Asianet Suvarna News Asianet Suvarna News

ಪ್ರಗತಿಪರ ವೇಷ ಹಾಕಿದವರಿಗೆ ಹಿಂದೂ ಧರ್ಮದ ಮೇಲೆ ಅದೆಷ್ಟು ತಕರಾರುಗಳು..!

ಜಾತೀಯತೆ, ಮೂಢ ನಂಬಿಕೆಗಳು, ಅನಿಷ್ಟ ಆಚರಣೆಗಳ ವಿರುದ್ಧ ಧ್ವನಿಯೆತ್ತಿದರೆ ಅದಕ್ಕೊಂದು ಅರ್ಥವಿದೆ. ಹಾಗಂತ ಇವು ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಇಲ್ಲವಲ್ಲ. ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲೂ ಜಾತೀಯತೆ, ಮೂಢ ನಂಬಿಕೆ, ಅನಿಷ್ಟ ಆಚರಣೆಗಳಿಲ್ಲವಾ..? ಖಂಡಿತಾ ಇದೆ. ಆದ್ರೆ ಅವುಗಳ ವಿರುದ್ಧ ಮಾತಾಡುವಷ್ಟು ಈ ಸ್ವಯಂ ಘೋಷಿತ ಬುದ್ಧಿಜೀವಿಗಳ ಬೆನ್ನು ಮೂಳೆ ಗಟ್ಟಿ ಇರುವುದಿಲ್ಲ. ಯಾಕೆಂದರೆ ಅವರಿಗೆ ಆಗುವ ಅಪಾಯದ ಅರಿವು ಸ್ಪಷ್ಟವಾಗಿದೆ.

hinduism have so many disputes for those who disguise themselves as progressive ash
Author
First Published Nov 13, 2022, 1:57 PM IST

ಈ ಬುದ್ಧಿಜೀವಿಗಳು, ಪ್ರಗತಿಪರರು, ಚಿಂತಕರು ಎಂದು ಕರೆಸಿಕೊಳ್ಳುವವರ ಮೊದಲ ಅರ್ಹತೆ ಅಂದರೆ ಹಿಂದೂ ಧರ್ಮವನ್ನ, ಹಿಂದೂ ಆಚರಣೆಗಳನ್ನ ತೆಗಳುವುದು. ಹಾಗೆ ಮಾತಾಡಿದರೆ ಮಾತ್ರ ತಾವು ವಿಚಾರವಂತರು ಎಂಬ ಭ್ರಮೆಯಲ್ಲಿರುತ್ತಾರೆ. ಇದೇ ರೋಗ ಕೆಲವು ರಾಜಕಾರಣಿಗಳಲ್ಲೂ ಇದೆ. ಕಾಂಗ್ರೆಸ್ ಪಕ್ಷದ ಹಲವು ನಾಯಕರು ಹಿಂದೂ ಧರ್ಮ ವಿರೋಧಿ ಹೇಳಿಕೆ ಕೊಟ್ಟಿದ್ದಾರೆ. ಸತೀಶ್ ಜಾರಕಿಹೊಳಿಯವರೇನು ಮೊದಲನೆಯವರೇನಲ್ಲ, ಕೊನೆಯವರೂ ಅಲ್ಲ. ಅಂದ್ರೆ ಈ ನೆಲದಲ್ಲಿ ಹುಟ್ಟಿದ ಸಂಸ್ಕೃತಿಯನ್ನ ಪ್ರಗತಿಪರ ಎಂಬ ಹೆಸರಲ್ಲಿ ಹೀಗೆಳೆದು ಮಾತಾಡುವುದು. ನಿಮ್ಮ ದೇವರು ಸರಿಯಿಲ್ಲ, ನಿಮ್ಮ ಆಚರಣೆ ಸರಿಯಿಲ್ಲ, ನಿಮ್ಮ ಸಂಪ್ರದಾಯ ಸರಿಯಿಲ್ಲ ಅನ್ನುವ ಮೂಲಕ ಹಿಂದೂ ಧರ್ಮೀಯರ ನಂಬಿಕೆಗಳ ಬಗ್ಗೆ ಉಡಾಫೆಯಿಂದ ಮಾತನಾಡುವುದು.

