ನಾನು ಎಂದಿಗೂ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿಲ್ಲ, ಮಾತನಾಡುವುದಿಲ್ಲ. ಅವರು ವರ್ಗಾವಣೆ ದಂಧೆ ಮಾಡಿದ್ದಾರೆ ಎಂಬುದನ್ನೂ ನಾನು ಒಪ್ಪುವುದಿಲ್ಲ ಎಂದು ರೇವಣ್ಣ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ವಿಧಾನಸಭೆ (ಜು.14): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಹಿರಿಯ ಸದಸ್ಯ ಎಚ್.ಡಿ. ರೇವಣ್ಣ ಅವರ ನಡುವಿನ ಸ್ನೇಹದ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದ್ದು, ‘ನಾನು ಎಂದಿಗೂ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿಲ್ಲ, ಮಾತನಾಡುವುದಿಲ್ಲ. ಅವರು ವರ್ಗಾವಣೆ ದಂಧೆ ಮಾಡಿದ್ದಾರೆ ಎಂಬುದನ್ನೂ ನಾನು ಒಪ್ಪುವುದಿಲ್ಲ’ ಎಂದು ರೇವಣ್ಣ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಣ್ಣ ಅವರು ಈಗಾಗಲೇ ಬಡವರ ಪರ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ.
ಆರನೇ ಗ್ಯಾರಂಟಿಯಾಗಿ ಕೊಬ್ಬರಿಗೆ 15000 ರು. ಬೆಂಬಲ ಬೆಲೆ ಘೋಷಣೆ ಮಾಡಲಿ’ ಎಂದು ಸದನಕ್ಕೆ ತಂದಿದ್ದ ಒಣ ಕೊಬ್ಬರಿ ಪ್ರದರ್ಶಿಸುತ್ತಾ ಮನವಿ ಮಾಡಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು, ‘ನಿಮಗೂ ಸಿದ್ದರಾಮಯ್ಯ ಅವರಿಗೂ ಒಳ್ಳೆಯ ಸ್ನೇಹ ಇದೆ. ನೀವು ಹೇಳಿದರೆ ಅವರು ಏನೂ ಇಲ್ಲ ಎನ್ನುವುದಿಲ್ಲ’ ಎಂದು ಹಾಸ್ಯ ಮಾಡಿದರು. ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ, ‘ಅವರ ಸ್ನೇಹ ಎಷ್ಟು ಗಾಢ ಎಂದರೆ ಚುನಾವಣೆ ವೇಳೆ ಅಪ್ಪಿ ತಪ್ಪಿಯೂ ಸಿದ್ದರಾಮಯ್ಯ ಅವರು ಹೊಳೆನರಸೀಪುರ ಕಡೆ ಹೋಗಲೇ ಇಲ್ಲ’ ಎಂದು ಕಾಲೆಳೆದರು.
ಸಿದ್ದರಾಮಯ್ಯ ಅನ್ನಭಾಗ್ಯಕ್ಕೆ ದೇವೇಗೌಡ ಪ್ರೇರಣೆ: ಶರವಣ
ಜೆಡಿಎಸ್ ಸದಸ್ಯ ಜಿ.ಟಿ. ದೇವೇಗೌಡ, ‘ಅವರ ಸ್ನೇಹ 35 ವರ್ಷಕ್ಕಿಂತ ಹಳೆಯದು. ಅವರ ಮಾತು ಇವರು, ಇವರ ಮಾತು ಅವರು ತಪ್ಪುವುದೇ ಇಲ್ಲ. ಅವರ ಸ್ನೇಹವನ್ನು ಯಾರೂ ತಡೆಯಲು ಆಗುವುದಿಲ್ಲ’ ಎಂದು ಹೇಳಿದರು. ಇದಕ್ಕೆ ಎಚ್.ಡಿ. ರೇವಣ್ಣ, ‘ಸಿದ್ದರಾಮಣ್ಣ ಬಗ್ಗೆ ನಾನು ಯಾವತ್ತೂ ಹೇಳಿಕೆ ನೀಡಿಲ್ಲ, ನೀಡುವುದೂ ಇಲ್ಲ. ಅವರು ವರ್ಗಾವಣೆ ದಂಧೆ ಮಾಡಿದ್ದಾರೆ ಎಂದರೆ ನಾನು ಒಪ್ಪುವುದಿಲ್ಲ. ನಮ್ಮ ಸ್ನೇಹ, ವಿಶ್ವಾಸದ ಬಗ್ಗೆ ನಿಮಗೆ ಯಾಕೆ ಹೊಟ್ಟೆಉರಿ’ ಎಂದು ಪ್ರಶ್ನಿಸಿದರು.
ರೇವಣ್ಣ ಬಗ್ಗೆ ನನಗೆ ವಿಶೇಷ ಪ್ರೀತಿ- ಸಿದ್ದರಾಮಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ನನ್ನ ಹಾಗೂ ರೇವಣ್ಣ ಸ್ನೇಹದ ಬಗ್ಗೆ ಎಲ್ಲರೂ ಹೇಳುವುದು ಸರಿ ಇದೆ. ಬೊಮ್ಮಾಯಿ ಹೇಳಿರುವುದನ್ನೂ ನಾನು ಒಪ್ಪುತ್ತೇನೆ. ರೇವಣ್ಣ ನನ್ನ ಒಳ್ಳೆಯ ಗೆಳೆಯ. ರೇವಣ್ಣ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. 1994ರಿಂದಲೂ ನನಗೆ ವಿಶೇಷ ಪ್ರೀತಿ ಇದೆ. ಇದನ್ನು ಇಲ್ಲ ಎಂದು ನಾನು ಹೇಳಲು ಸಾಧ್ಯವಿಲ್ಲ’ ಎಂದರು.
ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ವೇಣುಗೋಪಾಲ್ ಪತ್ನಿ ಪೂರ್ಣಿಮಾ ಆರೋಪ
5 ಕೇಜಿ ಅಕ್ಕಿ ಬದಲು 3 ಕೇಜಿ ವಿತರಣೆ: ರಾಜ್ಯದಲ್ಲಿ ಪ್ರತಿಯೊಬ್ಬರಿಗೂ 5 ಕೆ.ಜಿ. ಅಕ್ಕಿ ನೀಡಬೇಕು ಎಂದು ಇದ್ದರೂ ಎಲ್ಲಾ ಪಡಿತರ ಅಂಗಡಿಗಳಲ್ಲೂ ತಲಾ 3 ಕೆಜಿ ಅಕ್ಕಿ, 2 ಕೆಜಿ ರಾಗಿ ನೀಡುತ್ತಿದ್ದಾರೆ. ಈ ಬಗ್ಗೆ ಇಲಾಖೆಯೇ ಆದೇಶ ಮಾಡಿದೆ. ಬೇಕಿದ್ದರೆ ಆ ದಾಖಲೆಯನ್ನೇ ನಿಮ್ಮೆದುರು ನೀಡುತ್ತೇನೆ ಎಂದು ಜೆಡಿಎಸ್ ಸದಸ್ಯ ಎಚ್.ಡಿ. ರೇವಣ್ಣ ಅವರು ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
