ಮತ್ತೊಂದು ವಿವಾದಕ್ಕೆ ಸಿಲುಕಿದ ಸತೀಶ ಜಾರಕಿಹೊಳಿ
- ಮತ್ತೊಂದು ವಿವಾದಕ್ಕೆ ಸಿಲುಕಿದ ಸತೀಶ ಜಾರಕಿಹೊಳಿ
- - ಸಂಭಾಜಿ ಮಹಾರಾಜರಿಗೆ ಅವಮಾನ ಮಾಡಿದ ಆರೋಪ, ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್ ಆಕ್ರೋಶ
ಬೆಳಗಾವಿ (ನ.12) ‘ಹಿಂದು’ ಎನ್ನುವುದು ಪರ್ಷಿಯನ್‌ನಿಂದ ಬಂದ ಪದವಾಗಿದ್ದು, ಈ ಪದದ ಅರ್ಥ ಅಶ್ಲೀಲವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ, ಬಳಿಕ, ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ವಿವಾದ ತಣ್ಣಗಾಗಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಈಗ ಮತ್ತೊಂದು ವಿವಾದ ಸುತ್ತಿಕೊಂಡಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ನ.6ರಂದು ಹಮ್ಮಿಕೊಂಡಿದ್ದ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ ಕಾರ್ಯಕ್ರಮದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರಿಗೆ ಅವರು ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಜಾರಕಿಹೊಳಿಯವರು ಮಾಡಿರುವ ಭಾಷಣದ ತುಣುಕನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿ, ಖಂಡನೆ ವ್ಯಕ್ತಪಡಿಸಿದ್ದಾರೆ. 42 ಸೆಕೆಂಡ್‌ಗಳ ಭಾಷಣದ ತುಣುಕಿನ ವಿಡಿಯೋವನ್ನು ಕೂಡ ಅಪ್‌ಲೋಡ್ ಮಾಡಿದ್ದಾರೆ.
"ಬಂಧುತ್ವ ಇಲ್ಲದ ಹಿಂದುತ್ವ ದೇಶಕ್ಕೆ ಅಪಾಯಕಾರಿ": ಜ್ಞಾನಪ್ರಕಾಶ ಸ್ವಾಮೀಜಿಯಿಂದ ಟೀಕೆ
ಫಡ್ನವೀಸ್ ಟ್ವೀಟ್:
‘ಮಿಸ್ಟರ್ ರಾಹುಲ್ ಗಾಂಧಿ, ಈ ರೀತಿಯ ನಾನ್ಸೆನ್ಸ್ ಹೇಳಿಕೆಯನ್ನು ನೀವು ಒಪ್ಪುತ್ತೀರಾ? ಕಾಂಗ್ರೆಸ್ ಶಾಸಕರೊಬ್ಬರು ಈ ರೀತಿ ಮಹಾನ್ ನಾಯಕ ಸಂಭಾಜಿ ಮಹಾರಾಜರ ಬಗ್ಗೆ ಹೇಳುವುದನ್ನು ನೀವು ಒಪ್ಪುತ್ತೀರಾ? ಸಂಭಾಜಿ ಮಹಾರಾಜರ ಬಗ್ಗೆ ತಪ್ಪು ಮಾಹಿತಿ ನೀಡುವ, ಜನರ ದಾರಿ ತಪ್ಪಿಸುವ, ಅವರಿಗೆ ಅವಮಾನ ಮಾಡುವ ಹೇಳಿಕೆ ಇದಾಗಿದೆ. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯೇ? ಮಹಾರಾಷ್ಟ್ರ ಇದನ್ನು ಸಹಿಸಿಕೊಳ್ಳುವುದಿಲ್ಲ. ಸಂಭಾಜಿಗೆ ಧರ್ಮವೀರ ಹೆಸರು ಬಂದ ಬಗ್ಗೆ ಶಂಕೆ ವ್ಯಕ್ತಪಡಿಸಿ, ಜಾರಕಿಹೊಳಿ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಸಂಭಾಜಿ ಮಹಾರಾಜರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಡಿಯೋದಲ್ಲಿ ಸತೀಶ್ ಹೇಳಿದ್ದೇನು?:
ಸಂಭಾಜಿ ಮಹಾರಾಜರನ್ನು ಬ್ರಿಟಿಷರು ಹತ್ಯೆ ಮಾಡಿದರು. ಏಕೆ ಹತ್ಯೆ ಮಾಡಿದರು? ಶಿವಾಜಿ ಮಹಾರಾಜರ ಊಟದಲ್ಲಿ ವಿಷ ಹಾಕಲಾಗಿತ್ತು. ವಿಷ ಹಾಕಿದವರನ್ನು ಹಿಡಿದು ಅವರಿಗೆ ಸಂಭಾಜಿ ಶಿಕ್ಷೆ ಕೊಟ್ಟಿದ್ದರು. ಈ ಕೋಪದಿಂದ ಸಂಭಾಜಿಯವರನ್ನು ಬ್ರಿಟಿಷರಿಗೆ ಹಿಡಿದು ಕೊಡಲಾಯಿತು. ಕೊನೆಗೆ, ಅವರಿಗೆ ಧರ್ಮವೀರ ಸಂಭಾಜಿ ಎಂಬ ಹೆಸರಿಟ್ಟು ಇತಿಹಾಸ ಬರೆದಿದ್ದಾರೆ. ಈ ದೇಶದ ಇತಿಹಾಸ ಬಹಳ ವಿಚಿತ್ರವಾಗಿದ್ದು, ಇಂತಹ ಇತಿಹಾಸ ತಿಳಿಯಲು ಬಹಳ ಸಮಯ ಬೇಕು ಎಂದಿದ್ದಾರೆ.
ಹಿಂದೂ ಪದದ ಅರ್ಥ ಅಶ್ಲೀಲ ಎಂದ ಜಾರಕಿಹೊಳಿಗೆ, ಮುತಾಲಿಕ್ ಕ್ಲಾಸ್, ಕಾಂಗ್ರೆಸ್ ಖಂಡನೆ
ವಿವಾದ ನಿಲ್ಲಿಸಿ: ಸತೀಶ್
ಫಡ್ನವೀಸ್ ಟ್ವಿಟ್ ಹಿನ್ನೆಲೆಯಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸತೀಶ್ ಜಾರಕಿಹೊಳಿ, ಧರ್ಮವೀರ ಸಂಭಾಜಿ ಮಹಾರಾಜರನ್ನು ಹಿಡಿದು ಔರಂಗಜೇಬನಿಗೆ ಶರಣಾದವರು ಯಾರು ಎಂಬುದನ್ನು ನಾನು ಹೇಳಲು ಯತ್ನಿಸಿದ್ದೆ. ಆ ಸಮಯದಲ್ಲಿ ಔರಂಗಜೇಬ್ ಬದಲಿಗೆ ಬ್ರಿಟಿಷ್ ಪದವನ್ನು ಬಳಸಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ದ್ರೋಹ ಬಗೆದವರು ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ನಿಜವಾದ ಕೊಲೆಗಾರ ಯಾರು ಎಂಬುದನ್ನು ಜನರ ಮುಂದೆ ತರುವುದೇ ನನ್ನ ಪ್ರಯತ್ನವಾಗಿತ್ತು. ಆದರೆ, ಇದರ ರಾಜಕೀಯ ಲಾಭ ಪಡೆದು ನನ್ನ ವಿರುದ್ಧ ಮಾನಹಾನಿ ಮಾಡುವ ಯತ್ನ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.