ಜಾತೀಯತೆ, ಮೂಢ ನಂಬಿಕೆಗಳು, ಅನಿಷ್ಟ ಆಚರಣೆಗಳ ವಿರುದ್ಧ ಧ್ವನಿಯೆತ್ತಿದರೆ ಅದಕ್ಕೊಂದು ಅರ್ಥವಿದೆ. ಹಾಗಂತ ಇವು ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಇಲ್ಲವಲ್ಲ. ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲೂ ಜಾತೀಯತೆ, ಮೂಢ ನಂಬಿಕೆ, ಅನಿಷ್ಟ ಆಚರಣೆಗಳಿಲ್ಲವಾ..? ಖಂಡಿತಾ ಇದೆ. ಆದ್ರೆ ಅವುಗಳ ವಿರುದ್ಧ ಮಾತಾಡುವಷ್ಟು ಈ ಸ್ವಯಂ ಘೋಷಿತ ಬುದ್ಧಿಜೀವಿಗಳ ಬೆನ್ನು ಮೂಳೆ ಗಟ್ಟಿ ಇರುವುದಿಲ್ಲ. ಯಾಕೆಂದರೆ ಅವರಿಗೆ ಆಗುವ ಅಪಾಯದ ಅರಿವು ಸ್ಪಷ್ಟವಾಗಿದೆ.

ಇದನ್ನು ಓದಿ: India Gate: ಹಿಂದೂ ಅವಹೇಳನದ ಇಳಿಜಾರು ಹಾದಿ: ಕಾಂಗ್ರೆಸ್‌ಗೆ ಇಕ್ಕಟ್ಟು

ಹಾಗಾಗಿ ಇವರು ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳ ಹುಳುಕುಗಳನ್ನ ಪ್ರಶ್ನೆ ಮಾಡಲು ಹೋಗುವುದಿಲ್ಲ. ಅದೇ ಕಾರಣಕ್ಕೇ ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣು ಮಕ್ಕಳ ಆಯ್ಕೆ ಅಂದಿದ್ದು. ಹಿಜಾಬ್, ಬುರ್ಖಾ ಪುರುಷ ದಬ್ಬಾಳಿಕೆಯ ಸಂಕೇತ ಅಂತ ತಸ್ಲೀಮಾ ನಸ್ರೀನ್‌ ಮಾತಾಡಿದಾಗ, ಹೌದು ಇದು ಸರಿ ಅಂತ ಯಾವೊಬ್ಬ ಪ್ರಗತಿಪರನೂ ಹೇಳಲಿಲ್ಲ. ಕಾಂಗ್ರೆಸ್ ನಾಯಕರಂತೂ ಹಿಜಾಬ್ ಬಗ್ಗೆ ತುಟಿಬಿಚ್ಚಲಿಲ್ಲ. ಇಂಥಾ ವಿಷಯಗಳು ಬಂದಾಗ ಸತೀಶ್ ಜಾರಕಿಹೊಳಿಯವರಿಗೆ ತಮ್ಮೊಳಗಿನ ಪ್ರಗತಿಪರತೆ ಜಾಗೃತವಾಗುವುದಿಲ್ಲ.

ಸತೀಶ್ ಜಾರಕಿಹೊಳಿ ಹೇಳಿದಂತೆ ಹಿಂದೂ ಪದಕ್ಕೆ ಅಶ್ಲೀಲ, ನಾಚಿಕೆ ಪಡುವಂತಾ ಅರ್ಥವೇನಿಲ್ಲ. ಕೆಲವು ಪರ್ಷಿಯನ್ ವ್ಯಾಪಾರಿಗಳು ಸಿಂಧೂ ನದಿಯಾಚೆಗಿನ ಜನರನ್ನ ಕಳ್ಳರು, ದರೋಡೆಕೋರರು, ಗುಲಾಮರು ಎಂದು ಕರೆಯುತ್ತಿದ್ದರು. ದೂರದ ದೇಶದ (ಭಾರತ) ಜನರೊಂದಿಗೆ ವ್ಯಾಪಾರ ಮಾಡುತ್ತಿದ್ದ ಕೆಲವು ಪರ್ಷಿಯನ್ ವ್ಯಾಪಾರಿಗಳು ಇಲ್ಲಿನ ವ್ಯಾಪಾರಿಗಳನ್ನ ಕಳ್ಳರು ಎಂದು ಕರೆದಿದ್ದರಲ್ಲಿ ಆಶ್ಚರ್ಯವೇನಿಲ್ಲ. ಹಾಗಂತ ಅವರು ಕರೆದಿದ್ದೇ ಸತ್ಯವಲ್ಲವಲ್ಲ. 

ಇದನ್ನೂ ಓದಿ: ಮತ್ತೊಂದು ವಿವಾದಕ್ಕೆ ಸಿಲುಕಿದ ಸತೀಶ ಜಾರಕಿಹೊಳಿ

ಲುಘೆತ್-ಇ-ಕಿಶ್ವಾರಿ (Lughet-e-kishwari) ಎಂಬ ಪರ್ಷಿಯನ್ ಡಿಕ್ಷನರಿಯಲ್ಲಿ ಈ ಅರ್ಥವಿದೆ. ಇಲ್ಲಿ ಹಿಂದೂ ಧರ್ಮದ ಬಗ್ಗೆ ಓದಲು ಇಲ್ಲಿ ಎಷ್ಟೆಲ್ಲ ಪುಸ್ತಕಗಳಿದ್ದರೂ ಸತೀಶ್ ಜಾರಕಿಹೊಳಿಯವರು ಪರ್ಷಿಯನ್ ಡಿಕ್ಷನರಿ ಓದಿ ಹಿಂದೂ ಪದದ ಅರ್ಥ ಹುಡುಕಿದ್ದಾರೆ. ಹಾಗಂತ ಹಿಂದೂ ಅನ್ನುವ ಪದ ಪರ್ಷಿಯನ್ ಪದವೇನಲ್ಲ. ಸಿಂಧೂ ನದಿಯಾಚೆಗಿನ ಜನರ ಬಗ್ಗೆ ಉಲ್ಲೇಖ ಮಾಡುವಾಗ ತಪ್ಪು ಉಚ್ಚಾರಣೆಯ ಕಾರಣದಿಂದ ಹಿಂದೂ ಎಂದು ಕರೆಯುತ್ತಿದ್ದರು. ಇದೇ ಮುಂದೆ ಹಿಂದೂ ಪದವಾಗಿ ಬಳಕೆಗೆ ಬಂತು. 

ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಅಂದ್ರೆ 2,500 ವರ್ಷಗಳ ಹಿಂದೆ ಪರ್ಷಿಯನ್ ದೊರೆಗಳ ಕಾಲದಲ್ಲೇ ಹಿಂದೂ ಪದದ ಉಲ್ಲೇಖವಿತ್ತು. ಪರ್ಷಿಯನ್ ದೊರೆ ಒಂದನೇ ಡೇರಿಯಸ್ ಸಿಂಧೂ ನದಿಯಾಚೆಗೂ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದ. ಅಲ್ಲಿನ ಜನರನ್ನೂ ತನ್ನ ಸೈನ್ಯಕ್ಕೆ ಸೇರಿಸಿಕೊಂಡಿದ್ದ. ಆ ಜನರನ್ನ ಆತ ಹಿಂದೂಗಳೆಂದು ಗುರುತಿಸಲಾರಂಭಿಸಿದ. 

ಇದನ್ನೂ ಓದಿ: ಹಿಂದೂ ಪದ ವಿವಾದಕ್ಕೆ ವಿಷಾದ, ಆಕ್ಷೇಪಿಸಿದವರಿಗೆಲ್ಲ ದಾಖಲೆ ಕಳಿಸುವೆ ಎಂದ ಜಾರಕಿಹೊಳಿ

ಒಂದನೇ ಡೇರಿಯಸ್ ಕಾಲದ ಶಿಲಾ ಶಾಸನಗಳಲ್ಲಿ ಹಿಂದೂ ಪದದ ಉಲ್ಲೇಖಗಳಿವೆ. ಅಷ್ಟೊತ್ತಿಗಾಗಲೇ ಈ ಭೂಮಿ ರಾಮಾಯಣ, ಮಹಾಭಾರತಕ್ಕೆ ಸಾಕ್ಷಿಯಾಗಿತ್ತು. (ಕೆಲ ವಿದೇಶಿ ವ್ಯಾಮೋಹಿಗಳ ಪ್ರಕಾರ ರಾಮಾಯಣ, ಮಹಾಭಾರತ ಇತಿಹಾಸವಲ್ಲ).  ಪರ್ಷಿಯಾದಲ್ಲೇ ಹುಟ್ಟಿದ ಪಾರಸಿ ಧರ್ಮ ಗ್ರಂಥಗಳಲ್ಲೂ (zend avesta) ಹಿಂದೂ ಪದದ ಉಲ್ಲೇಖವಿದೆ.

ಪಾಕಿಸ್ತಾನದಲ್ಲಿ  ಸಿಂಧ್ ಹೆಸರಿನ ಪ್ರಾಂತ್ಯವೇ ಇದೆ. ಸಿಂಧೂ ನದಿಯನ್ನ ಈಗಲೂ ವಿದೇಶಿಗರು ಇಂಡಸ್ ಎಂದೇ ಕರೆಯುತ್ತಾರೆ. (ಕಲ್ಲಿಕೋಟೆಯನ್ನ ಬ್ರಿಟಿಷರು ಕ್ಯಾಲಿಕಟ್ ಎಂದು ಕರೆಯುತ್ತಿದ್ದರಲ್ಲ). ಈ ತಪ್ಪು ಉಚ್ಛಾರಣೆಯ ಕಾರಣದಿಂದ ಸಿಂಧೂ ನದಿಯಾಚೆಗಿನ ಜನರನ್ನ ಹಿಂದೂಗಳು ಎಂದು ಕರೆಯುತ್ತಿದ್ದರು. ಹಿಂದೂ ಅನ್ನುವ ಪದ ಧರ್ಮ ಸೂಚಕ ಪದವಾಗಿರದೇ, ಸಿಂಧೂ ನದಿಯಾಚೆಗಿನ ಇಡೀ ಭೂಭಾಗದ ಹೆಸರಾಗಿತ್ತು. 

ಇದನ್ನು ಓದಿ: ಹಿಂದೂ ಪದ ವಿವಾದಾತ್ಮಕ ಹೇಳಿಕೆ: ಕೊನೆಗೂ ವಿಷಾದ ವ್ಯಕ್ತಪಡಿಸಿದ ಜಾರಕಿಹೊಳಿ!

ಈ ಭೂಮಿಯಲ್ಲಿ ವಾಸ ಮಾಡುತ್ತಿದ್ದವರನ್ನ ಹಿಂದೂಗಳೆಂದು ಪರ್ಷಿಯನ್ನರು ಕರೆದರು. ಅದನ್ನೇ ಗ್ರೀಕರು, ಇತರ ಯೂರೋಪಿಯನ್ನರು ಮುಂದುವರಿಸಿದರು. ಹಿಂದೂಸ್ಥಾನದಲ್ಲಿರುವ ಎಲ್ಲರನ್ನೂ ಹಿಂದೂಗಳೆಂದು ಕರೆದರು. ಹಿಂದೂಸ್ಥಾನದಲ್ಲಿ ವಾಸ ಮಾಡುತ್ತಿದ್ದವರಾರೂ ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಂಡಿರಲಿಲ್ಲ. ಇಲ್ಲಿನ ಜನ ಜಾತಿ, ಬುಡಕಟ್ಟು, ಸಂಪ್ರದಾಯ, ಆಚರಣೆಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದರು. ಹೊರಗಿನವರು ಮಾತ್ರ ಇಲ್ಲಿನ ಜನರನ್ನ ಹಿಂದೂಗಳು ಎಂದು ಗುರುತಿಸಿದರು. 

ಯಾವಾಗ ಭಾರತದ ಮೇಲೆ ಇಸ್ಲಾಮಿಕ್ ದಾಳಿ (7ನೇ ಶತಮಾನದ ನಂತರ) ಶುರುವಾಗಿ ಹಿಂದೂಸ್ಥಾನದ ಉತ್ತರ ಭಾಗದಲ್ಲಿ ಮುಸ್ಲಿಂ ದೊರೆಗಳ ಆಳ್ವಿಕೆ ಶುರುವಾಯ್ತೋ ಆಗ ಇಲ್ಲಿನ ಜನ ತಮ್ಮನ್ನ ತಾವು ಹಿಂದೂಗಳೆಂದು ಗುರುತಿಸಿಕೊಳ್ಳಲಾರಂಭಿಸಿದರು. ಅಲ್ಲಿಯವರೆಗೆ ಜಾತಿ, ಸಂಪ್ರದಾಯ, ಬುಡಕಟ್ಟುಗಳಿಂದ ಗುರುತಿಸಿಕೊಳ್ಳುತ್ತಿದ್ದ ಹಿಂದೂಸ್ಥಾನದ ಜನ, ಇಸ್ಲಾಮಿಕ್ ದಾಳಿಯ ನಂತರ ತಮ್ಮನ್ನ ಹಿಂದೂಗಳು ಎಂದು ಗುರುತಿಸಿಕೊಳ್ಳಲಾರಂಭಿಸಿದರು. ಮತಾಂತರದ ಉದ್ದೇಶವಿಟ್ಟುಕೊಂಡು ಬಂದ ಮುಸ್ಲಿಂ ಮಿಷನರಿಗಳು, ಕ್ರಿಶ್ಚಿಯನ್ ಮಿಷನರಿಗಳ ಕಾರಣದಿಂದ ಹಿಂದೂ ಅಸ್ಮಿತೆ ಬಲವಾಯ್ತು. ಮುಂದೆ ಇದು ಬ್ರಿಟಿಷರ ಆಕ್ರಮಣದ ನಂತರವೂ ಮುಂದುವರಿಯಿತು..

ಇದನ್ನು ಓದಿ: ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಯಿಂದ ಬಿಜೆಪಿಗೆ ಹೊಸ ಅಸ್ತ್ರ, ಕಾಂಗ್ರೆಸ್‌ಗೆ ಸಂಕಷ್ಟ!

ಹಿಂದೂ ಧರ್ಮವನ್ನ ಯಾರೋ ಒಬ್ಬ ವ್ಯಕ್ತಿ ಸ್ಥಾಪನೆ ಮಾಡಿಲ್ಲ, ಯಾವುದೋ ಒಂದು ಧರ್ಮ ಗ್ರಂಥ ಇದೇ ಹಿಂದೂ ಧರ್ಮ ಎಂದು ಸಾರಿ ಹೇಳಿಲ್ಲ. ಇದೇ ಅಂತಿಮ ಸತ್ಯ ಅಂತ ಯಾವ ಪ್ರವಾದಿಯೂ ಬೋಧನೆ ಮಾಡಿ ಹೋಗಿಲ್ಲ. ಇಸ್ಲಾಂ, ಕ್ರಿಶ್ಚಿಯಾನಿಟಿಯಂಥಾ ರಿಲಿಜನ್ (ಮತ) ಗಳಿಗೂ ಮತ್ತು ಭಾರತೀಯ ನೆಲದ ಧರ್ಮ ಪದಕ್ಕೂ ಹೋಲಿಕೆಯೇ ಇಲ್ಲ. ನಮ್ಮ ಸಂಸ್ಕೃತಿ ಪ್ರಕಾರ ಧರ್ಮ ಅಂದರೆ ಸತ್ಯ, ನ್ಯಾಯ, ದಾನ, ಕರುಣೆ ಅರ್ಥಗಳಿವೆ. 

