ಬೆಂಗಳೂರು, (ಡಿ.01): ಕಡೂರು ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ವೈ. ಎಸ್. ವಿ. ದತ್ತಾ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹಬ್ಬಿದೆ.

ಈ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ ದತ್ತಾ ಅವರನ್ನ ಸಂಪರ್ಕಿಸಿದ್ದು, ಈ ಎಲ್ಲಾ ಊಹಾಪೋಹಗಳಿಗೆ ದತ್ತಾ ತೆರೆ ಎಳೆದಿದ್ದಾರೆ.

ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಹೋಗಲ್ಲ. ಕೆಲವರು ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಪಕ್ಷ ನಿಷ್ಟೆ ಏನು ಅಂತಾ ವರಿಷ್ಟರಿಗೆ ಗೊತ್ತಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದರು.

ಸೋಲಿಸಿದ್ರೂ ಕ್ಷೇತ್ರದ ಜನರ ನೆರವಿಗೆ ನಿಂತ ದತ್ತಣ್ಣನ ದೊಡ್ಡತನಕ್ಕೆ ಚಿತ್ರಗಳೇ ಸಾಕ್ಷಿ

ನನ್ನನ್ನು ಸಿದ್ದರಾಮಯ್ಯನವರೂ ಸೇರಿದಂತೆ ಯಾವುದೇ ಕಾಂಗ್ರೆಸ್ ಮುಖಂಡರು ಇಲ್ಲಿ ತನಕ ಭೇಟಿ ಮಾಡಿಲ್ಲ. ಕಡೂರು ಕ್ಷೇತ್ರದಲ್ಲಿ ನನ್ನ ಸಮುದಾಯದ ಮತಗಳು ಹಾಗೂ ಒಕ್ಕಲಿಗ ಮತಗಳು ಕಡಿಮೆ ಇವೆ. ಲಿಂಗಾಯಿತ ಮತ್ತು ಕುರುಬ ಮತಗಳು ಕಡೂರಿನ ಲ್ಲಿ ಹೆಚ್ಚಾಗಿವೆ. ನಾನು ಅಭ್ಯರ್ಥಿ ಆದರೆ ಸಾಂಪ್ರದಾಯಿಕ ಮತಗಳು ಸೇರಿ ನಾನು ಬಿಜೆಪಿ ವಿರುದ್ದ ಗೆಲ್ಲಬಹುದು ಎಂಬ ವದಂತಿಗಳು ಹುಟ್ಟಿಕೊಂಡಿರಬಹುದು ಎಂದು ಹೇಳಿದರು.

ದೇವೇಗೌಡರು ಜಾತ್ಯಾತೀತ ತತ್ವ ಗಳಿಗೆ ಅಂಟಿಕೊಂಡು ಇರುವಷ್ಟು ಕಾಲ ನಾನು ಜೆಡಿಎಸ್ ನಲ್ಲೇ ಇರುತ್ತೇನೆ. ಮೈತ್ರಿ ಸರ್ಕಾರ ಹೋದಾಗ ಕೆಲವೊಂದು ಶಾಸಕರಿಗೆ ಕುಮಾರಸ್ವಾಮಿ ಮೇಲೆ ಅಸಮಾಧಾನ ಇದ್ದದ್ದು ನಿಜ ಎಂದು ಸತ್ಯಾಂಶವನ್ನು ಬಿಚ್ಚಿಟ್ಟರು.

ನಮ್ಮ ಪ್ರಾದೇಶಿಕ ಪಕ್ಷ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಬೆಳೆಯಬೇಕು. ನಮ್ಮ ಪಕ್ಷ ಕೂಡಾ ಬಿಜೆಪಿಯನ್ನು ವಿರೋಧಿಸ್ತೀವಿ ಅನ್ನೋ ನಿಲುವನ್ನು ಸ್ಪಷ್ಟವಾಗಿ ತೆಗೆದುಕೊಳ್ಳಬೇಕು. ಎಲ್ಲೋ ಒಂದು ಕಡೆ ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ತೀವೇನೋ ಅನ್ನೋ ವದಂತಿಗಳು ನಮ್ಮಂತಹ ನಿಷ್ಟಾವಂತರಿಗೆ ನೋವು ಕೊಡುತ್ತೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಕಿವಿ ಮಾತು ಹೇಳಿದರು.

ಕುಮಾರಸ್ವಾಮಿ ಅವರು ಆಗಾಗ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ವೈ.ಎಸ್‌.ವಿ. ದತ್ತಾ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.