಿಕೆ ಪಡೆಯಲಿದ್ದಾರೆ ಎಂದು ದೂರಿದ್ದರು.

ಇದಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಪನ ಪತ್ರದ (ಅಫಿಡವಿಟ್) ಮೂಲಕ ಸ್ಪಷ್ಟನೆ ನೀಡಿದ್ದ ವಕೀಲ ವಿಜಯಾನಂದ, ಜೀವರಾಜ್ ಅವರು ದೂರಿನ ಅರ್ಜಿಯ ವಿವರಣೆಯನ್ನು ನನಗೆ ನೀಡಿಲ್ಲ. ಅದರ ಪ್ರತಿಯನ್ನೂ ತೋರಿಸಿಲ್ಲ. ರಾಜೇಗೌಡ ಅವರ ಆಸ್ತಿ ಖರೀದಿ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. 

Chikkamagaluru: ‌ಚುನಾವಣಾ ರಣರಂಗದಲ್ಲಿ‌"ಹೋಂ ಮಿನಿಸ್ಟರ್" ಗಳ ಹವಾ!

ಜೀವರಾಜ್ ಅವರ ಒಡ್ಡಿದ ಆಮಿಷಕ್ಕೆ ಬಲಿಯಾಗಿ ಸಹಿ ಮಾಡಿದ್ದೆ. ಇದೀಗ ನಾನು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರು ವಾಪಸ್ ಪಡೆಯುತ್ತಿದ್ದೇನೆ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೊಳಗಾಗಿತ್ತು. ವಿಜಯಾನಂದ ಶಾಸಕರ ಡೀಲ್ ಗೆ ಒಳಗಾಗಿ ಲೋಕಾಯುಕ್ತದಿಂದ ಕೇಸ್ ವಾಪಾಸ್ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈಗ ವಿಜಯಾನಂದ್ ಶಾಸಕ ಟಿ.ಡಿ. ರಾಜೇಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದು ಮತ್ತಷ್ಟು ಚರ್ಚೆಗೊಳಗಾಗಿಸಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios