ನವದೆಹಲಿ/ಬೆಂಗಳೂರು, (ಜ.07): 2010 ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ತಮ್ಮ ರಾಜಕೀಯ ಮಿತ್ರ ಡಿ.ಕೆ.ಶಿವಕುಮಾರ್ ಅವರಿಗಾಗಿ ಜಮೀನು ಡಿನೋಟಿಫಿಕೇಶನ್ ಮಾಡಿದ್ದಾರೆನ್ನುವ ಆರೋಪ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ.

ಇಂದು (ಮಂಗಳವಾರ) ಹಿರೇಮಠ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ,‘‘ಲೋಕಾಯುಕ್ತದಲ್ಲಿ ಸಲ್ಲಿಸಿದ್ದ ದೂರಿನ ಸ್ಥಿತಿಗತಿ ಏನು..? ಯಾಕೆ ಈ ಪ್ರಕರಣ ತಡೆ ಆಯ್ತು..? ಹೈಕೋರ್ಟ್‌ನಲ್ಲಿ ನೀವು ಯಾವ ಕಾರಣಕ್ಕೆ ಭಾಗಿಯಾಗಿರಲಿಲ್ಲ"? ಅಂತೆಲ್ಲಾ ಪ್ರಶ್ನೆಗಳನ್ನು ಹಾಕಿದ್ದು, ಈ ಪ್ರಕರಣದಲ್ಲಿ ನಿಮ್ಮ ಪಾತ್ರದ ಬಗ್ಗೆ  ವಿವರಿಸಿ ಅಫಿಡೆವಿಟ್ ಸಲ್ಲಿಸುವಂತೆ ಸೂಚಿಸಿದೆ.

ಹುಟ್ಟುಹಬ್ಬದಂದು ಬಿಎಸ್'ವೈ'ಗೆ ಗಿಫ್ಟ್ ಕೊಡಲು ರೆಡಿಯಾಗಿರುವ ರಾಜ್ಯ ಸರ್ಕಾರ !

ಅಷ್ಟೇ ಅಲ್ಲದೇ ನೀವು ಲೋಕಾಯುಕ್ತಕ್ಕೆ ಯಾವಾಗ ಹೋಗಿದ್ರಿ..? ಲೋಕಾಯುಕ್ತ ಏನು ಮಾಡಿತು..? ಸಂಪೂರ್ಣ ಮಾಹಿತಿಯೊಂದಿಗೆ ಹೊಸ ಅರ್ಜಿ ಸಲ್ಲಿಸುವಂತೆ ಸುಪ್ರಿಂ ಸಿಜೆಐ, ಹಿರೇಮಠ ಪರ ವಕೀಲ ಪ್ರಶಾಂತ್ ಭೂಷಣ್‌ಗೆ ತಿಳಿಸಿ 2 ವಾರಗಳ ಕಾಲ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು. 

ಇನ್ನು ಸಿಎಂ ಯಡಿಯೂರಪ್ಪ ಪರ ಮುಕುಲ್ ರೋಹಟಗಿ ವಾದ ಮಂಡಿಸಿದ್ರೆ,  ಕಾಂಗ್ರೆಸ್ ನಾಯಕ ಡಿಕೆಶಿ ಪರ ಹಿರಿಯ ವಕೀಲ ನರಸಿಂಹನ್ ವಾದ ಮಾಡಿದರು.

BSYಗೆ ಸುಪ್ರೀಂ ಬಿಗ್​ ರಿಲೀಫ್​: ಹೈಕೋರ್ಟ್ ಅಂಗಳಕ್ಕೆ ಡಿನೋಟಿಫಿಕೇಷನ್ ಚೆಂಡು

ಪ್ರಕರಣದ ಮುಖ್ಯ ಅರ್ಜೀದಾರರಾಗಿದ್ದ ಕಬ್ಬಾಳೆಗೌಡ ಮತ್ತು ಟಿ.ಅಬ್ರಹಾಂ ಅವರು ಅರ್ಜಿಯನ್ನು ಹಿಂಪಡೆದಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಲೋಕಾಯುಕ್ತ ಹಾಗೂ ಕರ್ನಾಟಕ ಹೈಕೋರ್ಟ್‌ನಲ್ಲಿ ರದ್ದಾಗಿತ್ತು ಆದರೆ ಸಮಾಜ ಪರಿವರ್ತನಾ ಸಂಸ್ಥೆಯ ಎಸ್‌.ಆರ್.ಹಿರೇಮಠ ಅವರು ಈ ಪ್ರಕರಣವನ್ನು ತೆಗೆದುಕೊಂಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಏನಿದು ಪ್ರಕರಣ..?:
1962 ರಲ್ಲಿ ಬಿ.ಕೆ.ಶ್ರೀನಿವಾಸ್ ಅವರು ಕೊಂಡಿದ್ದ 5.11 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. 2010 ರ ಮೇ 13 ರಂದು ಯಡಿಯೂರಪ್ಪ ಅವರು 4.5 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದರು. ಡಿನೋಟಿಫೈ ಆದ ಈ ಜಮೀನನ್ನು ಡಿ.ಕೆ.ಶಿವಕುಮಾರ್ ಖರೀದಿಸಿದ್ದರು. ಡಿ.ಕೆ.ಶಿವಕುಮಾರ್‌ ಅವರಿಗೆ ಅನುಕೂಲ ಮಾಡಿಕೊಡಲೆಂದೇ ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪ.

ಈ ಬಗ್ಗೆ ಕಬ್ಬಾಳೆಗೌಡ ಮತ್ತು ಟಿ.ಅಬ್ರಹಾಂ ಅವರು ಲೋಕಾಯುಕ್ತಕ್ಕೆ ಹಾಗೂ ಹೈಕೋರ್ಟ್‌ಗೆ ದೂರು ನೀಡಿದ್ದರು. ಆದ್ರೆ, ಪ್ರಕರಣದ ಮುಖ್ಯ ಅರ್ಜೀದಾರರಾಗಿದ್ದ ಕಬ್ಬಾಳೆಗೌಡ ಮತ್ತು ಟಿ.ಅಬ್ರಹಾಂ ಅವರು ಅರ್ಜಿಯನ್ನು ಹಿಂಪಡೆದಿದ್ದರು. 

ಆದರೆ ಸಮಾಜ ಪರಿವರ್ತನಾ ಸಂಸ್ಥೆಯ ಎಸ್‌.ಆರ್.ಹಿರೇಮಠ ಅವರು ಪ್ರಕರಣವನ್ನು ಮುನ್ನಡೆಸಲು ಅನುಮತಿ ಕೋರಿದ್ದರಿಂದ ಅವರಿಗೆ ಅನುಮತಿ ನೀಡಲಾಗಿತ್ತು. ಅದರಂತೆ ಹಿರೇಮಠ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.