Asianet Suvarna News Asianet Suvarna News

ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ: ದಿನೇಶ್ ಗುಂಡೂರಾವ್ ಸಂದರ್ಶನ!

ಸಿದ್ದರಾಮಯ್ಯ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಆಹಾರ ಸಚಿವರಾಗಿ ಅನ್ನಭಾಗ್ಯ ಯೋಜನೆ ಪರಿಚಯಿಸಿದವರು ದಿನೇಶ್ ಗುಂಡೂರಾವ್. ಇದೀಗ ಆರೋಗ್ಯ ಸಚಿವರಾಗಿ ಕೊರೋನಾ ಹಗರಣ, ವೈದ್ಯಕೀಯ ಉಪಕರಣಗಳ ಖರೀದಿ ಹಗರಣ, ಆಕ್ಸಿಜನ್‌ ದುರಂತ ಸೇರಿ ಸಾಲುಸಾಲು ಹಗರಣಗಳ ತನಿಖೆಗೆ ವಹಿಸಿದ್ದಾರೆ.
 

Health Minister Dinesh Gundu Rao Special Interview gvd
Author
First Published Mar 14, 2024, 9:36 AM IST

ಶ್ರೀಕಾಂತ್ ಎನ್. ಗೌಡಸಂದ್ರ

ಸಿದ್ದರಾಮಯ್ಯ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಆಹಾರ ಸಚಿವರಾಗಿ ಅನ್ನಭಾಗ್ಯ ಯೋಜನೆ ಪರಿಚಯಿಸಿದವರು ದಿನೇಶ್ ಗುಂಡೂರಾವ್. ಇದೀಗ ಆರೋಗ್ಯ ಸಚಿವರಾಗಿ ಕೊರೋನಾ ಹಗರಣ, ವೈದ್ಯಕೀಯ ಉಪಕರಣಗಳ ಖರೀದಿ ಹಗರಣ, ಆಕ್ಸಿಜನ್‌ ದುರಂತ ಸೇರಿ ಸಾಲುಸಾಲು ಹಗರಣಗಳ ತನಿಖೆಗೆ ವಹಿಸಿದ್ದಾರೆ. ಇಲಾಖೆಗೆ ಆಮೂಲಾಗ್ರ ಬದಲಾವಣೆ ತರುವ ಜತೆಗೆ ಹುಕ್ಕಾ ನಿಷೇಧ, ಭ್ರೂಣಹತ್ಯೆ ನಿಷೇಧಕ್ಕೆ ಪ್ರಬಲ ಕಾನೂನು, ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿಯನ್ ಕೃತಕ ಬಣ್ಣ ಬಳಕೆ ನಿಷೇಧ ಹೀಗೆ ಹಲವು ಕಠಿಣ ನಿರ್ಧಾರದ ಮೂಲಕ ಸುದ್ದಿಯಲ್ಲಿದ್ದಾರೆ. ಜತೆಗೆ ಲೋಕಸಭೆ ಚುನಾವಣೆ ಫಲಿತಾಂಶ, ಜಾತಿಗಣತಿ ವರದಿ, ಸಚಿವ ಸಂಪುಟ ಪುನರ್‌ ರಚನೆ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಲು ಕನ್ನಡಪ್ರಭ ಜತೆ ಮುಖಾಮುಖಿಯಾಗಿದ್ದಾರೆ.

