ರಾಜಕೀಯ ಕಾರಣಕ್ಕಾಗಿ ಮೀಸಲಾತಿಯನ್ನು ಅದಲು ಬದಲು ಮಾಡಲು ಹೋಗಿ ಜಿಪಂ, ತಾಪಂ ಚುನಾವಣೆಯನ್ನು ಅನಗತ್ಯವಾಗಿ ಮುಂದೂಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆಯ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಆರೋಪಿಸಿದರು.

ಮೈಸೂರು (ಫೆ.13): ರಾಜಕೀಯ ಕಾರಣಕ್ಕಾಗಿ ಮೀಸಲಾತಿಯನ್ನು (Reservation) ಅದಲು ಬದಲು ಮಾಡಲು ಹೋಗಿ ಜಿಪಂ, ತಾಪಂ ಚುನಾವಣೆಯನ್ನು ಅನಗತ್ಯವಾಗಿ ಮುಂದೂಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆಯ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ (HC Mahadevappa) ಆರೋಪಿಸಿದರು.

ಕಾಂಗ್ರೆಸ್‌ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಸ್ಸಿ, ಎಸ್ಟಿಗೆ ಮಾತ್ರ ಮೀಸಲು, ಹಿಂದುಳಿದ ವರ್ಗಗಳಿಗೆ ಇಲ್ಲವೆಂದು ಸುಪ್ರೀಂಕೋರ್ಟ್‌ (Supreme Court) ಹೇಳಿರುವುದರಿಂದ ಸದ್ಯಕ್ಕೆ ತಾಪಂ ಮತ್ತು ಜಿಪಂ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ಅನುಮಾನ ವ್ಯಕ್ತಪಡಿಸಿರುವುದನ್ನು ನೋಡಿ ಬೇಸರವಾಗಿದೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು ನೀಡುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಸರಿಯಾದ ವಾದ ಮಂಡನೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಈ ಮೂಲಕ ಹಿಂದುಳಿದ ವರ್ಗಗಳ ನಾಯಕತ್ವವನ್ನು ಹೊಸಕಿ ಹಾಕುವ ಹುನ್ನಾರ ಮಾಡಲಾಗಿದೆ. ರಾಜ್ಯಪಾಲರು ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕೈ ತಪ್ಪಿರುವ ಬಗ್ಗೆ ವರದಿ ಪಡೆದು ಚುನಾವಣೆ ನಡೆಸಲು ಸರ್ಕಾರ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ದಿಲ್ಲಿಯಿಂದ ಬಂತು ಆಹ್ವಾನ, ಮನಸ್ಸು ಬದಲಿಸಿ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ ಸಿಎಂ ಇಬ್ರಾಹಿಂ?

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟಜಾತಿಗೆ ಶೇ.18, ಪರಿಶಿಷ್ಟಪಂಗಡಕ್ಕೆ ಶೇ.7 ಮತ್ತು ಹಿಂದುಳಿದ ವರ್ಗಗಳಿಗೆ ಶೇ.27ರಷ್ಟುಮೀಸಲಾತಿ ನೀಡಲಾಗಿದೆ. ರಾಜ್ಯದಲ್ಲಿ ಶೇ.52 ರಷ್ಟುಮೀಸಲಾತಿಗೆ ನೀಡಿರುವ ವರದಿ ತಿರಸ್ಕರಿಸಿರುವುದು ಸರಿಯಲ್ಲ. ಸುಪ್ರೀಂಕೋರ್ಟ್‌ ನಿರ್ದೇಶನ ಇಲ್ಲದೆ ಹಾಗೂ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಅಂತ ಹೇಳಿರುವುದು ಸರಿಯಲ್ಲ ಎಂದು ಖಂಡಿಸಿದರು.

2010ರಲ್ಲಿ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸರಿಯಾದ ರೀತಿಯಲ್ಲಿ ವಾದ ಮಂಡನೆ ಮಾಡದೆ ಇದ್ದಿದ್ದರಿಂದ ಈ ಸಮಸ್ಯೆಯಾಗಿದೆ. ಹಿಂದುಳಿದ ವರ್ಗಗಳನ್ನು ರಾಜಕೀಯವಾಗಿ ತುಳಿಯುವ ಕೆಲಸ ಮಾಡಲಾಗುತ್ತಿದೆ. ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು. ಪ್ರಧಾನಿ ಮೋದಿ ಅವರು ಬರೀ ಮಾತಿನಲ್ಲಿ ಹಿಂದುಳಿದ ವರ್ಗಗಳ ಪರ ಎನ್ನುವುದನ್ನು ಬಿಟ್ಟು ಮೀಸಲಾತಿ ನೀಡಿ ರಾಜಕೀಯ ಅವಕಾಶ ಕಲ್ಪಿಸಲಿ ಎಂದು ಒತ್ತಾಯಿಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮುಖಂಡರಾದ ಮಂಜುನಾಥ್‌, ಎಂ. ಶಿವಣ್ಣ ಮೊದಲಾದವರು ಇದ್ದರು.

ಶ್ವೇತಪತ್ರ ಹೊರಡಿಸಲಿ: ವಸತಿ ಯೋಜನೆ ಕುರಿತಂತೆ ಆಗಿರುವ ಪ್ರಗತಿ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ ಅವರು ಶ್ವೇತ ಪತ್ರ ಹೊರಡಿಸಲಿ. ನಮ್ಮ ಅವಧಿಯಲ್ಲಿ ತಪ್ಪು ಆಗಿದ್ದರೆ ಅದನ್ನು ಸರಿಪಡಿಸಲು ಮೂರು ವರ್ಷಗಳು ಬೇಕಾಯಿತೇ?. ಎಷ್ಟುಮನೆಗಳನ್ನು ಹಂಚಿಕೆ ಮಾಡಿದ್ದಾರೆ?, ಹೊಸದಾಗಿ ಎಷ್ಟುಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎನ್ನುವ ದಾಖಲೆಗಳನ್ನು ನೀಡಲಿ. ಚರ್ಚೆ ಮಾಡುವುದಕ್ಕಿಂತ ಸಾರ್ವಜನಿಕರಿಗೆ ಮಾಹಿತಿ ಕೊಡಲಿ ಎಂದು ಅವರು ಆಗ್ರಹಿಸಿದರು.

ಇಬ್ರಾಹಿಂ ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ : ಎಚ್.ಸಿ.ಮಹದೇವಪ್ಪ ಸಂಧಾನ ಮಾತುಕತೆ

ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಿಗೆ ವಿರೋಧ: ಟಿಪ್ಪು ಎಕ್ಸ್‌ಪ್ರೆಸ್‌ ರೈಲಿಗೆ ಒಡೆಯರ್‌ ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆ ಮಾಡಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಮನವಿಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಹೊಸ ಯೋಜನೆಗೆ ಬೇಕಿದ್ದರೆ ಯಾರ ಹೆಸರನ್ನಾದರೂ ಇಟ್ಟುಕೊಳ್ಳಲಿ. ಒಂದು ಸಮುದಾಯದ ರಾಜರಾಗಿ ಅನೇಕ ಕೊಡುಗೆಗಳನ್ನು ನೀಡಿರುವ ಅವರ ಹೆಸರನ್ನು ಮತ್ತು ಸಮುದಾಯವನ್ನು ವಿರೋಧಿಸಲು ಇಂತಹ ನಿರ್ಧಾರ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.