ಇತ್ತೀಚೆಗೆ ಗೋಹತ್ಯೆ ಮಸೂದೆಯನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದೆ. ಇನ್ನೊಂದು ಕಡೆ ಕಾಂಗ್ರೆಸ್‌ ಪಕ್ಷ ಇದರ ಕುರಿತು ವಿರೋಧ ವ್ಯಕ್ತಪಡಿಸುತ್ತಿದೆ. ಇದು ಪಕ್ಷಗಳ ನಡುವಿನ ಕೇವಲ ರಾಜಕೀಯ ತಿಕ್ಕಾಟ ಎಂದು ಭಾವಿಸುವ ಅಗತ್ಯವಿಲ್ಲ. ಕಾಂಗ್ರೆಸ್‌ ಪಕ್ಷದ ವಿರೋಧದ ಹಿಂದಿರುವ ಅಜೆಂಡಾಗಳನ್ನು ಲೇಖನದ ಕೊನೆಗೆ ವಿವರಿಸುತ್ತೇನೆ.

ನಾವಿಂದು 21ನೇ ಶತಮಾನದಲ್ಲಿದ್ದೇವೆ. ಆಧುನಿಕ ವಿಜ್ಞಾನ, ತಂತ್ರಜ್ಞಾನಗಳ ಒಟ್ಟಿಗೆ ಜೀವನ ವಿಧಾನ ರೂಪಿಸಿಕೊಂಡು ಹೋಗುವ ತರಾತುರಿಯಲ್ಲಿ ನಾವಿರುವುದು ಸತ್ಯ. ಇದರ ಜೊತೆಗೆ ಸಾಮಾಜಿಕ ಜೀವನ ಎಂಬುದೊಂದಿದೆ ಎನ್ನುವ ಅಂಶವನ್ನು ನಾವು ಮರೆಯಬಾರದು. ಈ ಸಾಮಾಜಿಕ ಜೀವನವನ್ನು ರೂಪಿಸುವ ಹಲವಾರು ಸಂಗತಿಗಳು ಇರುವುದನ್ನು ನಾವು ಪರಿಗಣಿಸಿ ಅವುಗಳ ಮಹತ್ವವನ್ನು ಅರಿಯಬೇಕಾಗುತ್ತದೆ. ಅಂತಹ ಸಂಗತಿಗಳಲ್ಲಿ ಮಾನವನ ಮತ್ತು ಪ್ರಕೃತಿಯ ಅವಿಭಾಜ್ಯ ಅಂಗವಾಗಿರುವ ಗೋವು ಸಹ ಒಂದಾಗಿದೆ.

ಭಾರತೀಯ ಸಂಸ್ಕೃತಿ ಕಲಿಸಿದ ಪಾಠ

ಭಾರತೀಯರ ಜೀವನ ವಿಧಾನ ಮತ್ತು ಲೋಕದೃಷ್ಟಿಗಳನ್ನು ಗಮನಿಸಿದರೆ, ಸಕಲ ಜೀವಾತ್ಮಗಳನ್ನು ಗೌರವಿಸಿ, ವಸುಧೈವ ಕುಟುಂಬಕಂ ಎನ್ನುವ ತತ್ವ ಪ್ರಣೀತ ಸಿದ್ಧಾಂತವನ್ನು ಹೊಂದಿರುವುದು ಕಾಣಸಿಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳು ಎಲ್ಲಾ ಜೀವರಾಶಿಗಳು ಹಾಗೂ ಪ್ರಕೃತಿಗಿಂತ ಮನುಷ್ಯನೇ ಶ್ರೇಷ್ಠ ಎಂಬ ನಂಬಿಕೆಯ ಮೇಲೆ ಬದುಕಿದರೆ, ಇದಕ್ಕೆ ವ್ಯತಿರಿಕ್ತವಾಗಿ ಪ್ರಕೃತಿ ಹಾಗೂ ಜೀವ ಸಂಕುಲದೊಡನೆ ಒಂದಾಗುವ ಪ್ರಕ್ರಿಯೆಯನ್ನು ಭಾರತೀಯ ಸಂಸ್ಕೃತಿ ನಮಗೆಲ್ಲರಿಗೂ ಕಲಿಸಿದೆ. ಆದ್ದರಿಂದಲೇ ಪ್ರತಿ ಹಬ್ಬ, ಆಚರಣೆಗಳು ಪ್ರಕೃತಿಯ ಬೇರೆ ಬೇರೆ ಅಂಶಗಳನ್ನು ಆರಾಧಿಸುವ ಕ್ರಮಗಳನ್ನು ನಮ್ಮ ಪೂರ್ವಿಕರು ಬೆಳೆಸಿಕೊಂಡು ಬಂದಿದ್ದಾರೆ. ಪ್ರಕೃತಿ, ಪ್ರಾಣಿ ಪಕ್ಷಿಗಳಲ್ಲಿ ದೈವತ್ವವನ್ನು ಕಂಡುಕೊಂಡ ವಿಶಿಷ್ಟಸಂಸ್ಕೃತಿ ನಮ್ಮದಾಗಿದೆ. ಆದ್ದರಿಂದಲೇ ಹಸು, ಭೂಮಿ, ಆಗಸ, ಕಲ್ಲು ಇತ್ಯಾದಿಗಳು ದೈವೀ ಸ್ವರೂಪವನ್ನು ನಮ್ಮಲ್ಲಿ ಪಡೆದುಕೊಂಡಿವೆ.

