ಹಿಮಾಚಲ ಪ್ರದೇಶದಲ್ಲಿ ಶನಿವಾರ 68 ವಿಧಾನಸಭಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮತದಾನವಾಗಿದೆ. ಸಂಜೆ 5 ಗಂಟೆಯ ವೇಳೆ ಒಟ್ಟು ಶೇ.65.92ರಷ್ಟು ಮತದಾನವಾಗಿದೆ. ಪ್ರಸ್ತುತ ಮತದಾನ ಮುಕ್ತಾಯವಾಗಿದ್ದರೂ, ರಾಜ್ಯದ ಕೆಲವು ಪೂಲಿಂಗ್ ಬೂತ್‌ಗಳಲ್ಲಿ ಇನ್ನೂ ಮತ ಹಾಕಲು ದೊಡ್ಡ ಮಟ್ಟದ ಕ್ಯೂ ಕಾಣಿಸಿಕೊಂಡಿದೆ.
ಶಿಮ್ಲಾ (ನ.12): ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಿದೆ. ಇದಾದ ನಂತರವೂ ಕುಲುವಿನ ಮನಾಲಿ, ಕಂಗ್ರಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತದಾರರು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಸಂಜೆ 5ರವರೆಗೆ ಶೇ.65.92ರಷ್ಟು ಮತದಾನವಾಗಿದೆ ಎನ್ನುವ ವರದಿ ಬಂದಿದೆ ಮತದಾನದ ಮಧ್ಯೆ ಹಿಮಾಚಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಬಿಜೆಪಿ ವಿರುದ್ಧ ದೂರು ಸಲ್ಲಿಕೆ ಮಾಡಿದೆ. ಬಿಜೆಪಿಯ ಐಟಿ ಸೆಲ್ ನಕಲಿ ಸಮೀಕ್ಷೆ ವರದಿಯನ್ನು ಪ್ರಸಾರ ಮಾಡಿದೆ ಎಂದು ಕಾಂಗ್ರೆಸ್ ದೂರಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಬಿಜೆಪಿಯವರು ಮತದಾನವನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೇ, ಹಿಮಾಚಲ ಪ್ರದೇಶ ಉಸ್ತುವಾರಿ ರಾಜೀವ್ ಶುಕ್ಲಾ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರಿನಲ್ಲಿ ಬರೆದಿರುವ ನಕಲಿ ಪತ್ರವನ್ನು ವೈರಲ್ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ, ಕಾಂಗ್ರೆಸ್ ಗೆ ಕಡಿಮೆ ಸ್ಥಾನ ಎಂದು ಬರೆಯಲಾಗಿದೆ.
412 ಅಭ್ಯರ್ಥಿಗಳು ಕಣದಲ್ಲಿ: ಹಿಮಾಚಲ ಪ್ರದೇಶದ 68 ಮತಕ್ಷೇತ್ರಗಳಲ್ಲಿ ಒಟ್ಟು 412 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಶನಿವಾರ ನಿರ್ಧಾರ ಮಾಡಿದ್ದಾರೆ. ಇವರಲ್ಲಿ 28 ಲಕ್ಷದ 54 ಸಾವಿರದ 945 ಪುರುಷರು, 27 ಲಕ್ಷ 37 ಸಾವಿರದ 845 ಮಹಿಳೆಯರು ಮತ್ತು 38 ತೃತೀಯಲಿಂಗಿಗಳಿದ್ದಾರೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ. 2017 ರಲ್ಲಿ ರಾಜ್ಯದಲ್ಲಿ 75.57% ಮತದಾನವಾಗಿತ್ತು. ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ಜಿಲ್ಲೆಯ ತಾಶಿಗಂಗ್‌ನಲ್ಲಿ ವಿಶ್ವದ ಅತಿ ಎತ್ತರದ ಮತಗಟ್ಟೆಯನ್ನು ನಿರ್ಮಿಸಲಾಗಿದೆ. ಇದು 15256 ಅಡಿ ಎತ್ತರದಲ್ಲಿದೆ, ಇಲ್ಲಿ ಒಟ್ಟು 52 ಮತಗಳಿವೆ. 100ರಷ್ಟು ಮತದಾನವಾಗುವಂತೆ ಮಾದರಿ ಮತದಾನ ಕೇಂದ್ರವನ್ನಾಗಿ ಮಾಡಲಾಗಿದೆ.