*ನೀವು ಸೇರಿ ಲೋಕಸಭೆಗೆ 10 ಸಚಿವರು ಸ್ಪರ್ಧಿಸುತ್ತಾರೆ ಅಂತ ಇತ್ತು. ಯಾರೊಬ್ಬರೂ ನಿಲ್ಲುವಂತೆ ಕಾಣುತ್ತಿಲ್ಲ‍‍‍‍‍ವಲ್ಲ?
ನನಗೆ ಚುನಾವಣೆಗೆ ನಿಲ್ಲುವಂತೆ ಹೈಕಮಾಂಡ್‌ ಸೇರಿದಂತೆ ಯಾರೂ ಹೇಳಲಿಲ್ಲ. ನನ್ನ ಪತ್ನಿ ಸ್ಪರ್ಧೆ ಮಾಡಲಿ ಅಂತಾನು ಯಾವ ನಾಯಕರೂ ಹೇಳಿರಲಿಲ್ಲ. ಆದರೆ, ಮಾಧ್ಯಮಗಳಲ್ಲಿ ಇಂತಹ ಗಾಳಿ ಸುದ್ದಿ ಇತ್ತು ಅಷ್ಟೆ. ಇನ್ನು ಸಚಿವರ ಸ್ಪರ್ಧೆಗೆ ಹೈಕಮಾಂಡ್‌ ಒತ್ತಡ ಹೇರಿಲ್ಲ. ಸ್ಪರ್ಧಿಸಿ ಎಂದು ನಾಯಕರು ಕೆಲ ಸಚಿವರಿಗೆ ಹೇಳಿರಬಹುದು. ಅವರಿಗೆ ಆಸಕ್ತಿ ಇಲ್ಲದಿರಬಹುದು. ಬಹುಶಃ ಅಂತಹವರಿಗೆ ದೆಹಲಿ ರಾಜಕೀಯ ಇಷ್ಟವಿಲ್ಲದಿರಬಹುದು.

ಸಿಎಎ ವಿರೋಧಿಸುವ ಕಾಂಗ್ರೆಸ್‌ಗೆ ರಾಷ್ಟ್ರೀಯತೆಯ ಅರಿವಿಲ್ಲ: ಈಶ್ವರಪ್ಪ

*ಲೋಕಸಭೆಯಲ್ಲಿ ಕಾಂಗ್ರೆಸ್‌ ಎಷ್ಟು ಸ್ಥಾನ ಗೆಲ್ಲಬಹುದು? ಯಾಕೆ?
ನನ್ನ ಪ್ರಕಾರ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ತಳಮಟ್ಟದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಮೋದಿ ಅಲೆ ಕೇವಲ ಅಬ್ಬರದ ಪ್ರಚಾರದಲ್ಲಿ ಇದೆ. ತಳಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಇದೆ. ಜನರು ಕಾಂಗ್ರೆಸ್‌ ಕೈ ಬಿಡುವುದಿಲ್ಲ.

*ಲೋಕಸಭೆ ಚುನಾವಣೆ ಬಳಿಕ ಸಚಿವ ಸಂಪುಟ ಪುನರ್‌ರಚನೆ ಆಗುತ್ತದೆಯಂತೆ?
ಸಚಿವ ಸಂಪುಟ ಬದಲಾವಣೆ ಸಹಜ ಪ್ರಕ್ರಿಯೆ. ಹೀಗಾಗಿ ಸಚಿವ ಸಂಪುಟ ಬದಲಾವಣೆಯಾಗುತ್ತದೆ ಆಗಲೂ ಬೇಕು. ನನ್ನ ಪ್ರಕಾರ ಕಾರ್ಯನಿರ್ವಹಣೆ ಆಧಾರದ ಮೇಲೆ ಖಂಡಿತ ಸಚಿವರನ್ನು ಬದಲಿಸಬೇಕು. ಕೆಲಸ ಮಾಡಿದವರನ್ನು ಮಾತ್ರ ಉಳಿಸಿಕೊಳ್ಳಬೇಕು.

*ಹಾಗಾದರೆ ಮುಖ್ಯಮಂತ್ರಿಗಳ ಬದಲಾವಣೆಯೂ ಆಗುತ್ತದೆಯೇ?
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂತಹ ಚರ್ಚೆ ಬರಲು ಹೇಗೆ ಸಾಧ್ಯ? ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ.

*ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಸರ್ಕಾರ ಅಲುಗಾಡಲಿದೆಯಂತೆ?
ನಾವು 136 ಮಂದಿಯಿದ್ದು ಒಟ್ಟಾಗಿದ್ದೇವೆ. ಅವರು ಅಲುಗಾಡಿಸುವ ಪ್ರಯತ್ನ ಮಾಡುತ್ತಾರೆಂದರೆ ಎಷ್ಟು ಸಂವಿಧಾನ ವಿರೋಧಿಗಳು ಎಂಬುದನ್ನು ಅರಿಯಬೇಕು. ಈಗಾಗಲೇ ಸಂವಿಧಾನವನ್ನು ಅವರು ಬುಡಮೇಲು ಮಾಡಿದ್ದಾರೆ.

*ಬಿಜೆಪಿ ಮೇಲೆ 40 ಪರ್ಸೆಂಟ್‌ ಆರೋಪ ಮಾಡಿದ್ದಿರಿ. ಅದೇ ಕೆಂಪಣ್ಣ ನಿಮ್ಮ ಮೇಲೂ ಆರೋಪಿಸಿದ್ದಾರಲ್ಲಾ?
ಬಳಿಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ. ಜತೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಕರೆದು ಸನ್ಮಾನ ಮಾಡಿದ್ದಾರೆ. ಹೀಗಾಗಿ ನಮ್ಮ ಸರ್ಕಾರದ ಮೇಲೆ ಅಂತಹ ಯಾವುದೇ ಆರೋಪ ಇಲ್ಲ.

*ಬಿಜೆಪಿ ಸರ್ಕಾರ ಸಂಘ ಪರಿವಾರದವರಿಗೆ ನೀಡಿದ್ದ ಆಸ್ತಿಗಳನ್ನು ಹಿಂಪಡೆಯುತ್ತೀರಾ?
ಕಾನೂನುಬದ್ಧವಾಗಿ ಹಿಂಪಡೆಯಲು ಸಾಧ್ಯವೇ ಪರಿಶೀಲಿಸಬೇಕಿದೆ. ನೂರಾರು ಎಕರೆ ಆಸ್ತಿಯನ್ನು ಸಂಘ ಪರಿವಾರದ ಸಂಸ್ಥೆಗಳಿಗೆ ನೀಡಿರುವುದು ಸತ್ಯ. ನಾನು ದಕ್ಷಿಣ ಕನ್ನಡದಲ್ಲಿ ವಿಶ್ವವಿದ್ಯಾಲಯದಲ್ಲಿ ಕಟ್ಟಡ ಕಟ್ಟಲು ಬಂದವರನ್ನು ತಡೆದಿದ್ದೇನೆ.

*ಕೋವಿಡ್‌ ಹಗರಣದ ತನಿಖೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರಿ. ಆ ತನಿಖೆ ಎಲ್ಲಿಗೆ ಬಂತು?
ನ್ಯಾಯಾಂಗ ಸಮಿತಿ ತನಿಖೆ ಮಾಡುತ್ತಿದ್ದು, ಅಂತಿಮ ಘಟ್ಟಕ್ಕೆ ಬಂದಿರಬಹುದು. ನನ್ನ ಪ್ರಕಾರ ಆದಷ್ಟು ಬೇಗ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಮತ್ತೊಮ್ಮೆ ವಿಚಾರಿಸುತ್ತೇನೆ.

*ನಿಮ್ಮ ಅವಧಿಯಲ್ಲೂ ಖರೀದಿ ಭರಾಟೆ ನಡೆಯಿತಲ್ಲವೇ?
ನಾವು ಹೆಚ್ಚು ಖರೀದಿ ಮಾಡಿಲ್ಲ. ಕಳೆದ ಅವಧಿಯಲ್ಲಿ ಖರೀದಿ ಮಾಡಿ ಬಳಕೆ ಮಾಡದಿರುವುದನ್ನು ನಾವು ಪುನರ್ ಆರಂಭ ಮಾಡಿಸಿದ್ದೇವೆ. ಆಕ್ಸಿಜನ್‌ ಜನರೇಟರ್‌ಗಳಿಂದ ಹಿಡಿದು ಎಲ್ಲವನ್ನೂ ಕಾರ್ಯನಿರ್ವಹಿಸುವ ಸ್ಥಿತಿಗೆ ತಂದಿದ್ದೇವೆ.