ಬಹಳ ದಿನಗಳ ಕನಸು ನನಸು: ಕುಟುಂಬದೊಂದಿಗೆ ಸಂಭ್ರಮಿಸಿದ ಸಿಎಂ..!

ಗೋವೇ ಜೀವನಾಧಾರ

ಹಿಂದೂಗಳ ಜೀವನ ಪದ್ಧತಿಯಲ್ಲಿ ಯಾವುದೇ ಜೀವಿ ದೈವೀ ಸ್ವರೂಪವನ್ನು ಪಡೆಯುವುದೆಂದರೆ ಅದು ಎಂದೆಂದಿಗೂ ನಮ್ಮೊಡನೆ ಇರುವಂಥದ್ದೇ ಆಗಿದೆ ಎಂದು ಪರಿಭಾವಿಸುವುದೇ ಆಗಿರುತ್ತದೆ. ಆದ ಕಾರಣ, ಗೋವುಗಳು ಕೇವಲ ಕೃಷಿ ಮತ್ತು ಹೈನುಗಾರಿಕೆಗೆ ಮೀಸಲಾದ ಪ್ರಾಣಿಗಳಾಗಿ ಉಳಿಯಲಿಲ್ಲ. ಬದಲಿಗೆ ಮನುಷ್ಯನ ಬದುಕಿಗೆ ಆಸರೆಯಾಗಿ ಜೀವನಾಧಾರವಾಗಿ ಮುನ್ನಡೆದುಕೊಂಡು ಬಂದಿವೆ. ಪ್ರಾಯಶಃ ಇದಕ್ಕಾಗಿಯೆ ಗೋವಿಗೆ ಕಲ್ಪತರು ಎಂಬ ವಿಶೇಷ ಸ್ಥಾನಮಾನವನ್ನು ಭಾರತೀಯ ಸಂಸ್ಕೃತಿ ನೀಡಿದೆ. ಹಸುವಿನ ಹಾಲಿನಿಂದ ಹಿಡಿದು ಸಗಣಿಯವರೆಗೂ ಮನುಕುಲಕ್ಕೆ ಉಪಯುಕ್ತವಾದುದೇ ಆಗಿದೆ. ಇದನ್ನೇ ಗಾಂ​ಧೀಜಿಯವರು, ಹಿಂದೂ ಜೀವನ ಪದ್ಧತಿಯಲ್ಲಿ ಗೋವಿನ ಪಾವಿತ್ರ್ಯತೆ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದರು.

ಗೋಹತ್ಯೆ ಮಾಡುವುದು ಹಾಗೂ ಮನುಷ್ಯ ಹತ್ಯೆ ಮಾಡುವುದು ಎರಡೂ ಸಮ ಎಂಬುದು ಗಾಂಧೀಜಿಯ ನಿಲುವಾಗಿತ್ತು. ನನಗೆ ಒಂದು ದಿನ ಅಧಿ​ಕಾರ ದೊರೆತರೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇ​ಧಿಸುತ್ತೇನೆ ಎಂದೂ ಅವರು ಹೇಳಿದ್ದರು. ಹಾಗೆಯೇ ಸಂವಿಧಾನ ರಚನಾ ಸಭೆಯಲ್ಲಿ ಗೋಹತ್ಯೆಯ ಕುರಿತು ಸುದೀರ್ಘ ಚರ್ಚೆಗಳು ನಡೆದಾಗ, ರಾಜ್ಯ ನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಗೋರಕ್ಷಣೆಯ ಕಾರ್ಯತಂತ್ರಗಳ ಕುರಿತು ಪ್ರಭುತ್ವ ಅನುಸರಿಸಬೇಕಾದ ಕಾರ್ಯಗಳ ಕುರಿತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಅದಕ್ಕೆ ಶಾಸನೀಯ ಸ್ಥಾನಮಾನವನ್ನು ಕಲ್ಪಿಸಿಕೊಟ್ಟರು.

