Asianet Suvarna News Asianet Suvarna News

ಕಾಲು ಮುರಿದ ಕುದುರೆ ಕೊಟ್ಟ ಸಿದ್ದರಾಮಯ್ಯ ಮನೆ ಮುರುಕ: ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

ಕೊಟ್ಟ ಕುದುರೆಯ ಏರದವ ವೀರನೂ ಅಲ್ಲ, ಧೀರನೂ ಅಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಕಾಲ್ ಮುರುಕ ಕುದುರೆ ಕೊಟ್ಟು  ಏರು ಏರು ಎನ್ನುವವರನ್ನ ಮನೆ ಮುರುಕ ಎನ್ನುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

House destroyed Siddaramaiah have given leg broken horse HD Kumaraswamy alleged sat
Author
First Published Mar 2, 2023, 4:17 PM IST | Last Updated Mar 2, 2023, 4:41 PM IST

ಮೈಸೂರು (ಮಾ.02): ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಟ್ಟ ಕುದುರೆಯ ಏರದವ ವೀರನೂ ಅಲ್ಲ, ಧೀರನೂ ಅಲ್ಲ ಎಂದು ನನಗೆ ಹೇಳುತ್ತಾರೆ. ಆದರೆ, ಕಾಲ್ ಮುರುಕ ಕುದುರೆ ಕೊಟ್ಟು  ಏರು ಏರು ಎನ್ನುವವರನ್ನ ಮನೆ ಮುರುಕ ಎನ್ನುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಯಬೇಕಾದರೆ ಸಾಲ ಮನ್ನಾ ವಿಷಯದಲ್ಲಿ ಒಂದು ದಿನ ಸಲಹೆ ನೀಡಲಿಲ್ಲ. ಮೊದಲ ಅವಧಿಯ ಬಜೆಟ್ ಮಾಡಲು ನನಗೆ ತೊಂದರೆ ನೀಡಿದರು. ಗೋಗರೆದು ಬಜೆಟ್ ಮಂಡನೆ ಮಾಡಬೇಕಾದ ಪರಿಸ್ಥಿತಿ ಎದುರಾಯ್ತು. ಸರ್ಕಾರ ನನ್ನ ಕ್ಯಾಸೆಟ್ ಮಾಡದೆ ಇದ್ದರೆ ಎರಡನೇ ಬಜೆಟ್ ಮಂಡನೆ ಆಗುತ್ತಿರಲಿಲ್ಲ. 5 ವರ್ಷ ಮುಖ್ಯಮಂತ್ರಿ ಆಗಿದ್ದಾಗ ಮಧ್ಯಾಹ್ನದಿಂದ ಸಂಜೆವರೆಗೂ ಸಿದ್ದರಾಮಯ್ಯ ಸಿಗುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಕತ್ತೆಯಂತೆ ದುಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ರೂ.ಗಳನ್ನು ನೀಡಿದ್ದೆನು. ಈಗ ಎಲ್ಲಾ ಕಡೆಗಳಲ್ಲಿ ಭಾಷಣ ಮಾಡಿಕೊಂಡು ಓಡಾಡುತ್ತಿದ್ದಾರೆ. ಕೊಟ್ಟ ಕುದುರೆಯ ಏರದವ ವೀರನೂ ಅಲ್ಲ, ಧೀನೂ ಅಲ್ಲ ಅಂತ ಹೇಳ್ತಾರೆ. ಕಾಲ್ ಮುರುಕ ಕುದುರೆ ಕೊಟ್ಟು  ಏರು ಏರು ಎನ್ನುವವರನ್ನ ಮನೆ ಮುರುಕ ಎನ್ನುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸದ್ದಾರೆ.

ದೇವೇಗೌಡರ ಕುಟುಂಬಕ್ಕೆ ರೆಬಲ್ಸ್ ಕಾಟ: ಗೌಡರ ಗರಡಿಯಲ್ಲಿ ಪಳಗಿದವರೇ ಬಂಡೇಳೋದ್ಯಾಕೆ..?