*ಕಾಟನ್‌ ಕ್ಯಾಂಡಿ, ಗೋಬಿಯಲ್ಲಿ ಕೃತಕ ಬಣ್ಣ ನಿಷೇಧಿಸಿದ್ದೀರಿ. ನಿಯಂತ್ರಣ ನಿಜಕ್ಕೂ ಸಾಧ್ಯವೇ?
ಈಗಾಗಲೇ ಇದ್ದ ನಿರ್ಬಂಧವನ್ನು ಅನುಷ್ಠಾನಕ್ಕೆ ತಂದಿದ್ದೇವೆ. ನಿಯಮ ಉಲ್ಲಂಘಿಸಿದರೆ ಶಿಕ್ಷೆ ನೀಡುವುದಾಗಿ ಹೇಳಿದ್ದೇವೆ. ಮತ್ತೊಂದು ಸುತ್ತಿನಲ್ಲಿ ಎಲ್ಲಾ ಕಡೆ ಪರಿಶೀಲಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

*ರಾಜ್ಯದಲ್ಲಿ 900 ಭ್ರೂಣ ಹತ್ಯೆ ಪತ್ತೆಯಿಂದ ಇಡೀ ದೇಶ ಬೆಚ್ಚಿಬಿದ್ದಿತ್ತು. ಬಳಿಕ ಭ್ರೂಣ ಹತ್ಯೆ ನಿಯಂತ್ರಣದ ಸುದ್ದಿಯೇ ಇಲ್ಲ?
ಅದು ನಿರಂತರವಾಗಿ ನಡೆಯುತ್ತಿದೆ. ಮೊನ್ನೆಯಷ್ಟೇ ನೆಲಮಂಗಲ ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿತ್ತು. ಮಂಡ್ಯದ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ. ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.

*ಕಾರ್ಯಪಡೆಯಲ್ಲಿ ಎಸಿಪಿ ಹಂತದ ಅಧಿಕಾರಿ ಇರಬೇಕು. ಐಪಿಸಿ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ಹೇಳಿದ್ದಿರಿ. ಆದರೆ ಆಗಿಲ್ಲ?
ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿದ್ದೇವೆ. ರಾಜ್ಯ ಮಟ್ಟದ ಸಮಿತಿಯಲ್ಲಿ ಸಮನ್ವತೆ ಮಾಡಲು ಎಸಿಪಿ ಹಂತದ ಅಧಿಕಾರಿಯನ್ನು ಮಾಡಿ ಎಂದಿದ್ದೇವೆ. ಇನ್ನು ಐಪಿಸಿ ತಿದ್ದುಪಡಿ ಅಗತ್ಯವಿಲ್ಲ ಈಗಾಗಲೇ ಕಾನೂನು ಕಠಿಣವಾಗಿದ್ದು ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕಿದೆ.

*ಆರೋಗ್ಯ ಸಚಿವರಾಗಿ ಮುಕ್ಕಾಲು ವರ್ಷವಾಯಿತು. ಇಲಾಖೆ ನೀಡಿದ ಅನುಭವವೇನು?
ಸಾರ್ವಜನಿಕ ಆರೋಗ್ಯ, ಲಸಿಕೆ, ರೋಗ ಪತ್ತೆ, ತಡೆಗಟ್ಟುವ ಹಾಗೂ ಕಾಯಿಲೆ ಬಂದರೆ ಸೂಕ್ತ ಚಿಕಿತ್ಸೆ ನೀಡುವುದು ಸೇರಿದಂತೆ ಜನರೊಂದಿಗೆ ನೇರ ಸಂಪರ್ಕ ಹಾಗೂ ನೇರ ಪರಿಣಾಮ ಇರುವ ಇಲಾಖೆ. ಒಂದು ಮಾತಿನಲ್ಲಿ ಹೇಳುವುದಾದರೆ ಜನರ ಜೀವ ಉಳಿಸುವ ಇಲಾಖೆ. ಹೀಗಾಗಿ ನೆಮ್ಮದಿ ಇದೆ.