ಬ್ರಿಟಿಷರು ಹಬ್ಬಿಸಿದ ಸುಳ್ಳು

ಹಿಂದೂಗಳು ಗೋಹತ್ಯೆಯನ್ನು ವಿರೋಧಿ​ಸಿದರೆ, ವೇದಗಳ ಕಾಲದಲ್ಲಿ ಬ್ರಾಹ್ಮಣರು ಗೋವುಗಳ ಭಕ್ಷಣೆ ಮಾಡುತ್ತಿದ್ದರು ಎಂಬ ಊಹಾಪೋಹ ಕಥೆಗಳನ್ನು ಎಗ್ಗಿಲ್ಲದೆ ವಿರೋ​ಧಿಗಳು ಹೆಣೆಯಲು ಪ್ರಾರಂಭಿಸುತ್ತಾರೆ. ಆದರೆ ಇದರ ಕುರಿತು ವಿಸ್ತೃತವಾಗಿ ಅಧ್ಯಯನ ನಡೆಸಿರುವ ಧರಂಪಾಲ್‌ ಅವರು ಹೇಳುವಂತೆ, 17ನೇ ಶತಮಾನದ ನಂತರ ಬ್ರಿಟಿಷರು ಮಾಂಸ ಭಕ್ಷಣೆಗಾಗಿ ಗೋಹತ್ಯೆಯನ್ನು ಯಥೇಚ್ಛವಾಗಿ ಮಾಡಲು ಪ್ರಾರಂಭಿದಾಗ, ಭಾರತದಲ್ಲಿ ಎದ್ದ ವಿರೋಧಿ​ ಅಲೆಯನ್ನು ತಣ್ಣಗಾಗಿಸಲು ಬೌದ್ಧಿಕ ಮಾರ್ಗವನ್ನು ಅನುಸರಿಸಿದರು. ವೇದಗಳ ಕಾಲದಲ್ಲಿ ಗೋವಿನ ಮಾಂಸವನ್ನು ಬ್ರಾಹ್ಮಣರು ಭಕ್ಷಿಸುತ್ತಿದ್ದರು ಎಂಬಂತಹ ಸುಳ್ಳುಗಳನ್ನು ವ್ಯಾಪಾಕವಾಗಿ ಪ್ರಚಾರ ಮಾಡಲು ತೊಡಗಿದರು. ನೂರು ಸಾರಿ ಹೇಳಿದ ಸುಳ್ಳನ್ನೇ ಸತ್ಯ ಎಂದು ನಂಬಿದ ಕೆಲವು ಸುಧಾರಕರೂ ಸಹ ಅದನ್ನು ನಂಬಿದರು. ಆದರೆ ವಾಸ್ತವವಾಗಿ ಯಜ್ಞ ಯಾಗಾದಿಗಳಲ್ಲಿ ಅಥವಾ ಇತರೆ ಯಾವುದೇ ಆಚರಣೆಗಳಲ್ಲಿ ಗೋವುಗಳನ್ನು ಬಲಿ ನೀಡುವ ಪದ್ಧತಿ ಭಾರತದಲ್ಲಿ ಯಾವ ಕಾಲದಲ್ಲಿಯೂ ಇರಲಿಲ್ಲ.

