ಅನುಮತಿ ರಹಿತ ಪ್ರವಾಸ: ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೆಹಲಿಗೆ ದೂರು
ಯತ್ನಾಳ್ ಅವರು ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ. ರಾಜ್ಯ ನಾಯಕರು, ಜಿಲ್ಲಾ ನಾಯಕರಿಂದಲೂ ಅನುಮತಿ ಪಡೆದಿಲ್ಲ. ಹಾಗಾಗಿ ಅದು ಪಕ್ಷದ ಹೋರಾಟ ಆಗುವುದಿಲ್ಲ. ಅದು ಪಕ್ಷದ ಅಶಿಸ್ತು ಕೂಡ ಆಗುತ್ತದೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಪಕ್ಷದ ನಿಯಮ- ಶಿಸ್ತನ್ನು ಉಲ್ಲಂಘಿಸಿ ಹೇಳಿಕೆ ಕೊಟ್ಟರೆ, ಹೋರಾಟ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್
ಬೆಂಗಳೂರು(ನ.26): ವಕ್ಫ್ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದ ತಂಡ ನಡೆಸುತ್ತಿರುವ ಪ್ರವಾಸ ಅನುಮತಿ ರಹಿತವಾಗಿದ್ದು, ಅವರ ವಿರುದ್ಧ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದ್ದಾರೆ.
ಸೋಮವಾರ ಪಕ್ಷ ದಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷ. ಯತ್ನಾಳ ಅವರ ನಡೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಕೋರ್‌ಕಮಿಟಿ ಸದಸ್ಯರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಮಹಾತ್ಮ ಗಾಂಧಿ ಉಪವಾಸದಿಂದ ಸ್ವಾತಂತ್ರ್ಯ ಬಂದಿಲ್ಲ: ಯತ್ನಾಳ್ ವಿವಾದಾತ್ಮಾಕ ಹೇಳಿಕೆ
ಯತ್ನಾಳ್ ಅವರು ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ. ರಾಜ್ಯ ನಾಯಕರು, ಜಿಲ್ಲಾ ನಾಯಕರಿಂದಲೂ ಅನುಮತಿ ಪಡೆದಿಲ್ಲ. ಹಾಗಾಗಿ ಅದು ಪಕ್ಷದ ಹೋರಾಟ ಆಗುವುದಿಲ್ಲ. ಅದು ಪಕ್ಷದ ಅಶಿಸ್ತು ಕೂಡ ಆಗುತ್ತದೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಪಕ್ಷದ ನಿಯಮ- ಶಿಸ್ತನ್ನು ಉಲ್ಲಂಘಿಸಿ ಹೇಳಿಕೆ ಕೊಟ್ಟರೆ, ಹೋರಾಟ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಲ್ಲಿನವರೆಗೆ ರಾಜ್ಯದ ಹಂತದಲ್ಲೇ ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಳ್ಳಲಿಲ್ಲ. ಯತ್ನಾಳ ಅವರ ಈ ಕ್ರಮದ ಕುರಿತು ರಾಷ್ಟ್ರನಾಯಕರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ ಎಂದು ರಾಜೀವ್ ತಿಳಿಸಿದರು.
ಬಿಜೆಪಿ ಒಳಗೇ ವಕ್ಫ್ ಸಮರ: ಯತ್ನಾಳ್ ಬಣದ ಬೀದರ್ ಹೋರಾಟದಲ್ಲಿ ಸಂಘರ್ಷ, ಉದ್ವಿಗ್ನ ಸ್ಥಿತಿ
ಬೀದರ್: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಿಜೆಪಿ ಬಣ ಸೋಮವಾರ ಬೀದರ್ ಮೂಲಕ ಆರಂಭಿಸಿದ ವಕ್ಫ್ ವಿರುದ್ಧದ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪಕ್ಷದ ಸ್ಥಳೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಈ ಹೋರಾಟ ನಡೆಸಲಾಗುತ್ತಿದೆ.
ಇದು ಸರಿಯಲ್ಲ ಎಂದು ಆರೋಪಿಸಿ ಕೆಲ ಗ್ರಾಮದ ಬಿಜೆಪಿ ಕಾರ್ಯಕರ್ತರು ಯತ್ನಾಳ ಬಣದವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಈ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮಾತಿನ ಚಕಮಕಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪುವ ಹಂತದಲ್ಲೇ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಭಿನ್ನರಿಗೆ ವಿಜಯೇಂದ್ರ ಸಡ್ಡು: ವಕ್ಫ್ ಪ್ರವಾಸಕ್ಕೆ ಮೂರು ತಂಡ ರಚನೆ
ಆರಂಭದಲ್ಲೇ ವಿರೋಧ:
ಜಿಲ್ಲೆಯ ಐತಿಹಾಸಿಕ ನರಸಿಂಹ ಝರಣಾದೇಗುಲ ಭೇಟಿ ಬಳಿಕಯತ್ನಾಳ್ ನೇತೃತ್ವದ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮತ್ತಿತರರ ತಂಡ ಬೀದರ್ ದಕ್ಷಿಣ ಕ್ಷೇತ್ರದ ಧರ್ಮಾಪೂರ ಗ್ರಾಮಕ್ಕೆ ಭೇಟಿ ನೀಡಿತು. ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನ ನಡೆಸಲು ಮುಂದಾಯಿತು. ಆ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಕ್ಫ್ ಹೋರಾಟ ಕುರಿತು ಸ್ಥಳೀಯ ಶಾಸಕರಿಗೆ, ಸ್ಥಳೀಯ ಬಿಜೆಪಿ ಮುಖಂಡರಿಗೆ ಮಾಹಿತಿಯೇ ನೀಡಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಅವರು ರಾಜ್ಯದ ಬಿಜೆಪಿ ಮುಖಂಡರನ್ನು, ಜಿಲ್ಲೆಯ ಮುಖಂಡರನ್ನು ಕಡೆಗಣಿಸಿದ್ದಾರೆ. ಬ್ಯಾನರ್‌ಗಳಲ್ಲಿ ಕೇವಲ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭಾವಚಿತ್ರಗಳನ್ನು ಮಾತ್ರ ಹಾಕಿ ಬಿಜೆಪಿಯನ್ನು ಒಡೆಯುವ ಯತ್ನ ನಡೆಸಿದ್ದಾರೆಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಯತ್ನಾಳ್ ಬೆಂಬಲಿಗರು ಮತ್ತು ಗ್ರಾಮದ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಒಂದು ಹಂತದಲ್ಲಿ ನೂಕಾಟ-ತಳ್ಳಾಟ ನಡೆದು ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಮುಖಂಡರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ನಂತರಪಕ್ಷದ ಸ್ಥಳೀಯಕಾರ್ಯಕರ್ತರ ಅಸಮಾಧ ನದ ನಡುವೆ ಹೋರಾಟ ಮುಂದುವರಿಯಿತು.