ಕಾಂಗ್ರೆಸ್‌ ನನ್ನನ್ನು ಹೀನಾಯವಾಗಿ ನೋಡಿದೆ: ಸಮ್ಮಿಶ್ರ ಸರ್ಕಾರ ಇದ್ದಾಗ ಶಾಸಕಾಂಗ ಪಕ್ಷದ ಅಭೆ ಜಾರ್ಜ್ ಅವರ ಖಾಸಗಿ ಹೋಟೆಲ್ ಅಲ್ಲಿ ಮಾಡಿದ್ದರು. ಸಭೆಗೆ ನನ್ನ ಕರೆದ್ರು ನಾನು ಹೋದೆ. ಸೌಜ್ಯನಕ್ಕು ನನ್ನ ಒಳಗೆ ಕರೆಯಲಿಲ್ಲ. ಅಬ್ಬೇಪಾರಿ ತರ ಹೊರಗೆ ನಿಂತಿದ್ದೆನು. ನಾನು ಯಾಕೆ ಅಲ್ಲಿ ಹೋದೆ ಅಂತ ಈಗಲೂ ನನಗೆ ಗೊತ್ತಿಲ್ಲ. ಇದು ಅವತ್ತಿನ ನನ್ನ ಪರಿಸ್ಥಿತಿ, ಕಾಂಗ್ರೆಸ್ ನನ್ನನ್ನು ಹೀನಾಯವಾಗಿ ನೋಡಿತು. ಒಬ್ಬ ಮುಖ್ಯಮಂತ್ರಿಯಾಗಿ ನಾನು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೆನು. ಬೆಳಗ್ಗೆ 8 ರಿಂದ ಜನರಿಗಾಗಿ ದುಡಿದೆ. ಆದರೂ ನನ್ನ ತಾಜ್ ಹೋಟೆಲ್ ಅಲ್ಲಿ ಕೂತಿದ್ದರು ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದರು ಎಂದು ಹೇಳಿದರು.

ಕಾಂಗ್ರೆಸ್‌ ಜೊತೆಗಿನ ಸರ್ಕಾರ ಒಂದು ತೃಪ್ತಿ ತಂದಿದೆ: ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡಿ ತಪ್ಪು ಮಾಡಿದೆ ಎನಿಸಿದರೂ, ರೈತರ ಸಾಲಮನ್ನಾ ಮಾಡಿದ ತೃಪ್ತಿ ಇದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಲು ಪ್ರಯತ್ನಿಸಿದರು. ಆದ್ರೆ ನನ್ನ ಇಮೇಜ್ ಎಲ್ಲೂ ಕಡಿಮೆ ಆಗಿಲ್ಲ. ಈ ಬಾರಿ ಯಾರೊಂದಿಗೂ ಹೊಂದಾಣಿಕೆ‌ ಮಾಡಿಕೊಳ್ಳಲ್ಲ. 120 ಸ್ಥಾನ ಬರುವ ವಿಶ್ವಾಸ ಇದೆ. ಅಂದು ಬಿಜೆಪಿ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿದಾಗ ಈ ಬಿಜೆಪಿ ಇರಲಿಲ್ಲ. ಈಗ ಬಿಜೆಪಿಗರು ಸಹ ಅಧಿಕಾರದ ರುಚಿ ನೋಡಿದ್ದಾರೆ. ಈಗ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಆಗಿದೆ. ಅಂದು ಸಮ್ಮಿಶ್ರ ಸರ್ಕಾರ ಮಾಡದೆ ಇದ್ದಿದ್ದರೆ ಕೋಲಾರದಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಟ್ರ್ಯಾಪ್ ಆಗಿದ್ದಂತು ಸತ್ಯ. ಕಾಂಗ್ರೆಸ್ಸಿಗೆ ನಮ್ಮಿಂದ ಹೆಲ್ಪ್‌ ಆಗಿದೆ, ಅವರಿಂದ ಜೆಡಿಎಸ್ ಪಕ್ಷಕ್ಕೆ ಹೆಲ್ಪ್ ಆಗಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ 7 ಕೆಜಿ ಅಕ್ಕಿಯ ಆರ್ಥಿಕ ಹೊರೆ ನಾನು ಭರಿಸಿದ್ದೇನೆ: ಕಾಂಗ್ರೆಸ್ ನಾಯಕರು ನಗರ ಪ್ರದೇಶದಲ್ಲಿ ಪ್ರಜಾಧ್ವನಿ ಮಾಡುವುದಲ್ಲ. ತಾಲೂಕುಗಳಲ್ಲಿ 500 ರೂ. ಕೊಟ್ಟು ಜನರನ್ನ ತರುವುದಲ್ಲ, ಬದಲಾಗಿ ಹಳ್ಳಿಗಳಿಗೆ ಹೋಗಿ. ಹಲವಾರು ಭಾಗ್ಯಗಳನ್ನ ಕೊಟ್ಟು ಸಮಾಜವನ್ನ ಉದ್ದಾರ ಮಾಡಿದ್ದೇನೆ ಎನ್ನುತ್ತಾರೆ. ದಿನ ಬೆಳಗಾದರೆ ದಲಿತ ಸಮುದಾಯದ ಜನ ನನ್ನ ಮನೆಯ ಮುಂದೆ ಜನರು ಬಂದು ಸಮಸ್ಯೆ ಹೇಳುತ್ತಾರೆ. ಕಾಂಗ್ರೆಸ್ ನಾಯಕರು ಘೋಷಣೆ ಮಾಡಿರುವ ಉಚಿತ ವಿದ್ಯುತ್, 2000 ರೂ. ಕಾರ್ಯಕ್ರಮ ರೂಪಿಸಲು 48 ಸಾವಿರ ಕೋಟಿ ರೂ. ಬೇಕು. ಕಾಂಗ್ರೆಸ್ ಸರ್ಕಾರದಲ್ಲಿ 7 ಕೆಜಿ ಕೊಡುವುದಾಗಿ ಘೋಷಣೆ ಮಾಡಿದರು. ಕೇವಲ 5 ಕೆಜಿಗೆ ಆಗುವಷ್ಟು ಹಣ ಮಾತ್ರ ಕೊಟ್ಟರು. 2 ಕೆಜಿ ಹೊರೆ ನನ್ನ ಮೇಲೆ ಬಿತ್ತು. ಅವರೇನೋ ತಿಂತಾರೆ ಅಂತದ್ದನ್ನ ನಮ್ಮ ಜನಕ್ಕೆ ನೀವೇಕೆ ತಿನ್ನಿಸುತ್ತೀರಾ? ಎಂದರು. 