ವೈದಿಕ ಗ್ರಂಥಗಳೇ ಗೋವು ವಿಶ್ವಮಾತೆ ಎಂದು ತಿಳಿಸುತ್ತವೆ. ಆಕೆ ಇಡೀ ಬ್ರಹ್ಮಾಂಡದ ತಾಯಿ ಎನ್ನುವುದು ನಮ್ಮ ಪುರಾತನ ಗ್ರಂಥಗಳ ಸಾರವಾಗಿದೆ. ನಮ್ಮ ಬದುಕಿನುದ್ದಕ್ಕೂ ಗೋ‘ಮಾತೆ’ಯಾಗಿ ಆಕೆ ಅಸ್ತಿತ್ವದಲ್ಲಿ ಇದ್ದಾಳೆ. ಮುಕ್ಕೋಟಿ ದೇವರುಗಳಲ್ಲಿ ಗೋವು ಕೂಡ ಒಂದು. ಗೋವಿನ ಪ್ರತಿ ನಾಡಿಯಲ್ಲಿಯೂ ನಾವು ದೇವರನ್ನು ಕಾಣುತ್ತೇವೆ. ಗೋವಿನ ಮುಖದಲ್ಲಿ ಬ್ರಹ್ಮನನ್ನು, ಕಂಠದಲ್ಲಿ ರುದ್ರನನ್ನು, ಕಣ್ಣುಗಳಲ್ಲಿ ವಿಷ್ಣುವನ್ನು, ಎರಡು ಕೊಂಬುಗಳಲ್ಲಿ ಸೂರ್ಯಚಂದ್ರರನ್ನು, ನಾಲ್ಕು ಕಾಲುಗಳ ಎಂಟು ಗೊರಸುಗಳಲ್ಲಿ ಅಷ್ಟದಿಕ್ಪಾಲಕರನ್ನು, ರೋಮ ರೋಮಗಳಲ್ಲಿ ಕೋಟಿ ಕೋಟಿ ದೇವರುಗಳನ್ನು, ಬಾಲದಲ್ಲಿ ಸರ್ಪ ಸಂತತಿಯನ್ನು ಕಾಣುವ ಸಂಸ್ಕೃತಿ ನಮ್ಮದಾಗಿದೆ.

ಇದು ಆಹಾರದ ಹಕ್ಕಿನ ಪ್ರಶ್ನೆಯೇ?

ಭಾರತದಲ್ಲಿರುವ ನಿಮ್ನ ವರ್ಗದ ಕೆಲವು ಸಮುದಾಯಗಳು ಗೋವುಗಳನ್ನು ಆಹಾರ ಪದ್ಧತಿಯನ್ನಾಗಿ ಮಾಡಿಕೊಂಡಿವೆ. ಇಂತಹ ವಿಧೇಯಕದ ಮೂಲಕ ಕೆಲವು ಸಮುದಾಯಗಳ ಆಹಾರದ ಹಕ್ಕನ್ನು ಕಸಿದುಕೊಳ್ಳುವ ತಂತ್ರ ಹೆಣೆಯಲಾಗಿದೆ ಎಂಬ ಟೀಕೆಗಳು ಎದ್ದಿವೆ. ಆದರೆ ನಿಜವಾಗಿ ನೋಡಿದರೆ, ಅಂತಹ ಆಹಾರ ಸೇವಿಸುವ ಸಮುದಾಯಗಳು ಗೋಹತ್ಯೆಯನ್ನು ನಡೆಸಿ ಮಾಂಸ ಭಕ್ಷಣೆ ಮಾಡುವ ಇತಿಹಾಸವಾಗಲಿ, ಸಂಸ್ಕೃತಿಯಾಗಲಿ ಭಾರತದಲ್ಲಿ ನಮಗೆ ಕಾಣಸಿಗುವುದಿಲ್ಲ. ಸತ್ತ ದನಗಳನ್ನು ಆಹಾರವಾಗಿಯೋ ಅಥವಾ ಮತ್ಯಾವುದೋ ಉಪಯೋಗಕ್ಕಾಗಿ ಬಳಸಿಕೊಳ್ಳುವುದು ಬೇರೆ. ಆದರೆ ಉಪಯೋಗಕ್ಕಾಗಿ ದನಗಳನ್ನು ಹತ್ಯೆ ಮಾಡುವುದು ಬೇರೆ. ಆದರೆ ದುರದೃಷ್ಟಕ್ಕೆ ಕೇವಲ ಸುಳ್ಳು ಕಥೆಗಳನ್ನೇ ನಂಬಿರುವ ನಮಗೆ ಇಂತಹ ಸತ್ಯಗಳು ಬಹುಬೇಗನೇ ಅರ್ಥವಾಗಲಿಕ್ಕಿಲ್ಲ. ಹೀಗಾಗಿ ನಮ್ಮ ಸಂಸ್ಕೃತಿಯ ಸುತ್ತ ಹೊಸೆದಿರುವ ಕಥೆಗಳು ಸುಳ್ಳು, ಅಂತಹ ಕತೆಗಳನ್ನು ಬ್ರಿಟಿಷರು ಹೆಣೆದಿದ್ದಾರೆ ಎನ್ನುವ ಸತ್ಯವನ್ನು ತಿಳಿದುಕೊಳ್ಳಲು ಬಹಳ ಸಮಯ ಬೇಕಾಯಿತು.

