ಜೈಪುರ(ಜು.18): ರಾಜಸ್ಥಾನ ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷಗಿರಿಯಿಂದ ಸಚಿನ್‌ ಪೈಲಟ್‌ರನ್ನು ಪದಚ್ಯುತಗೊಳಿಸುವುದಕ್ಕೂ ಮುನ್ನ, ಅವರ ಜೊತೆ ಪ್ರಿಯಾಂಕಾ ಗಾಂಧಿ 3 ತಾಸು ಚರ್ಚಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಪೈಲಟ್‌ ಆಪ್ತರು, ಸಚಿನ್‌ ಜೊತೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ 3 ತಾಸು ಮಾತುಕತೆ ನಡೆಸಿದ್ದರು. ಪೈಲಟ್‌ ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡು, ತಮ್ಮ ದು:ಖವನ್ನು ಹಂಚಿಕೊಂಡರು. ಈ ಬಗ್ಗೆ ಸೋನಿಯಾ ಹಾಗೂ ರಾಹುಲ್‌ ಗಾಂಧಿ ಜತೆ ಮಾತನಾಡುವುದಾಗಿಯೂ ಪ್ರಿಯಾಂಕ ಭರವಸೆಯನ್ನೂ ನೀಡಿದ್ದರು. ಇದಾದ ಮೂರೇ ಗಂಟೆಗಳಲ್ಲಿ ಪೈಲಟ್‌ ಹಾಗೂ ಇತರ ಬಂಡುಕೋರ ಶಾಸಕರನ್ನು ಪದಚ್ಯುತಗೊಳಿಸಲಾಯ್ತು ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯತ್ತ ಸಚಿನ್ ಪೈಲಟ್: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಪತನ?

ಪೈಲಟ್‌ಗೆ 4 ದಿನಗಳ ಜೀವದಾನ

ರಾಜಸ್ಥಾನ ರಾಜಕೀಯ ಬೃಹನ್ನಾಟಕ ಮುಂದುವರಿದಿದ್ದು, ಬಂಡುಕೋರ ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಹಾಗೂ 18 ಬೆಂಬಲಿಗ ಶಾಸಕರಿಗೆ 4 ದಿನಗಳ ‘ಜೀವದಾನ’ ಲಭಿಸಿದೆ. ಶಾಸಕರಿಗೆ ನೀಡಲಾದ ಅನರ್ಹತೆ ನೋಟಿಸ್‌ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್‌ ಸೋಮವಾರಕ್ಕೆ ಮುಂದೂಡಿದೆ. ಅಲ್ಲದೆ, ಶಾಸಕರ ಅನರ್ಹತೆ ಕುರಿತಂತೆ ಮಂಗಳವಾರ ಸಂಜೆಯವರೆಗೆ ಯಾವುದೇ ಕ್ರಮ ಜರುಗಿಸದಂತೆ ಸೂಚಿಸಿದೆ.

‘ವಿಧಾನಸಭೆ ಅಧಿವೇಶನ ಪ್ರಗತಿಯಲ್ಲಿ ಇಲ್ಲದೇ ಇರುವ ಸಂದರ್ಭದಲ್ಲಿ ತಮಗೆ ವಿಪ್‌ ಜಾರಿ ಮಾಡಲು ಅಧಿಕಾರವಿಲ್ಲ. ಹೀಗಾಗಿ ವಿಪ್‌ ಉಲ್ಲಂಘನೆ ಆರೋಪದಲ್ಲಿ ತಮಗೆ ಅನರ್ಹತೆ ನೋಟಿಸ್‌ ಜಾರಿ ಮಾಡಲು ಬರುವುದಿಲ್ಲ’ ಎಂಬುದು 19 ಬಂಡಾಯ ಶಾಸಕರ ವಾದ.

ರಾಜಸ್ಥಾನ ಬೆನ್ನಲ್ಲೇ 'ಕೈ'ಪಡೆಗೆ ಮತ್ತೊಂದು ಆಘಾತ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ MLA

ಈ ಕುರಿತು ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ವಿಭಾಗೀಯ ಪೀಠ, ಸೋಮವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆ ಮುಂದೂಡಿತು. ಈ ನಡುವೆ, ಶುಕ್ರವಾರ ಸಂಜೆ 5 ಗಂಟೆಗೆ ಅನರ್ಹತೆ ನೋಟಿಸ್‌ ಕುರಿತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಸ್ಪೀಕರ್‌ ಸಿ.ಪಿ. ಜೋಶಿ ಅವರು ಮಂಗಳವಾರ ಸಂಜೆ 5ರರವೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು. ಹೀಗಾಗಿ ಅಲ್ಲಿಯವರೆಗೆ ಜೀವದಾನ ಲಭಿಸಿದಂತಾಯಿತು.