*ಇಲಾಖೆಯಲ್ಲಿ ನೀವು ತಂದ ಸುಧಾರಣೆಗಳೇನು? 
ಟೆಲಿ ಐಸಿಯು, ಜಿಲ್ಲಾ ಮಟ್ಟದಲ್ಲಿ ಬ್ರೈನ್‌ ಸೆಂಟರ್‌, ಅಪಘಾತ ವಲಯದಲ್ಲಿ ಆ್ಯಂಬುಲೆನ್ಸ್‌ ಸೇವೆ ಒದಗಿಸಲು ಪ್ರತ್ಯೇಕ ಯೋಜನೆ, ಜಿಲ್ಲಾ ಮಟ್ಟದಲ್ಲಿ ಇ- ಆಸ್ಪತ್ರೆಗೆ ಕ್ರಮ, ಡಯಾಲಿಸಿಸ್‌ ವ್ಯವಸ್ಥೆ ಅಮೂಲಾಗ್ರ ಬದಲಾವಣೆ, ಜಿಲ್ಲಾ ಮಟ್ಟದಲ್ಲೇ ಕಿಮೋಥೆರಪಿ, ಆಶಾಕಿರಣ ಯೋಜನೆ, ಹೊಸ ಟೆಂಡರ್‌ ಮೂಲಕ 800 ಹೊಸ ಡಯಾಲಿಸಿಸ್‌ ಯಂತ್ರ ಖರೀದಿ ಮಾಡಿದ್ದೇವೆ.

*ಡಯಾಲಿಸಿಸ್‌ ಸೇವೆಗೆ ಸಿಬ್ಬಂದಿಯೇ ಇಲ್ಲವಲ್ಲ?
ಸಿಬ್ಬಂದಿ ಕೊರತೆ ಇದ್ದದ್ದು ನಿಜ. ಹಿಂದಿನಿಂದಲೂ ಸಮಸ್ಯೆ ಇದೆ. ಹೊರಗುತ್ತಿಗೆ ನೌಕರರನ್ನು ಒದಗಿಸಿದ್ದ ಏಜೆನ್ಸಿ ಸರಿ ಇರಲಿಲ್ಲ. ಈಗ ಹೊಸ ಏಜೆನ್ಸಿಗೆ ಕೊಟ್ಟಿದ್ದೇವೆ. ಎಲ್ಲಾ ಸಮಸ್ಯೆ ಬಗೆಹರಿಸುತ್ತಿದ್ದೇವೆ.

*ಬ್ರೈನ್‌ ಸೆಂಟರ್‌ ಮಾಡಿದ್ದೀರಿ. ತಜ್ಞ ವೈದ್ಯರಿಲ್ಲ?
ಪಾರ್ಶ್ವವಾಯು, ಮರೆವು ಸೇರಿದಂತೆ ನರರೋಗದ ಸಮಸ್ಯೆಗಳಿಗೆ ಅಲ್ಲೇ ಚಿಕಿತ್ಸೆ ನೀಡಲು ಈ ಯೋಜನೆ ಮಾಡಿದ್ದೇವೆ. ಕೆಲವು ಕಡೆ ತಜ್ಞ ವೈದ್ಯರು ದೊರೆತಿಲ್ಲ. ಅಲ್ಲಿ ಕನ್ಸಲ್ಟಂಟ್‌ಗಳನ್ನು ನೇಮಕ ಮಾಡಿಕೊಳ್ಳಲು ತಿಳಿಸಲಾಗಿದೆ. ನಮ್ಮ ವೈದ್ಯರಿಗೇ ಈ ಬಗ್ಗೆ ತರಬೇತಿಯನ್ನೂ ನೀಡಲಿದ್ದೇವೆ.