ಮೋದಿ ಬಂದ ಮೇಲೆ ಆದ ದೊಡ್ಡ ಬದಲಾವಣೆಯೊಂದನ್ನು ಹೇಳಿದ ಯೋಗಿ

ಐತಿಹಾಸಿಕ ಸತ್ಯ ಏನು?

ಸುಮಾರು 8ನೇ ಶತಮಾನದಿಂದಲೇ ಇಸ್ಲಾಂ ದಾಳಿಕೋರರು ಭಾರತವನ್ನು ಪ್ರವೇಶಿಸಿದ್ದರು. 13ನೇ ಶತಮಾನದ ಹೊತ್ತಿಗೆ ಇಸ್ಲಾಂ ಆಡಳಿತದ ಪ್ರಾಬಲ್ಯ ಉತ್ತರ ಭಾರತದಲ್ಲಿ ಹೆಚ್ಚಾಯಿತು. ಒಂದು ಸಂಶೋಧನೆಯ ಪ್ರಕಾರ, ಇಸ್ಲಾಂ ಹುಟ್ಟಿದ ನಾಡಿನಲ್ಲಿ ಬಕ್ರೀದ್‌ ದಿನದಂದು ಕುರಿ, ಮೇಕೆ ಹಾಗೂ ಒಂಟೆಗಳನ್ನು ಬಲಿ ನೀಡುವ ಪದ್ಧತಿ ಇತ್ತು. ಅದರ ಅರ್ಥ ಗೋವುಗಳನ್ನು ಬಲಿ ನೀಡುವ ಆಚರಣೆ ಇಸ್ಲಾಂನ ಮೂಲ ನೆಲದಲ್ಲಿಯೇ ಇರಲಿಲ್ಲ. ಆದರೆ ಭಾರತದಲ್ಲಿ ಅವರ ಆಡಳಿತ ಪ್ರಬಲವಾಗುತ್ತಾ ಬಂದಂತೆ ಬಕ್ರೀದ್‌ಗಳಲ್ಲಿ ಕುರಿ ಮೇಕೆಗಳ ಜೊತೆಗೆ ಒಂಟೆಗಳ ಬದಲಿಗೆ ಹಸುಗಳನ್ನು ಬಲಿ ಕೊಡುವ ಪದ್ಧತಿಯನ್ನು ರೂಢಿಸಿಕೊಂಡರು.

ಇದಕ್ಕೆ ಸ್ಥಳೀಯ ಭಾರತೀಯರು ವಿರೋಧ ವ್ಯಕ್ತಪಡಿಸಿದಾಗ ಅವರ ವಿರೋಧವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕಾರ್ಯವನ್ನು ಮುಸ್ಲಿಂ ಆಡಳಿತಗಾರರು ಮಾಡಿದರು. ಇಸ್ಲಾಂನ ಕ್ರೌರ್ಯ ಹಾಗೂ ಬ್ರಿಟಿಷರ ಸುಳ್ಳುಗಳನ್ನು ವಿರೋಧಿ​ಸಲು ಉತ್ತರ ಭಾರತದಲ್ಲಿ 17ನೇ ಶತಮಾನದಲ್ಲಿ ಹಲವಾರು ಗೋರಕ್ಷಣಾ ಸಮಿತಿ, ಸಭೆಗಳು ಹುಟ್ಟಿದವು. ಅವುಗಳನ್ನು ಕಾಲಕ್ರಮೇಣ ದಮನ ಮಾಡಲಾಯಿತು ಎನ್ನುವುದು ಐತಿಹಾಸಿಕ ಸತ್ಯ.

ಕಾಂಗ್ರೆಸ್‌ ಏಕೆ ವಿರೋಧಿಸುತ್ತಿದೆ?

ಇಂದು ಕಾಂಗ್ರೆಸ್‌ ಪಕ್ಷ ಯಾವ ಸಮುದಾಯದ ಓಲೈಕೆಗಾಗಿ ಗೋಹತ್ಯೆ ಮಸೂದೆಯನ್ನು ವಿರೋಧಿ​ಸುತ್ತಿದೆಯೋ, ಆ ಸಮುದಾಯದ ಮೂಲ ನೆಲದಲ್ಲಿ ಗೋಹತ್ಯೆ ಮುಖ್ಯವಾಗಿರಲಿಲ್ಲ. ಆದರೆ ಭಾರತಕ್ಕೆ ಬಂದ ತರುವಾಯ ಅವರ ಆಹಾರ ಪದ್ಧತಿ ಬದಲಾದ ವಿಚಾರವಾಗಲಿ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಗೋವಿನ ಪರಂಪರೆಯ ವೈಶಿಷ್ಟ್ಯತೆಯಾಗಲೀ ಯಾವುದೂ ತಿಳಿದಿಲ್ಲ. ಭಾರತೀಯ ಸಂಸ್ಕೃತಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಬೇರೆಯದೆ ವಿಷಯ, ಅದರ ಕುರಿತು ಹೆಚ್ಚು ಬರೆಯುವ ಅಗತ್ಯವಿಲ್ಲ. ಬ್ರಿಟಿಷರು ಗೋಹತ್ಯೆ ಕುರಿತು ಹೇಳಿದ ಕಥಾಕಥಿತ ಸುಳ್ಳುಗಳನ್ನೇ ಇಂದಿಗೂ ಕಾಂಗ್ರೆಸ್‌ ಪಕ್ಷ ಮುಂದುವರೆಸಿಕೊಂಡು ಬರುತ್ತಿದೆ.

ಗಾಂಧಿ ತತ್ವವನ್ನೇ ಮರೆತ ಕಾಂಗ್ರೆಸ್‌

ಹಿಂದೂ ಜೀವನ ಕ್ರಮದ ಕುರಿತು ಲವಶೇಷ ಮಾಹಿತಿಯೂ ಇಲ್ಲದ ಕಾಂಗ್ರೆಸ್‌, ಇಂದು ವಿಧೇಯಕವನ್ನು ವಿರೋ​ಧಿಸುವ ಮೂಲಕ, ಅದರ ಸೈದ್ಧಾಂತಿಕ ಬದ್ಧತೆಯ ದಾರಿದ್ರ್ಯ ಮತ್ತು ಲಜ್ಜೆಗೇಡಿ ಓಲೈಕೆ ರಾಜಕಾರಣದ ಮೂರ್ಖತನವನ್ನು ಪ್ರದರ್ಶಿಸುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರವು ನಾಗರಿಕತ್ವದ ತಿದ್ದುಪಡಿ ಮಸೂದೆ, ಕೃಷಿ ಮಸೂದೆಗಳನ್ನು ಜಾರಿಗೆ ತಂದಾಗಲೂ, ಆ ಕಾಯ್ದೆಗಳ ಮಹತ್ವ ಮತ್ತು ಭಾರತಕ್ಕೆ ಅದರಿಂದಾಗುವ ಲಾಭಗಳನ್ನು ಸ್ವಲ್ಪವೂ ಯೋಚಿಸದೆ ಬೇರೆಯವರ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ಪಕ್ಷಕ್ಕೆ ತನ್ನ ಮೌಲ್ಯಗಳೇನು, ಆದರ್ಶಗಳೇನು ಎಂದು ಮರುಚಿಂತಿಸುವ ಅಗತ್ಯ ಎದ್ದುಕಾಣುತ್ತಿದೆ.

