1967ಕ್ಕೂ ಮುನ್ನ ಏಕ ಚುನಾವಣೆ ಇತ್ತು|  ಸಭಾಧ್ಯಕ್ಷರ ವಿರುದ್ಧ ಕಾಂಗ್ರೆಸ್‌ ಶಾಸಕರು ನಡೆದುಕೊಂಡ ರೀತಿ ಅಕ್ಷಮ್ಯ ಅಪರಾಧ| ಕಾಂಗ್ರೆಸ್‌ ವೈಚಾರಿಕವಾಗಿ ದಿವಾಳಿ| ಕಾಂಗ್ರೆಸ್‌ಗೆ ದೇಶದ ಅಭಿವೃದ್ಧಿ ಬೇಕಿಲ್ಲ| ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ| 

ಬೆಂಗಳೂರು(ಮಾ.05):  ಸಂವಿಧಾನ ತಿರುಚಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ವ್ಯವಸ್ಥೆಯನ್ನು ಇಬ್ಭಾಗ ಮಾಡಿದ್ದೆ ಕಾಂಗ್ರೆಸ್‌ ಸರ್ಕಾರ. ಆ ತಪ್ಪು ಸರಿಪಡಿಸಲು ಬಿಜೆಪಿ ಯತ್ನಿಸುತ್ತಿದ್ದರೆ ಇದೀಗ ವಿರೋಧ ಮಾಡುತ್ತಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗುರುವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 1967ಕ್ಕೂ ಮುನ್ನ ದೇಶದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆಯಿತ್ತು. ಬಳಿಕ ಏಳು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಬಂದ ಕಾರಣ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆಯನ್ನು ರದ್ದುಪಡಿಸಿತ್ತು. ಹಿಂದೆ ಆಗಿರುವ ತಪ್ಪನ್ನು ಸರಿಪಡಿಸಲು ಯತ್ನಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ದಿ.ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಹಿಂದೆ ಕೇಂದ್ರ ಚುನಾವಣಾ ಆಯುಕ್ತರಾಗಿದ್ದ ಖುರೇಷಿ ಸೇರಿ ಹಲವು ಗಣ್ಯರು ಮಾತನಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಹೊಸದಾಗಿ ಮಾತನಾಡುತ್ತಿಲ್ಲ ಎಂದು ತಿಳಿಸಿದರು.

ಸಿದ್ದು ಉಲ್ಟಾ:

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಂದು ರಾಷ್ಟ್ರ, ಒಂದು ಚುನಾವಣೆ ಪದ್ಧತಿಯನ್ನು ಸ್ವಾಗತಿಸುವುದಾಗಿ ಹೇಳಿದ್ದರು. ಇದೀಗ ವಿಪಕ್ಷ ಸ್ಥಾನದಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

'ಬೆಲೆ ಏರಿಕೆಗೆ ಪರಿಹಾರ ಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು'

ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಪ್ರತಿಪಕ್ಷದ ಒಬ್ಬ ಶಾಸಕರಿದ್ದು, ಅವರ ಒಪ್ಪಿಗೆ ಪಡೆದು ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯವನ್ನು ಚರ್ಚೆಗೆ ನಿಗದಿಪಡಿಸಲಾಗಿತ್ತು. ವಿರೋಧ ಇದ್ದರೆ ಚರ್ಚೆಯಲ್ಲಿ ಭಾಗವಹಿಸಿ ವಿರೋಧ ಮಾಡಲಿ. ಇದೀಗ ಕುಂಟು ನೆಪ ಹೇಳಿ ಕಲಾಪದ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ಕರ್ನಾಟಕ ವಿಧಾನಮಂಡಲ ಕಲಾಪದ ಇತಿಹಾಸದಲ್ಲಿಯೇ ಕಾರಣ ಇಲ್ಲದೆ, ವಿಧಾನಸಭಾ ಅಧ್ಯಕ್ಷರ ವಿರುದ್ಧ ಧರಣಿ ನಡೆಸಿರುವ ದಾಖಲೆ ಇಲ್ಲ. ಆದರೆ ಕಾಂಗ್ರೆಸ್‌ ಸದನದಲ್ಲಿ ಕೆಟ್ಟದಾಗಿ ನಡೆದುಕೊಂಡಿದೆ. ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರ ಹಕ್ಕು ಮೊಟಕುಗೊಳಿಸಿದ್ದಾರೆ. ಕಾನೂನು ಬಾಹಿರವಾಗಿ ಸದನವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್‌ ನಡೆಸಿದೆ ಎಂದು ಛೇಡಿಸಿದರು.

ಸಭಾಧ್ಯಕ್ಷರ ವಿರುದ್ಧ ಕಾಂಗ್ರೆಸ್‌ ಶಾಸಕರು ನಡೆದುಕೊಂಡ ರೀತಿ ಅಕ್ಷಮ್ಯ ಅಪರಾಧ. ಕಾಂಗ್ರೆಸ್‌ ವೈಚಾರಿಕವಾಗಿ ದಿವಾಳಿಯಾಗಿದೆ. ಯಾವುದೇ ಕಾರಣ ಇಲ್ಲದೆ, ಸದನವನ್ನು ದುರುಪಯೋಗ ಮಾಡಿಕೊಂಡಿರುವುದು ಪ್ರಜಾಪ್ರಭುತ್ವದ ವಿರೋಧಿ. ಕಾಂಗ್ರೆಸ್‌ಗೆ ದೇಶದ ಅಭಿವೃದ್ಧಿ ಬೇಕಿಲ್ಲ. ಕೇವಲ ತಮ್ಮ ವೈಫಲ್ಯ, ಸೋಲು, ಪ್ರಜಾಪ್ರಭುತ್ವ ವಿರೋಧಿಯನ್ನು ಮುಚ್ಚಿಕೊಳ್ಳುವ ಪ್ರಯತ್ನ. ಹತಾಶೆಯಿಂದಾಗಿ ಆ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ ಎಂದರು.