*ಅತಿ ಮುಖ್ಯವಾದ 108 ಆ್ಯಂಬುಲೆನ್ಸ್‌ಗಳ ಸೇವೆಯೇ ಸರಿ ಹೋಗಿಲ್ಲ?
ಹೀಗಾಗಿಯೇ ಹೊಸ ಟೆಂಡರ್‌ ಕರೆದಿದ್ದೇವೆ. ಆದರೆ ಷರತ್ತುಗಳು ಹಾಗೂ ತಾಂತ್ರಿಕ ದೋಷಗಳಿಂದ ಟೆಂಡರ್‌ಗೆ ಯಾರೂ ಮುಂದೆ ಬರುತ್ತಿಲ್ಲ. ಇದೀಗ ಆರ್‌ಎಫ್‌ಪಿ ಕರೆದಿದ್ದು ಜೂನ್‌ ವೇಳೆಗೆ ಟೆಂಡರ್‌ ಮಾಡಲಿದ್ದೇವೆ. ಅತ್ಯಾಧುನಿಕ ಕಮಾಂಡ್‌ ಕೇಂದ್ರ ಮಾಡಿ ವ್ಯವಸ್ಥೆ ಉತ್ತಮಪಡಿಸುತ್ತೇವೆ.

*ಅಗತ್ಯ ಔಷಧಗಳೇ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲವಂತೆ?
ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇದೆ. 350 ಅತ್ಯಗತ್ಯ ಡ್ರಗ್ಸ್‌ಗಳಲ್ಲಿ 190 ರಷ್ಟು ಡ್ರಗ್‌ಗಳ ಕೊರತೆ ಇದೆ. ಕೆಲವು ಶೂನ್ಯ ದಾಸ್ತಾನು ಇದೆ. ಇದನ್ನು ಬಗೆಹರಿಸಲು ಸ್ಥಳೀಯವಾಗಿ ಆಸ್ಪತ್ರೆ ನಡೆಸುವವರೇ ಟೆಂಡರ್‌ ಪ್ರಕ್ರಿಯೆ ನಡೆಸಿ ಖರೀದಿ ನಡೆಸಲು ಅನುಮತಿ ನೀಡಿದ್ದೇವೆ.

*ಔಷಧ ಕೊರತೆಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಹೊಣೆಯಲ್ಲವೇ?
ಹೌದು, ಆಯಾ ವರ್ಷಕ್ಕೆ ಟೆಂಡರ್‌ ಕರೆಯದೆ ವಿಳಂಬ ಮಾಡುತ್ತಿರುವುದರಿಂದ ಔಷಧ ಕೊರತೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಒಂದು ಟೆಂಡರ್‌ನ್ನು ಎರಡು ವರ್ಷ ಅನ್ವಯ ಆಗುವಂತೆ ಮಾಡಿದ್ದೇವೆ.

*ಆ್ಯಂಟಿ ವೆನಮ್‌ನಂತಹ ತುರ್ತು ಔಷಧಗಳೂ ಸಿಗುತ್ತಿಲ್ಲವಲ್ಲ?
ಔಷಧಗಳ ಕೊರತೆಗಿಂತ ಸರಬರಾಜಿನಲ್ಲಿ ಪಾರದರ್ಶಕತೆ ಇಲ್ಲ. ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ (ನೋಟಿಫೈಬಲ್‌ ಡಿಸೀಜ್‌) ಎಂದು ಘೋಷಿಸಿದ್ದೇವೆ. ಇದೀಗ ಎಲ್ಲೆಲ್ಲಿ ಹೆಚ್ಚೆಚ್ಚು ಹಾವು ಕಡಿತ ಆಗುತ್ತದೆ ಅಲ್ಲಿಗೆ ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಾಗುತ್ತದೆ.