ರೈತರ ಕುರಿತು, ಗ್ರಾಮೀಣ ಬದುಕಿನ ಕುರಿತು, ಭಾರತೀಯ ಸಂಪ್ರದಾಯಗಳ ಕುರಿತು, ಗೋವುಗಳ ಕುರಿತು ಮಹಾತ್ಮ ಗಾಂಧಿ​ ಏನು ಹೇಳಿದ್ದರು ಎಂಬುದನ್ನು ಕಾಂಗ್ರೆಸ್ಸಿಗರು ಸರಿಯಾಗಿ ಅರ್ಥಮಾಡಿಕೊಂಡರೆ ಅವರ ವಿರೋಧದಲ್ಲಿರುವ ಇಬ್ಬಂದಿತನದ ನಿಲುವು ಅವರಿಗೆ ಅಸಹ್ಯವನ್ನು ಹುಟ್ಟಿಸುತ್ತದೆ. ಗಾಂಧಿ​ ಹೆಸರಿನಲ್ಲಿ ಮುಂಚೂಣಿಗೆ ಬಂದ ಪಕ್ಷವೊಂದು ಅಸಲಿ ಗಾಂಧಿ​ಯ ಆದರ್ಶಗಳನ್ನು ಗಾಳಿಗೆ ತೂರಿ, ಅವರ ಮೌಲ್ಯಗಳಿಗೂ ಎಳ್ಳುನೀರು ಬಿಟ್ಟು, ಇಂದು ಅ​ಧಿಕಾರ ಅಂಚಿಗೆ ಹೋಗಿ ಕುಳಿತುಕೊಳ್ಳುವ ಅವಕಾಶವನ್ನು ತಾನೇ ಸೃಷ್ಟಿಮಾಡಿಕೊಂಡಿದೆ. ಸಮಾಜವನ್ನು ಒಗ್ಗೂಡಿಸಲು, ನಮ್ಮ ಪರಂಪರೆಗಳನ್ನು ಉಳಿಸಿಕೊಳ್ಳಲು ಹಾಗೂ ಮಾನವ ಅಭಿವೃದ್ಧಿಯ ಪಥವನ್ನು ಸರಿಯಾದ ದಾರಿಗೆ ಕೊಂಡೊಯ್ಯಲು ಅ​ಧಿಕಾರವನ್ನು ಪಡೆಯುವ ಇಚ್ಛೆ ಇರಬೇಕೇ ಹೊರತು, ಗದ್ದುಗೆಗಾಗಿ ಗುದ್ದಿಸಿಕೊಂಡು ಮೂಲೆಗುಂಪಾಗುವ ಮಟ್ಟಕ್ಕೆ ಇಳಿಯಲು ಅಧಿ​ಕಾರವನ್ನು ಪಡೆಯಬಾರದು.

ಹಿಂದುತ್ವ ಕೇವಲ ಮತವಲ್ಲ

ಗೋಹತ್ಯೆ ಮಸೂದೆ ಈಗಾಗಲೇ ಅಂಗೀಕಾರವಾಗಿದೆ. ಭಾರತೀಯ ಪರಂಪರೆಯಿಂದಲೇ ಕವಲೊಡೆದ ಪಕ್ಷದಿಂದ ಮಾತ್ರವೇ ಇಂತಹ ಕಾಯ್ದೆಗಳನ್ನು ತರಲು ಸಾಧ್ಯ. ಸಂಸ್ಕೃತಿಯ ನೈಜ ತಳಹದಿ ನಿಂತಿರುವುದು ಪರಸ್ಪರ ಸಹಕಾರದ ತತ್ವದಿಂದ ಮಾತ್ರ. ಮನುಷ್ಯ ಮತ್ತು ಪ್ರಕೃತಿ ಪರಸ್ಪರ ಸಹಕಾರದ ಬುನಾದಿಯ ಮೇಲೆ ಬದುಕಿದರೆ ಮಾತ್ರ ಮನುಕುಲಕ್ಕೆ ಒಳಿತಾಗಲು ಸಾಧ್ಯ. ಇಂತಹ ಒಳಿತು ಮಾಡುವ ಕಾರ್ಯಗಳನ್ನು ಪ್ರಪಂಚಕ್ಕೆ ತಿಳಿಸಿಕೊಡುವ ಭೌತಿಕ ಮತ್ತು ಬೌದ್ಧಿಕ ಪರಂಪರೆ ಮತ್ತು ಸಂಸ್ಕೃತಿ ಭಾರತದಲ್ಲಿ ಮಾತ್ರ ಇರುವುದು ವಿಶೇಷ. ಅಂತಹ ಸಂಸ್ಕೃತಿಯೇ ಹಿಂದುತ್ವದ ನೈಜ ತಳಹದಿಯಾಗಿದೆ. ಹಿಂದುತ್ವ ಎನ್ನುವುದು ಕೇವಲ ಮತವಲ್ಲ, ಬದಲಿಗೆ ನಮ್ಮ ಸಂಸ್ಕೃತಿಯ ಮನಃಸಾಕ್ಷಿಯಾಗಿದೆ. ಹಿಂದುತ್ವ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿದೀತು.

- ಸಿ.ಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