ಬೆಂಗಳೂರು, (ಡಿ.01): ಜೆಡಿಎಸ್‌ನಲ್ಲಿ ನಾಯಕತ್ವ ಬದಲಾವಣೆ ಸದ್ದು ಜೋರಾಗಿದ್ದು. ನಾಯಕತ್ವ ತ್ಯಜಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಅಂದಹಾಗೆ ಇದು ಎಚ್ ಡಿ ಕುಮಾರಸ್ವಾಮಿ ಅಲ್ಲ. ಬದಲಿಗೆ ರಾಜ್ಯಾಧ್ಯಕ್ಷರಾದ ಎಚ್ ಕೆ ಕುಮಾರಸ್ವಾಮಿ. ಹೌದು...ರಾಜ್ಯಾಧ್ಯಕ್ಷ ಸ್ಥಾನ ನಂಗೆ ಬೇಡವೇ ಬೇಡ ಎಂದು ಎಚ್ ಕೆ ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠರ ಮುಂದೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ದತ್ತಾ ಸ್ಪಷ್ಟನೆ, ಜೊತೆಗೆ ಎಚ್‌ಡಿಕೆಗೊಂದು ಕಿವಿಮಾತು..!

ಎರಡು ಉಪ ಚುನಾವಣೆಗಳ ಸೋಲು, ಮತ್ತು 4 ಪರಿಷತ್ ಸ್ಥಾನಗಳಲ್ಲಿ ಜೆಡಿಎಸ್ ಸೋಲು ಕಂಡಿದೆ. ಈ ಸೋಲುಗಳ ನೆಪದಲ್ಲಿ ಎಚ್ ಕೆ ಕುಮಾರಸ್ವಾಮಿ ಅವರು ರಾಜೀನಾಮೆ ಮಾತನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮೊದಲಿಗೆ ವರಿಷ್ಠರ ಬಳಿ ಈ ವಿಚಾರ ಪ್ರಸ್ತಾಪ ಮಾಡಿದ್ದು,  ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೇವಲ ಹೆಸರಿಗಷ್ಟೇ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸಕಲೇಶಪುರದಿಂದ 7 ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಎಚ್ ಕೆ ಕುಮಾರಸ್ವಾಮಿ ಅವರು ಕಳೆದ ಮೈತ್ರಿ ಸರ್ಕಾರ ದ ಅವಧಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಕೂಡಾ ಆಗಿದ್ದರು. ಆದರೆ ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ.  ಈ ಅಸಮಾಧಾನ ಶಮನ ಮಾಡಲೆಂದೇ ಎಚ್‌ಡಿ ದೇವೇಗೌಡ ಅವರು  ಎಚ್ ಕೆ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದರು.

ಇದೀಗ ಮತ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಖಾಲಿಯಾಗಲಿದ್ದು, ಮತ್ತೆ ಎಚ್‌ಡಿ ಕುಮಾರಸ್ವಾಮಿ ಅವರೇ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ.