ಮೋದಿಗೆ ಜನ್ಮ ನೀಡಿದ್ದೆ ಮಹಾ ಅಪರಾಧ, ಮೋದಿ ತಾಯಿ ವಿರುದ್ಧ ಆಪ್ ಅಧ್ಯಕ್ಷನ ವಿವಾದಾತ್ಮಕ ಹೇಳಿಕೆ!
ಗುಜರಾತ್ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ಗುಜರಾತ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವಿಗಾಗಿ ಶತ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಆಪ್ ಅಧ್ಯಕ್ಷ ಗೋಪಾಲ್ ಇಟಾಲಿಯಾ ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಮೋದಿ ನೀಚ, ಹಿಂದೂ ದೇವಸ್ಥಾನ ಶೋಷಣೆ ಕೇಂದ್ರ ಎಂದು ವಿವಾದ ಸೃಷ್ಟಿಸಿದ ಗೋಪಾಲ್ ಇದೀಗ ಪ್ರಧಾನಿ ಮೋದಿ ತಾಯಿಯನ್ನು ಟೀಕಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಸುಖಾಸುಮ್ಮನೆ ಮೋದಿ ತಾಯಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆಮ್ ಆದ್ಮಿ ಅಧ್ಯಕ್ಷನ ವಿರುದ್ಧ ಬಿಜೆಪಿ ಖಡಕ್ ತಿರುಗೇಟು ನೀಡಿದೆ.
ಅಹಮ್ಮದಾಬಾದ್(ಅ.14): ಗುಜರಾತ್ ಚುನಾವಣೆಯಲ್ಲಿ ಹೊಸ ಅಧ್ಯಾಯ ರಚಿಸಲು ಆಮ್ ಆದ್ಮಿ ಪಾರ್ಟಿ ಶಕ್ತಿ ಮೀರಿ ಯತ್ನಿಸುತ್ತಿದೆ. ಆಪ್ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದಾರೆ. ಬಿಜೆಪಿ ನೇರ ಟಾರ್ಗೆಟ್ ಮಾಡಿರುವ ಆಪ್ ದಿನಕ್ಕೊಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕುತ್ತಿದೆ. ಗುಜರಾತ್ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಗೋಪಾಲ್ ಇಟಾಟಲಿಯಾ ಪ್ರತಿ ದಿನ ಹೊಸ ಹೊಸ ವಿವಾದ ಸೃಷ್ಟಿಸುತ್ತಿದ್ದಾರೆ. ಪ್ರಧಾನಿ ಮೋದಿ ನೀಚ, ಭಾರತೀಯರನ್ನು ಸಿ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಈಗಾಗಲೇ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಗೋಪಾಲ್ ಇಟಾಲಿಯಾ ನಾಲಗೆ ಹಿಡಿತದಲ್ಲಿ ಇಟ್ಟುಕೊಂಡಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ತಾಯಿ ಹಿರಾ ಬೆನ್ ವಿರುದ್ಧ ಹೇಳಿಕೆ ನೀಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ರಾಜಕೀಯದಲ್ಲೇ ಇಲ್ಲದ ಮೋದಿ ತಾಯಿಯನ್ನು ತನ್ನ ಟೀಕೆಗೆ ಬಳಸಿಕೊಂಡಿರುವುದು ಬಿಜೆಪಿ ಕೆರಳಿಸಿದೆ. ಹಿರಾ ಬೆನ್ ಮಾಡಿದ ಒಂದು ಅಪರಾಧ ಎಂದರೆ ನರೇಂದ್ರ ಮೋದಿಗೆ ಜನ್ಮ ನೀಡಿರುವುದು. ಅರವಿಂದ್ ಕೇಜ್ರಿವಾಲ್ ರಾಜಕೀಯ ದೂರದೃಷ್ಠಿ ಹಾಗೂ ಯೋಜನೆಗಳನ್ನು ವಿಫಲಗೊಳಿಸುವ ನಾಯಕನಿಗೆ ಜನ್ಮ ನೀಡಿದ್ದಾರೆ ಎಂದು ಗೋಪಾಲ್ ಇಟಾಲಿಯಾ ಹೇಳಿದ್ದಾರೆ.
ಗೋಪಾಲ್ ಇಟಾಲಿಯಾ(Gopal Italia) ಹೇಳಿಕೆ ಇದೀಗ ಆಮ್ ಆದ್ಮಿ ಪಾರ್ಟಿಗೆ(aam aadmi party) ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದಿನಕ್ಕೊಂದು ಹೇಳಿಕೆ ನೀಡಿ ಆಮ್ ಆದ್ಮಿ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಇದೀಗ ಮೋದಿ ತಾಯಿ ಹಿರಾ ಬೆನ್(Heeraben Modi) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಗೋಪಾಲ್ ಇಟಾಲಿಯಾ ವಿರುದ್ಧ ಬಿಜೆಪಿ(BJP) ನಾಯಕರು ಗರಂ ಆಗಿದ್ದಾರೆ. ಸಚಿವೆ ಸ್ಮೃತಿ ಇರಾನಿ ಖಡಕ್ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ(PM Narendra Modi) ತಾಯಿ ವಿರುದ್ಧ ಟೀಕೆ ಮಾಡಿದರೆ ರಾಜಕೀಯ ಲಾಭ ಅಥವಾ ಗುಜರಾತ್‌ನಲ್ಲಿ(Gujarat Election) ಜನಪ್ರಿಯರಾಗಬಹುದು ಎಂದು ಅಂದುಕೊಂಡಿದ್ದರೆ ತಪ್ಪು. ಗುಜರಾತ್ ಜನತೆ ನಿಮಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಆಪ್ ನಾಯಕ 100 ವರ್ಷದ ಹಿರಿಯ ತಾಯಿಯನ್ನು ಅವಮಾನ ಮಾಡಿದ್ದಾರೆ. ನಿಂದಿಸಿದ್ದಾರೆ. ಇದಕ್ಕೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿಯಿಂದ ಮತ್ತೆ ಹಿಂದೂ ವಿರೋಧಿ ಹೇಳಿಕೆ, ದೇವಸ್ಥಾನ ಶೋಷಣೆ ಕೇಂದ್ರ ಎಂದ ಆಪ್ ಅಧ್ಯಕ್ಷ
ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಆಪ್ ಹುಚ್ಚಾಟಕ್ಕೆ ತಿರುಗೇಟು ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್(Arvind Kejriwal) ಆಪ್ತ, ಗುಜರಾತ್ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಇತ್ತೀಚೆಗೆ ಪ್ರಧಾನಿ ಮೋದಿಯನ್ನುನೀಚ ಎಂದು ಜರೆದಿದ್ದಾನೆ. ಮಹಿಳೆಯನ್ನು ನಿಂದಿಸಿದ್ದಾರೆ. ಭಾರತೀಯರನ್ನು ಮೋದಿ ಸಿ(ಹಿಂದಿ ಭಾಷೆಯ ಕೆಟ್ಟ ಪದದ ಮೊದಲ ಅಕ್ಷರ) ಮಾಡುತ್ತಿದ್ದಾರೆ ಎಂದಿದ್ದರು. ಬಳಿಕ ಹಿಂದೂ ದೇವಾಲಯ ಮಹಿಳೆಯ ಶೋಷಣೆಯ ಕೇಂದ್ರವಾಗಿದೆ. ಹೀಗಾಗಿ ಹಿಂದೂ ದೇವಾಲಯಕ್ಕೆ ಮಹಿಳೆಯರು ತೆರಳಬೇಡಿ ಎಂದು ಹಿಂದೂ ವಿರೋಧಿ ಹೇಳಿಕೆ ನೀಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ತಾಯಿ ವಿರುದ್ಧವೇ ಮಾತನಾಡುವ ಮೂಲಕ ಇಲ್ಲ ಸಲ್ಲದ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕೆಟ್ಟ ಪದಗಳ ಬಳಸಿ ಪ್ರಧಾನಿ ಮೋದಿ ನಿಂದಿಸಿದ ಗುಜರಾತ್ ಆಪ್ ಅಧ್ಯಕ್ಷ, ಭಾರಿ ಆಕ್ರೋಶ!
ನರೇಂದ್ರ ಮೋದಿ ಅವರನ್ನು ‘ನೀಚ ವ್ಯಕ್ತಿ’ ಎಂದಿದ್ದ ಗುಜರಾತ್‌ನ ಆಪ್ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದು 3 ತಾಸು ವಿಚಾರಣೆ ನಡೆಸಿದ್ದರು. ಬಳಿಕ ಬಿಡುಗಡೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಹಿಳಾ ಆಯೋಗದ ಎದುರು ಹೇಳಿಕೆ ದಾಖಲಿಸಲು ಆಗಮಿಸಿದ್ದ ವೇಳೆ ಈ ಪ್ರಸಂಗ ನಡೆದಿದೆ. . ಮಹಿಳೆಯರ ಬಗ್ಗೆಯೂ ಇಟಾಲಿಯಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗವು ಇಟಾಲಿಯಾಗೆ ಸಮನ್ಸ್ ಜಾರಿ ಮಾಡಿತ್ತು. ಈ ಬಗ್ಗೆ ವಿಚಾರಣೆಗೆ ಬಂದಾಗ ಇಟಾಲಿಯಾ ಅವರ ವಿಚಾರಣೆಯನ್ನು ಪೊಲೀಸರು ಕೂಡ ನಡೆಸಿದ್ದಾರೆ.