ಇಲ್ಲಿನ ಜನ ಭೂಮಿ, ಆಕಾಶ, ಕಲ್ಲು, ಮಣ್ಣು, ನೀರು, ಗಾಳಿ ಹೀಗೆ ಕಣ್ಣಿಗೆ ಕಂಡ ಎಲ್ಲದರಲ್ಲೂ ದೇವರನ್ನು ಹುಡುಕಿ ಪೂಜಿಸಿಕೊಂಡು ಬಂದರು. ಕಾಲದಿಂದ ಕಾಲಕ್ಕೆ ಇದೇ ಮಣ್ಣಲ್ಲಿ ಹುಟ್ಟಿದ ಹಲವರು ಧರ್ಮದ ಪರಿಕಲ್ಪನೆಯನ್ನ ಇನ್ನಷ್ಟು ವಿಸ್ತಾರವಾಗಿಸಿದ್ದಾರೆ. ಇದೇ ನೆಲದಲ್ಲಿ ಹುಟ್ಟಿದ ಬುದ್ಧ, ಮಹಾವೀರ, ಬಸವಣ್ಣನಂತವರು ಈ ವ್ಯವಸ್ಥೆಯಲ್ಲಿದ್ದ ಹುಳುಕುಗಳನ್ನ ತಿದ್ದಲು ಪ್ರಯತ್ನಿಸಿದ್ದಾರೆ. 

ಹಿಂದೂ ಧರ್ಮವೆಂಬುದು ನಿಂತ ನೀರಲ್ಲ, ಇಲ್ಲಿ ಬದಲಾವಣೆ ನಿರಂತರ. ಸಾವಿರಾರು ವರ್ಷಗಳ ಹಿಂದೆ ಧರ್ಮಗ್ರಂಥದಲ್ಲಿ ಹೀಗೆ ಹೇಳಲಾಗಿದೆ ಅದನ್ನ ಕಡ್ಡಾಯವಾಗಿ ಮಾಡಲೇಬೇಕೆಂಬ ಕಟ್ಟಳೆ ಹಿಂದೂ ಧರ್ಮದಲ್ಲಿಲ್ಲ. ಯಾವುದೋ ಕಾಲದಲ್ಲಿ ನ್ಯಾಯ ಸಮ್ಮತ ಅನ್ನಿಸುವಂತದ್ದು ಕಾಲಕ್ಕೆ ತಕ್ಕಂತೆ ಈಗ ಅತ್ಯಂತ ಅಮಾನವೀಯ ಅಂತ ಅನ್ನಿಸಬಹುದು. ಈಗ ನ್ಯಾಯಬದ್ಧ ಅನ್ನಿಸುವಂತದ್ದು ನೂರಾರು ವರ್ಷಗಳ ನಂತರ ಅಮಾನವೀಯ ಅಂತ ಅನ್ನಿಸಬಹುದು. ಇದನ್ನೇ ಯುಗಧರ್ಮ ಅನ್ನೋದು. ಅಂದ್ರೆ ಕಾಲಕ್ಕೆ ತಕ್ಕಂತೆ ನಂಬಿಕೆ, ಆಚರಣೆಗಳು ವಿಸ್ತಾರಗೊಳ್ಳುತ್ತಿರುತ್ತದೆ.

ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳು ಜಗತ್ತಿನಾದ್ಯಂತ ಇದ್ದ ಎಲ್ಲ ಪ್ರಕೃತಿ ಆರಾಧಕ ಧರ್ಮಗಳನ್ನೂ (ethnic religion) ತಿಂದು ಮುಗಿಸಿವೆ. ನಮ್ಮದೇ ದೇಶದಂತಿದ್ದ ಆಫ್ರಿಕಾದ ಮೂಲ ಸಂಸ್ಕೃತಿಯನ್ನ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಆಕ್ರಮಿಸಿಕೊಂಡಿವೆ. ಚೀನಾದಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಆ ನೆಲದ ಅಸ್ಮಿತೆಯನ್ನೇ ಅಳಿಸಿಹಾಕಿದೆ. ಲ್ಯಾಟಿನ್ ಅಮೆರಿಕ, ಆಸ್ಟ್ರೇಲಿಯಾಗೆ ಹೋದ ಯೂರೋಪಿಯನ್ನರು ಅಲ್ಲಿನ ಮೂಲ ನಿವಾಸಿಗಳನ್ನ ತುಳಿದು ಹಾಕಿದರು. ಇಡೀ ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ಈ ನೆಲದ ಮೂಲ ಸಂಸ್ಕೃತಿ ಉಳಿದುಕೊಂಡಿದೆ. ಅದರ ಬಗ್ಗೆಯೂ ಇಲ್ಲದ ತಕರಾರು ಎತ್ತಿ ಸಾಧಿಸುವುದೇನಿದೆ..? 

ಕೆಲವು ಕಾಂಗ್ರೆಸ್ ನಾಯಕರು ಮತ್ತು ಸ್ವಯಂಘೋಷಿತ ಬುದ್ಧಿಜೀವಿಗಳ ಸಮಸ್ಯೆ ಅಂದರೆ ಅದು ಜಾತಿ. ಜಾತ್ಯಾತೀತರು ಅಂತ ಕರೆಸಿಕೊಳ್ಳುವವರಿಗೆ ಜಾತಿಯೇ ಅಸ್ತ್ರ. ಇಂಥವರು ಜನರನ್ನ ಗುರುತಿಸುವುದೇ ನೀನು ದಲಿತ, ನೀನು ಒಕ್ಕಲಿಗ, ನೀನು ಬ್ರಾಹ್ಮಣ, ನೀನು ಲಿಂಗಾಯತ, ನೀನು ಕುರುಬ ಹೀಗೆ.. ಇಂಥವರೇ ಜಾತ್ಯಾತೀತರು, ಪ್ರಗತಿಪರರೆಂಬ ಸರ್ಟಿಫಿಕೇಟ್ ಹಿಡಿದು ಓಡಾಡುತ್ತಿರುತ್ತಾರೆ. ಹಿಂದೂಗಳಲ್ಲಿ ಜಾತಿಗಳನ್ನ ಹುಡುಕುವ ಇವರು, ಯಾವತ್ತಿಗೂ ಮುಸ್ಲಿಮರಲ್ಲಿ ಪಂಗಡಗಳನ್ನ ಹುಡುಕೋದಿಲ್ಲ. ಕ್ರಿಶ್ಚಿಯನ್ನರ ಜಾತಿಗಳನ್ನ ಪ್ರಶ್ನಿಸೋದಿಲ್ಲ. ಅಲ್ಪಸಂಖ್ಯಾತರ ಓಲೈಕೆಯಿಂದ ವೋಟು ಸಿಗುತ್ತದೆ ಅಂದಾಗ ಅವರನ್ನ ತಲೆ ಮೇಲಿಟ್ಟುಕೊಂಡರು. ಈಗ ಹಿಂದೂಗಳು ವೋಟು ಸಿಗಲ್ಲ ಅನ್ನುವ ವಾತಾವರಣ ಸೃಷ್ಟಿಯಾದಾಗ ಹಿಂದು ಧರ್ಮವೇ ಸುಳ್ಳು, ನಿಮ್ಮದು ಈ ಜಾತಿ, ನಿಮ್ಮದು ಆ ಜಾತಿ ಅಂತಿದ್ದಾರಷ್ಟೇ. 

