Asianet Suvarna News Asianet Suvarna News

ಪಂಚರಾಜ್ಯ ಚುನಾವಣೆಗಾಗಿ ಹೈಕಮಾಂಡ್‌ ನಯಾಪೈಸೆ ಕೇಳಿಲ್ಲ: ಸಿದ್ದರಾಮಯ್ಯ

ಚುನಾವಣೆಗಾಗಿ ನಮಗೆ ಹೈಕಮಾಂಡ್‌ ನಯಾ ಪೈಸೆ ಹಣ ಕೇಳಿಲ್ಲ. ಈ ವಿಚಾರದಲ್ಲಿ ಬಿಜೆಪಿ ಆರೋಪ ನಿರಾಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. 

High Command has not asked for money for elections Says CM Siddaramaiah gvd
Author
First Published Oct 18, 2023, 8:23 AM IST

ಮೈಸೂರು (ಅ.18): ಚುನಾವಣೆಗಾಗಿ ನಮಗೆ ಹೈಕಮಾಂಡ್‌ ನಯಾ ಪೈಸೆ ಹಣ ಕೇಳಿಲ್ಲ. ಈ ವಿಚಾರದಲ್ಲಿ ಬಿಜೆಪಿ ಆರೋಪ ನಿರಾಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸುದ್ದಿಗಾರರ ಜತೆಗೆ ಮಾತನಾಡಿ ಗುತ್ತಿಗೆದಾರನನ್ನು ಬಿಜೆಪಿ ಗುತ್ತಿಗೆದಾರ, ಕಾಂಗ್ರೆಸ್ ಗುತ್ತಿಗೆದಾರ ಎಂದು ಹೇಳಲು ಆಗುತ್ತದೆಯೇ? ಐಟಿ ದಾಳಿಗೊಳಗಾದವನು ಬಿಜೆಪಿ ಗುತ್ತಿಗೆದಾರ ಎಂದು ಈಗ ನಾನು ಹೇಳುತ್ತೇನೆ. ಅದನ್ನು ಯಾರು ಒಪ್ಪಿಕೊಳ್ಳುತ್ತಾರೆ? ಪಂಚ ರಾಜ್ಯಗಳ ಚುನಾವಣೆಗೂ ನಮಗೂ ಏನ್‌ ಸಂಬಂಧ? ನಾವೇನಾದರೂ ಕರ್ನಾಟಕದ ಚುನಾವಣೆಗೆ ಹೋಗಿ ಯಾರಾನ್ನಾದರೂ ಹಣ ಕೇಳಿದ್ದೆವಾ? 

ಈಗ ಅವರಿಗೆ ಕೊಡಬೇಕು ಇವರಿಗೆ ಕೊಡಬೇಕು ಅನ್ನುವ ಆರೋಪದಲ್ಲಿ ಅರ್ಥವೇ ಇಲ್ಲ ಎಂದರು. ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಇದು ಸರ್ಕಾರದ ದುಡ್ಡು ಎಂದು ಐಟಿ ಏನಾದರೂ ಹೇಳಿದೆಯಾ? ಐಟಿ ಏನಾದರೂ ಸರ್ಕಾರದ ಮೇಲೆ ಆರೋಪ ಮಾಡಿದೆಯಾ? ಇದರ ಬಗ್ಗೆ ನಾವೇಕೆ ತನಿಖೆ ಮಾಡಬೇಕು? ಐಟಿ ದಾಳಿಗಳು ನಡೆಯುವುದು ಸಾಮಾನ್ಯ. ಈಗ ನಡೆದಿರುವ ದಾಳಿ ಕೂಡ ಅದರ ಒಂದು ಭಾಗ. ಇದನ್ನು ರಾಜಕೀಯಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಅಷ್ಟೇ ಎಂದು ಹೇಳಿದರು.

ಒರಿಜಿನಲ್‌ ಜೆಡಿಎಸ್‌ಗೆ ನಾನೇ ಅಧ್ಯಕ್ಷ, ಇಂಡಿಯಾಕ್ಕೆ ನಮ್ಮ ಬೆಂಬಲ: ಇಬ್ರಾಹಿಂ

2 ರಿಂದ 3 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಕೊರತೆ ಇದೆ: ರಾಜ್ಯದಲ್ಲಿ 2 ರಿಂದ 3 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಕೊರತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನೆ ನಡೆಯಲಿಲ್ಲ. ಆದ್ದರಿಂದ ಸಮಸ್ಯೆ ಎದುರಾಗಿದೆ. ಹೊರಗಿನಿಂದ ವಿದ್ಯುತ್ ಖರೀದಿಸಲು ನಾನೂ ಸೂಚಿಸಿದ್ದೇನೆ. ಸಕ್ಕರೆ ಕಾರ್ಖಾನೆಯಿಂದಲೂ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಇಬ್ರಾಹಿಂ ಒರಿಜಿನಲ್‌ ಪಕ್ಷ ಎಂಬ ಬೋರ್ಡ್‌ ಹಾಕಿಕೊಳ್ಳಲಿ: ಎಚ್‌.ಡಿ.ಕುಮಾರಸ್ವಾಮಿ ಗರಂ

ಆದಷ್ಟು ರೈತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ‌. ರೈತರು ನಿರಂತರವಾಗಿ 4 ಗಂಟೆ ತ್ರಿಫೇಸ್ ವಿದ್ಯುತ್ ಕೊಟ್ಟರೆ ಸಾಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು. ರಾಜ್ಯದಲ್ಲಿ ಕುಡಿಯುವ ‌ನೀರು, ಮೇವಿನ ಕೊರತೆ, ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ 236 ತಾಲೂಕುಗಳಲ್ಲಿ ಪೈಕಿ 216 ತಾಲೂಕುಗಳು ಬರಪೀಡಿತವಾಗಿವೆ. ಸುಮಾರು 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಅಗತ್ಯಬಿದ್ದರೆ ಹೊಸದಾಗಿ ಬೋರ್‌ವೆಲ್‌ ಕೊರೆಸಲು ಸೂಚಿಸಲಾಗಿದೆ ಎಂದು ಹೇಳಿದರು.

Follow Us:
Download App:
  • android
  • ios