ಬಿಜೆಪಿ ತೆಕ್ಕೆಗೆ ಹುಬ್ಬಳ್ಳಿ ಧಾರವಾಡ ಪಾಲಿಕೆ, ಮೇಯರ್ ಆದ ವೀಣಾ: ಮತ್ತೆ ಸೋತ ಶೆಟ್ಟರ್- ಗೆದ್ದ ಜೋಶಿ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ವೀಣಾ ಚೇತನ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಧಾರವಾಡ (ಜೂ.20): ರಾಜ್ಯದ ದೊಡ್ಡ ಮಹಾನಗರ ಪಾಲಿಕೆಗಳಲ್ಲಿ ಒಂದಾದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ಮತ್ತೆ ಬಿಜೆಪಿ ತೆಕ್ಕೆಗೆ ಒಲಿದಿದೆ. ಈ ಮೂಲಕ ಪಾಲಿಕೆಯ 22ನೇ ಮೇಯರ್ ಆಗಿ ಶ್ರೀಮತಿ ವೀಣಾ ಚೇತನ ಬರದ್ವಾಡ ಹಾಗೂ ಉಪಮೇಯರ್ ಆಗಿ ಸತೀಶ್ ಹಾನಗಲ್ ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಪಾಲಿಕೆ ಬಿಜೆಪಿ ತೆಕ್ಕೆಗೆ ಒಲಿದಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 22ನೇ ಮಹಾಪೌರರಾಗಿ 49ನೇ ವಾರ್ಡ್ ಸದಸ್ಯೆ ಶ್ರೀಮತಿ ವೀಣಾ ಚೇತನ ಬರದ್ವಾಡ ಆಯ್ಕೆಯಾಗಿದ್ದಾರೆ. ಇನ್ನು ಉಪಮೇಯರ್ ಆಗಿ ಸತೀಶ್ ಹಾನಗಲ್ ಆಯ್ಕೆಯಾಗಿದ್ದಾರೆ, ಇಬ್ಬರೂ ಪರಸ್ಪರ 46 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧ್ಯಕ್ಷಾಧಿಕಾರಿ ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ ಪ್ರಕಟಣೆ ಹೊರಡಿಸಿದ್ದಾರೆ. ಮೇಯರ್ ವೀಣಾಚೇತನ ಹಾಗೂ ಉಪಮೇಯರ್ ಸತೀಶ್ ಹಾನಗಲ್‌ಗೆ ಹೂವಿನ ಬೊಕ್ಕೆ ಕೊಟ್ಟು ಚುನಾವಣಾ ಅಧಿಕಾರಿ ಅಭಿನಂದಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಸಚಿವ ಬೋಸರಾಜು, ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಕೊಟ್ಟ ಕಾಂಗ್ರೆಸ್
ಮತ್ತೆ ಸೋತ ಶೆಟ್ಟರ್ - ಗೆದ್ದ ಜೋಶಿ: ಇನ್ನು ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭೆ ಚುನಾವಣೆ ನಡೆದಿದ್ದು, ಬಿಜೆಪಿ ಭದ್ರಕೋಟೆಯನ್ನು ಕಟ್ಟಿದ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್‌ಗೆ ಹೋಗಿ ಸ್ಪರ್ಧೆ ಮಾಡಿದ್ದರು. ಆದರೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ತಮ್ಮದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶತಪ್ರಯತ್ನ ಮಾಡಿದ್ದರು. ಆದರೆ, ಈಗ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಮೇಯರ್, ಉಪಮೇಯರ್ ಆಗಿದ್ದಾರೆ. ಮತ್ತೊಮ್ಮೆ ಜಗದೀಶ್ ಶೆಟ್ಟರ್ ಅವರಿಗೆ ಸ್ಥಳೀಯವಾಗಿ ಹಿನ್ನಡೆಯಾಗಿದೆ. ಆದರೆ, ಈಗ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ನೀಡಿದ್ದು, ಇಂದು ನಾಮಪತ್ರವನ್ನೂ ಸಲ್ಲಿಕೆ ಮಾಡಿದ್ದಾರೆ. ಒಟ್ಟಾರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಥಳೀಯವಾಗಿ ಹೆಚ್ಚಿನ ಹಿಡಿತ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರವಾಗಿದೆ.
ಅಭಿನಂದನೆ ಕೋರಿದ ಮಾಜಿ ಸಿಎಂ ಬೊಮ್ಮಾಯಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಆಯ್ಕೆಯಾಗಿರುವ ನಮ್ಮ ಪಕ್ಷದ ಶ್ರೀಮತಿ ವೀಣಾ ಬಾರದ್ವಾಡ ಹಾಗೂ ಉಪಮಹಾಪೌರರಾಗಿ ಆಯ್ಕೆಯಾಗಿರುವ ಶ್ರೀ ಸತೀಶ ಹಾನಗಲ್ ರವರಿಗೆ ಹಾರ್ದಿಕ ಅಭಿನಂದನೆಗಳು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸತತ 12ನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಮಹಾಪೌರರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಈ ಸಾಧನೆಯ ಹಿನ್ನೆಲೆಯಲ್ಲಿ ಅವಿರತವಾಗಿ ಶ್ರಮಿಸಿರುವ ಸಮಸ್ತ ಕಾರ್ಯಕರ್ತ ಬಂಧುಗಳಿಗೆ ಹಾಗೂ ಪ್ರಮುಖರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಟ್ವಿಟರ್ ಮೂಲಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದನೆ ಕೋರಿದ್ದಾರೆ.
