ಬೆಂಗಳೂರು [ಆ.21]:  ಬಿಜೆಪಿ ಸೇರಿ ತಪ್ಪು ಮಾಡಿದೆ ಎಂಬ ಭಾವನೆ ಮೂಡಿದೆ. ಹಿಂದೆ ಪಕ್ಷಕ್ಕೆ ದಕ್ಷಿಣ ಭಾರತದ ಹೆಬ್ಬಾಗಿಲು ತೆರೆಯಲು ಕಾರಣನಾದ ನನ್ನ ತ್ಯಾಗ ನೆನೆಯದೆ ಪಕ್ಷ ಅನ್ಯಾಯ ಮಾಡಿದೆ ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿ ಹಟ್ಟಿ ಶೇಖರ್ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು ತಮ್ಮ ಮನದೊಳಗಿನ ಬೇಗುದಿಯನ್ನು
ಮಾತಿನ ಮೂಲಕ ಹೊರಹಾಕಿದರು.

ನನಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಅಶೋಕ್ ಹೊರತುಪಡಿಸಿದರೆ ಬಿಜೆಪಿಯಲ್ಲಿ ಯಾರೂ ಪರಿಚಯವಿಲ್ಲ. ಹೈಕಮಾಂಡ್ ಸಂಪರ್ಕವಂತೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ನನ್ನ ಮಾತು ಯಾರು ಕೇಳು ತ್ತಾರೆ? ಈಗಂತೂ ನನಗೆ ಬಿಜೆಪಿ ಸೇರಿ ಬಹಳ ತಪ್ಪು ಮಾಡಿದೆ ಎಂಬ ಭಾವನೆ ಹುಟ್ಟಿದೆ. ನನ್ನ ಕ್ಷೇತ್ರದಲ್ಲಿ ನನ್ನದೇ ಆದ ಮತಗಳಿವೆ.

ನಿನ್ನೆಯೂ ಇದ್ದವು, ಇವತ್ತು ಇವೆ, ನಾಳೆನೂ ಅವು ಇರುತ್ತವೆ. ಬಿಜೆಪಿ ಸೇರಿದ ಬಳಿಕ ಆ ಮತಗಳಿಗೆ ಅಲ್ಪಸ್ವಲ್ಪ ಬೇರೆ ಮತಗಳು ಕೂಡಿಕೊಂಡಿವೆ. ನಾನು ಸ್ವತಂತ್ರನಾಗಿ ಸ್ಪರ್ಧಿಸಿದ್ದಾಗಲೂ 30 - 40 ಸಾವಿರ ಮತ ಗಳನ್ನು ಪಡೆದಿದ್ದೇನೆ. ಹೀಗಾಗಿ ನಾನು ಪಕ್ಷ ನೆಚ್ಚಿಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಗುಟುರು ಹಾಕಿದರು.

ಈಗ ಸಚಿವ ಸ್ಥಾನ ವಂಚಿತರ ಕಣ್ಣು ಎತ್ತ? ಮತ್ತೊಂದು ಆಫರ್

ಹಿಂದೆ 2008 ರಲ್ಲಿ ನನ್ನ ಬೆಂಬಲ ಇಲ್ಲದೆ ಹೋಗಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲ್ಲಿಲ್ಲ. ಆ ಪಕ್ಷಕ್ಕೆ ದಕ್ಷಿಣ ಭಾರತದ ಹೆಬ್ಬಾಗಿಲು ತೆರೆಯಲು ನನ್ನ ತ್ಯಾಗವೇ ಕಾರಣವಾಯಿತು. ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ ಅಂದು ಬೆಂಬಲ ವ್ಯಕ್ತಪಡಿಸಿದ್ದೆ. ಆನಂತರ ನನ್ನನ್ನು  ಬಹಳ ಕೆಟ್ಟದಾಗಿ ನಡೆಸಿಕೊಂಡರು. ಅವತ್ತು ಕ್ಷೇತ್ರದಲ್ಲಿ ಕಾನ್‌ಸ್ಟೇಬಲ್ ವರ್ಗಾವಣೆ ಮಾಡಿಸಲು ಕೂಡ ಸಾಧ್ಯವಾಗಲಿಲ್ಲ. ಅಂದಿನ ಅನ್ಯಾಯವನ್ನು ಇಂದು ಸರಿಪಡಿಸುವಂತೆ ಕೋರಿದೆ. ಹಳೆಯ ತ್ಯಾಗ ನೆನೆಯದೆ ವರಿಷ್ಠರು ನನಗೆ ಮತ್ತೆ ಅನ್ಯಾಯ ಮಾಡಿದರು ಎಂದು ಕಠಿಣ ಶಬ್ದಗಳಿಂದ ಟೀಕಿಸಿದರು.