ವಿಪರೀತ ಮುಸ್ಲಿಂ, ಕ್ರಿಶ್ಚಿಯನ್ ಓಲೈಕೆಯ ವಿರುದ್ಧ ಆರೆಸ್ಸೆಸ್-ಬಿಜೆಪಿ ಹಿಂದೂಗಳನ್ನ ಸಂಘಟಿಸುವುದರಲ್ಲಿ ಯಶಸ್ವಿಯಾಗಿರೋದೇನೋ ನಿಜ. ಆದ್ರೆ ಆರೆಸ್ಸೆಸ್-ಬಿಜೆಪಿ ವಿರುದ್ಧ ಹೋರಾಡಬೇಕಂದ್ರೆ ಹಿಂದೂ ಧರ್ಮವನ್ನ ಬೈಯುತ್ತಾ ಕುಳಿತರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಜನರ ನಂಬಿಕೆಗಳನ್ನ ಘಾಸಿ ಮಾಡಿ ತುಂಬ ದಿನ ರಾಜಕೀಯ ಮಾಡಲಾಗುವುದಿಲ್ಲ. ಈ ಸತ್ಯ  ಅರ್ಥ ಮಾಡಿಕೊಳ್ಳದೆ ಇರುವುದರಿಂದ ಕಾಂಗ್ರೆಸ್ ಮತ್ತು ಸೋ ಕಾಲ್ಡ್ ಜಾತ್ಯಾತೀತ ಪಾರ್ಟಿಗಳು ತಮ್ಮ ವಿಶ್ವಾಸಾರ್ಹತೆ ಕಳೆದು ಕೊಳ್ಳುತ್ತಿವೆ.

ಬಹು ದೇವಾರಾಧನೆಗೆ ಅವಕಾಶ ಇರುವ ಹಿಂದೂ ಧರ್ಮದಲ್ಲಿ ಮಾತ್ರ ಒಬ್ಬ ಬುದ್ಧ, ಬಸವ, ಅಂಬೇಡ್ಕರ್ ಜನ್ಮತಾಳಲು ಸಾಧ್ಯ. ಮೊದ ಮೊದಲಿಗೆ ಅವರ ವಿಚಾರಗಳನ್ನ ಕೆಲವರು ವಿರೋಧಿಸಿದರೂ ಕಾಲಾಂತರದಲ್ಲಿ ಪೂರ್ತಿ ಸಮಾಜ ಅವರ ವಿಚಾರವನ್ನು ಒಪ್ಪಿಕೊಂಡಿದೆ. ಒಬ್ಬನೇ ದೇವ, ಒಬ್ಬನೇ ದೇವದೂತ ಮತ್ತು ಅವರುಗಳ ಬಗ್ಗೆ ಮಾತಿಲ್ಲ ಕಥೆಯಿಲ್ಲ, ವಿಮರ್ಶೆಯ ಅಧಿಕಾರವನ್ನೂ ಅಬ್ರಹಾಮಿಕ್ ಮತಗಳು ಕೊಡುವುದಿಲ್ಲ. ಆದರೆ ಬೆಳಗ್ಗೆ ಎದ್ದು ದುಡ್ಡು ಮಾಡುವುದು ಹೇಗೆ ಎಂಬ ತಂತ್ರ ಹೆಣೆದು ಸಂಜೆ ವೇದಿಕೆ ಸಿಕ್ಕಾಗ ಮಹಾನ್ ವಿಚಾರವಾದಿಗಳಂತೆ ಹಿಂದೂ ಪದ್ದತಿಗಳ ತಾರ್ಕಿಕ ವಿಮರ್ಶೆ ಮಾಡುವ ರಾಜಕಾರಣಿಗಳನ್ನ ಜನ ಗಂಭೀರವಾಗಿ ತೆಗೆದುಕೊಳ್ಳುತ್ತಾರಾ..?

Follow Us:
Download App:
  • android
  • ios