ಹಣಬಲದಿಂದ ಗೆಲ್ಲಲು ಸಾಧ್ಯವಿಲ್ಲ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಇವತ್ತು ಸುಲಲಿತವಾಗಿ ಜಯ ಸಾಧಿಸಿದೆ. 9 ಮತಗಳ ಅಂತರದಿಂದ ಜಯ ಸಾಧಿಸಿದೆ. ಮೇಯರ್, ಉಪಮೇಯರ್ ಸ್ಥಾನ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಪಕ್ಷ ಹಣ ಮತ್ತು ತೋಳಿನ ಬಲದಿಂದ ಬಿಜೆಪಿ ಸದಸ್ಯರನ್ನ ಸೆಳಿತಾ ಇತ್ತು. ನಾವು ಕಾಂಗ್ರೆಸ್ ಪಕ್ಷದ ಕನಸನ್ನ ದ್ವಂಸ ಮಾಡಿದ್ದೇವೆ. ನಾವು ಸಹಜವಾಗಿ ಮೆಜಾರಟಿಯಲ್ಲಿದ್ದೆವೆ. ಇನ್ನಾದರೂ ಕಾಂಗ್ರೆಸ್ ಪಕ್ಷ ಬುದ್ದಿ ಕಲಿಯಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟರು.
ನಾಳೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಎಲೆಕ್ಷನ್: ಬಿಜೆಪಿಗೆ ಟಕ್ಕರ್ ಕೊಡಲು ಜಗದೀಶ್ ಶೆಟ್ಟರ್ ಪ್ಲ್ಯಾನ್
ಮಹಾದೇವಪ್ಪ ನಿನಗೂ ಫ್ರೀ.. ಕಾಕಾ ಸಾಹೇಬ್ ನಿನಗೂ ಫ್ರೀ ಅಂದ್ರಲ್ಲ ಕೊಡಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕ್ಕೊಳ್ಳಬೇಕು, ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಾರೆ. ಭಾರತ ಸರ್ಕಾರ 5 ಕೇಜಿ ಅಕ್ಕಿಯನ್ನು 80 ಕೋಟಿ ಜನರಿಗೆ ಕೊಡುತ್ತಿದೆ. ಸಿದ್ದರಾಮಯ್ಯ ಅವರಿಗೆ ಕೇಂದ್ರದಿಂದ 5 ಕೆಜಿ ಅಕ್ಕಿ ಬರುತ್ತೆ ಅಂತ ಹೇಳುವಷ್ಟು ವ್ಯವಧಾನವೂ ಇಲ್ಲ. ಇನ್ನು 60 ಕೋಟಿ ಜನರು ಇದಾರೆ ಅವರಿಗೂ ಪ್ರಿಯಾಗಿ ಅಕ್ಕಿ ಕೊಡಬೇಕು. ನಾವು ಮಾರುಕಟ್ಟೆ ಮೂಲಕ ರಿಯಾಯಿತಿ ದರದಲ್ಲಿ ಅಕ್ಕಿ ಸಿಗುವ ಪಾಲಿಸಿಯನ್ನ ಮಾಡಿದ್ದೇವೆ. ಇದು ಬಿಜೆಪಿ ಆಡಳಿತ ಇರುವ ರಾಜ್ಯಕ್ಕೂ ಅನ್ವಯವಾಗಿದೆ. ಮಹಾದೇವಪ್ಪ ನಿನಗೂ ಫ್ರೀ.. ಕಾಕಾ ಸಾಹೇಬ್ ನಿನಗೂ ಪ್ರಿ ಅಂತ ಹೇಳುವಾಗ ನಿಮಗೆ ಗೊತ್ತಾಗಲಿಲ್ಲವಾ..? ಕೇಂದ್ರ ಸರ್ಕಾರ ಕೊಟ್ರೆ ಕೊಡುತ್ತೆವೆ ಅಂತ ಹೇಳಬೇಕಿತ್ತು. ಈಗ ಪ್ರತಿಭಟನೆ ಮಾಡಿ ಡೋಂಗಿತನ ಪ್ರದರ್ಶನ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳಿಗೆ ಅನುದಾನವನ್ನು ಸಮಾನ ರೀತಿಯಲ್ಲಿ ಕೇಂದ್ರ ಕೊಡುತ್ತಿದ್ದಾರೆ ಎಂದು ಹೇಳಿದರು.