ಬೆಂಗಳೂರು [ಜ.10]:  ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿರೋಧಪಕ್ಷದ ನಾಯಕ ಸ್ಥಾನ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ಆ ಹುದ್ದೆಗಳಿಗೆ ಅದರದೇ ಆದ ಕಿಮ್ಮತ್ತು ಇರುತ್ತದೆ. ಆ ಸ್ಥಾನದಲ್ಲಿ ಯಾರು ಕೂರಬೇಕು ಎಂದು ಲೆಕ್ಕಾಚಾರ ಮಾಡಿ ಹೈಕಮಾಂಡ್‌ ಆಯ್ಕೆ ಮಾಡುತ್ತದೆ. ಹೀಗಾಗಿ ಪದೇ ಪದೇ ನನ್ನ ಹೆಸರು ಹೇಳಬೇಡಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಗುರುವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಕೆಪಿಸಿಸಿ ಸ್ಥಾನದ ಕುರಿತು ನನ್ನನ್ನು ಏನೂ ಕೇಳಬೇಡಿ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದರಲ್ಲಿ ವಿಶೇಷತೆ ಇಲ್ಲ. ನಿತ್ಯ ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂಬುದು ನನಗೆ ಬಿಟ್ಟದ್ದು. ಸಿದ್ದರಾಮಯ್ಯ ಮಾತ್ರ ಅಲ್ಲ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ ಅವರನ್ನೂ ಸಹ ಭೇಟಿ ಮಾಡುತ್ತೇನೆ. ಹೀಗಾಗಿ ಅನಗತ್ಯವಾಗಿ ನನ್ನ ವಿಚಾರವನ್ನು ತರಬೇಡಿ ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ವಿರೋಧಪಕ್ಷದ ಸ್ಥಾನ ಮಹತ್ವವಾದುವು. ಈ ಬಗ್ಗೆ ಹೈಕಮಾಂಡ್‌ ಪರಿಶೀಲನೆ ನಡೆಸುತ್ತಿರುತ್ತದೆ. ಯಾರು ಸೂಕ್ತ ಎಂಬುದನ್ನು ಪರಿಶೀಲಿಸಿ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ವಿನಾಕಾರಣ ನನ್ನ ಹೆಸರು ಹೇಳುವುದು ಹಾಗೂ ನನಗೆ ಪ್ರಶ್ನೆ ಕೇಳುವುದು ಮಾಡುತ್ತಾರೆ. ಯಾರೂ ಈ ರೀತಿ ಮಾಡಬಾರದು ಎಂದರು.

10 ವರ್ಷ ಹಿಂದಿನ ಪ್ರಕರಣಕ್ಕೆ ಮರುಜೀವ: ಸಂಕಷ್ಟದಲ್ಲಿ ಯಡಿಯೂರಪ್ಪ, ಡಿಕೆಶಿ...

ಡಿ.ಕೆ.ಶಿವಕುಮಾರ್‌ ರಾಜ್ಯ ರಾಜಕೀಯಕ್ಕೆ ಬರುತ್ತಾರಾ ಅಥವಾ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸದ್ಯ ನಾನು ಕನಕಪುರದಲ್ಲಿ ಕಲ್ಲು ಒಡೆದುಕೊಂಡು, ರೇಷ್ಮೆ, ಕಡಲೆಕಾಯಿ ಬೆಳೆದುಕೊಂಡು ಇರ್ತೀನಿ’ ಎಂದು ನಗುತ್ತಾ ಉತ್ತರಿಸಿದರು.