ಗೆದ್ದರೆ ಏಕರೂಪ ನಾಗರಿಕ ಸಂಹಿತೆ: ಹಿಮಾಚಲದಲ್ಲಿ ಬಿಜೆಪಿ ಪ್ರಣಾಳಿಕೆ
ಮಧ್ಯಾಹ್ನ 3 ಗಂಟೆಯವರೆಗೆ 50% ಕ್ಕಿಂತ ಕಡಿಮೆ ಮತದಾನವಾದ ಹಿಮಾಚಲದ ಏಕೈಕ ಜಿಲ್ಲೆ ಚಂಬಾ. ಚಂಬಾ ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಕೇವಲ ಶೇ.46ರಷ್ಟು ಮತದಾನವಾಗಿದೆ. ಬಿಲಾಸ್ಪುರ್, ಸೋಲನ್ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ 50 ರಿಂದ 55% ರಷ್ಟು ಮತದಾನವಾಗಿದೆ. ಇಲ್ಲಿ ಬಿಲಾಸ್‌ಪುರ ಜಿಲ್ಲೆಯಲ್ಲಿ 54.14%, ಸೋಲನ್‌ನಲ್ಲಿ 54.14% ಮತ್ತು ಕಾಂಗ್ರಾದಲ್ಲಿ 54.21% ಮತದಾನವಾಗಿದೆ. ಹಿಮಾಚಲ ಪ್ರದೇಶ ರಾಜ್ಯದ 12 ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.55ರಿಂದ ಶೇ.60ರಷ್ಟು ಮತದಾನವಾಗಿದೆ. ಇವುಗಳಲ್ಲಿ ಶಿಮ್ಲಾ 55.56%, ಕಿನ್ನೌರ್ 55.30%, ಹಮೀರ್‌ಪುರ 55.60%, ಉನಾ 58.11%, ಕುಲು 58.88% ಮತ್ತು ಮಂಡಿ ಜಿಲ್ಲೆಯಲ್ಲಿ 58.90% ದಾಖಲಾಗಿವೆ. ಎರಡು ಜಿಲ್ಲೆಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.60ಕ್ಕೂ ಹೆಚ್ಚು ಮತದಾನವಾಗಿದೆ. ಇವುಗಳಲ್ಲಿ, ಬುಡಕಟ್ಟು ಪ್ರದೇಶದ ಲಾಹೌಲ್-ಸ್ಪಿಟಿಯಲ್ಲಿ 62.75% ಮತ್ತು ಸಿರ್ಮೌರ್‌ನಲ್ಲಿ 60.38% ಮಧ್ಯಾಹ್ನ 3 ಗಂಟೆಯವರೆಗೆ ಚಲಾವಣೆಯಾಗಿದೆ.
ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ಮತ್ತೆ ‘ಕೈ’ ಹೊಗಳಿದ Ghulam Nabi Azad..!
ಪ್ರಧಾನಿ ಮೋದಿ ಟ್ವೀಟ್: ಚುನಾವಣೆಗೂ ಮುನ್ನ ದೇವಭೂಮಿಯ ಮತದಾರರ ಕುರಿತಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 'ದೇವಭೂಮಿಯ ಎಲ್ಲಾ ಮತದಾರರು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪೂರ್ಣ ಉತ್ಸಾಹದಿಂದ ಭಾಗವಹಿಸಲು ಮತ್ತು ಮತದಾನದಲ್ಲಿ ಹೊಸ ದಾಖಲೆಯನ್ನು ರಚಿಸಲು ನಾನು ವಿನಂತಿಸುತ್ತೇನೆ. ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ ರಾಜ್ಯದ ಎಲ್ಲಾ ಯುವ ಜನತೆಗೆ ನನ್ನ ವಿಶೇಷ ಶುಭಾಶಯಗಳು' ಎಂದು ಬರೆದಿದ್ದರು.