*ಕೆಎಸ್‌ಎಂಸಿಎಲ್‌ ಭ್ರಷ್ಟಾಚಾರದ ಕೂಪವಾಗಿದೆ ಎಂಬ ಆರೋಪವಿದೆ?
ಇದನ್ನು ಸರಿಪಡಿಸಲು ವಿತರಣಾ ಜಾಲ ಹೇಗಿದೆ ಎಂಬುದನ್ನು ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲು ಕೆಪಿಎಂಜಿ ಹಾಗೂ ಸಿಡ್ಯಾಕ್‌ಗೆ ವಹಿಸಲಾಗಿದೆ. ಸಮಸ್ಯೆ ಸರಿಪಡಿಸಲು ಹೋದಾಗ ಹೆಚ್ಚೆಚ್ಚು ಸಮಸ್ಯೆ ಸೃಷ್ಟಿಸುತ್ತಾರೆ. ಹೀಗಾಗಿ ಹೆದರಿಕೊಂಡು ಅದನ್ನು ಯಾರೂ ಸುಧಾರಿಸಲು ಹೋಗಿಲ್ಲ. ನಾವು ಪಾರದರ್ಶಕತೆ ತರಲು ಯತ್ನಿಸುತ್ತಿದ್ದೇವೆ.

*ಹಿಂದೆ ಖರೀದಿಸಿದ್ದ ವೈದ್ಯಕೀಯ ಸಲಕರಣೆಗಳೇ ಪಾಳು ಬಿದ್ದಿವೆಯಲ್ಲಾ?
ಅಂತಹ ಸಲಕರಣೆಗಳ ಬಗ್ಗೆ ಸಿ-ಡ್ಯಾಕ್‌ ಮೂಲಕ ಟ್ರ್ಯಾಕ್‌ ಮೂಲಕ ಮಾಡಿಸುತ್ತೇವೆ. ನಾವು ಸಲಕರಣೆ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದೇವೆ ಆದರೆ ಸದ್ಬಳಕೆ ಆಗುತ್ತಿಲ್ಲ. ನಿರ್ವಹಣೆ, ನುರಿತ ಸಿಬ್ಬಂದಿ ಕೊರತೆ ಸೇರಿ ಸಾಕಷ್ಟು ಸಮಸ್ಯೆ ಇವೆ.

ಕಾಂಗ್ರೆಸ್‌ ಅಧಿಕಾರದಲ್ಲಿ ಇರುವವರೆಗೆ ಗ್ಯಾರಂಟಿ ನಿಲ್ಲಲ್ಲ: ಸಚಿವ ಪರಮೇಶ್ವರ್‌

*ಇಷ್ಟು ವರ್ಷವಾದರೂ ಮಂಗನಕಾಯಿಲೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿಲ್ಲ?
ಐಸಿಎಂಆರ್‌ ಜತೆ ಒಪ್ಪಂದ ಮಾಡಿಕೊಂಡು 80 ಕೋಟಿ ರು. ವೆಚ್ಚದಲ್ಲಿ ಲಸಿಕೆ ಕಂಡು ಹಿಡಿಯಲು ಮುಂದಾಗಿದ್ದೇವೆ. ಸದ್ಯದಲ್ಲೇ ಶಾಶ್ವತ ಪರಿಹಾರ ಸಿಗಲಿದೆ.

*ಜಾತಿಗಣತಿ ವರದಿ ಸ್ವೀಕಾರವನ್ನು ಸ್ವಾಗತಿಸುತ್ತೀರಾ?
ಸ್ವಾಗತಿಸುತ್ತೇನೆ, ವರದಿಯನ್ನು ನೋಡದೆಯೇ ತಿರಸ್ಕಾರ ಮಾಡುವುದು ತಪ್ಪು. ವರದಿಯನ್ನು ಚುನಾವಣೆ ನಂತರ ಬಹಿರಂಗಪಡಿಸಬೇಕು. ಚುನಾವಣೆಗೆ ಮೊದಲು ಮಾಡಿದರೆ ಚುನಾವಣೆ ಚರ್ಚೆಯ ದಿಕ್ಕು ಬದಲಾಗುತ್ತದೆ.

Follow Us:
Download App:
  • android
  • ios