ರಾಜ್ಯದಲ್ಲಿ ಮೋದಿ, ನಡ್ಡಾ, ಅಮಿತ್‌ ಶಾ ಬಿಜೆಪಿಯಿದೆ:  ಪೆಟ್ರೋಲ್ ಬೆಲೆ ಏರಿಕೆ ಪ್ರಶ್ನಿಸಿದರವನ್ನ ಪಾಕಿಸ್ತಾನಕ್ಕೆ ಹೋಗಿ ಎಂದು ಬಿಜೆಪಿಗರು ಹೇಳುತ್ತಾರೆ. ಮೋದಿ ಕರ್ನಾಟಕಕ್ಕೆ ಬಂದರು ಅವರು ಕರ್ನಾಟಕಕ್ಕೆ ಮಾಡಿದ ಕೆಲಸಗಳು, ರೈತರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಪಕ್ಷ ಕಟ್ಟಿದ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಅವರ ಕಾಲು ಮುರಿದು ಮೂಲೆಗುಂಪು ಮಾಡಿದ್ದಾರೆ. ಸತ್ತು ಸ್ವರ್ಗ ಸೇರಿರುವ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರನ್ನ ಸ್ಮರಿಸುತ್ತಿದ್ದಾರೆ. ಈಗ ಇರುವುದು ಕರ್ನಾಟಕದ ಬಿಜೆಪಿ ಅಲ್ಲ ಅಮಿತ್ ಶಾ, ನಡ್ಡಾ ಹಾಗೂ ಮೋದಿ ಬಿಜೆಪಿ ಎಂದರು.

ರಾಜಕೀಯ ವೈರಾಗ್ಯದ ಮಾತಾಡಿದ ಕುಮಾರಣ್ಣ: ದಳಪತಿ ಮಾತಿನ ಗೂಡಾರ್ಥ ಏನು?

ಡಿಕೆ ಬ್ರದರ್ಸ್‌ ದೇವೇಗೌಡರನ್ನು ಸೋಲಿಸಲು ಮಾಡಿದ ಯತ್ನ ಗೊತ್ತಿದೆ: ದೇವೇಗೌಡರಿಗೆ ರಾಮನಗರದಲ್ಲಿ ಗೌರವ ಕೊಟ್ಟಿದ್ದೇನೆ ಎಂದು ಡಿಕೆ ಬ್ರದರ್ಸ್ ಹೇಳಿಕೊಂಡಿದ್ದಾರೆ. ದೇವೇಗೌಡರನ್ನ ಸೋಲಿಸಲೇಬೇಕು ಎಂದು ರಾಮನಗರದಲ್ಲಿ ಏನೆಲ್ಲಾ ಪ್ರಯತ್ನ ಮಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರ ಕಾಯಿಲೆ ಇದೀಗ ಅಮಿತ್ ಶಾ ಅವರಿಗೂ ಶುರುವಾಗಿದೆ. ಜೆಡಿಎಸ್‌ ಅವರಿಗೆ ಮತ ನೀಡಿದರೆ ಕಾಂಗ್ರೆಸ್ ಅವರಿಗೆ ಮತ ನೀಡಿದಂತೆ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರ ಇತಿಹಾಸ ನೋಡಿದರೆ ಹೇಗಿದ್ದವರು ಏನಾಗಿದ್ದಾರೆ ಗೊತ್ತಿದೆ. ಬಿಜೆಪಿಗರಿಗಾಗಿ ಹತ್ತಾರು ಪರಪ್ಪನ ಅಗ್ರಹಾರ ಕಟ್ಟಬೇಕಾಗುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪಕ್ಷದ ಬಗ್ಗೆ ಚಿಂತೆ ಏಕೆ? ನಾನು ಎಲ್ಲೂ ಸಹ ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ವೋಟ್ ಹಾಕ್ಬೇಡಿ ಎಂದು ಎಲ್ಲೂ ಹೇಳಿಲ್ಲ ಎಂದರು.

Latest Videos
Follow Us:
Download App:
  • android
  • ios