* ಅಂಬಿ ಶವ ಮುಂದಿಟ್ಟು ಎಚ್‌ಡಿಕೆ ರಾಜಕೀಯ: ಸುಮಲತಾ* ಆದಿಚುಂಚನಗಿರಿ ಶ್ರೀಗಳು ಹಾಗೂ ನನ್ನ ಫೋನ್‌ ಕದ್ದಾಲಿಕೆ ಮಾಡಿಸಿದ್ದರು: ಮಂಡ್ಯ ಸಂಸದೆ ಗಂಭೀರ ಆರೋಪ* ನನ್ನ ಪತಿಯ ಶವದ ಹೆಸರು ಹೇಳಿ ಟಿಕೆಟ್‌ ಮಾರಿದ್ದರು* ಇನ್ನು ಅಂಬಿ ಬಗ್ಗೆ ಪ್ರಸ್ತಾಪಿಸಿದರೆ ಎಚ್‌ಡಿಕೆ ಮನುಷ್ಯರೇ ಅಲ್ಲ

 ಬೆಂಗಳೂರು(ಜು.10): ‘ಚುನಾವಣೆ ಸಮಯದಲ್ಲಿ ಅವರು (ಎಚ್‌.ಡಿ.ಕುಮಾರಸ್ವಾಮಿ) ನನ್ನ ಪತಿಯ (ಅಂಬರೀಷ್‌) ಶವವನ್ನು ಮಾರುಕಟ್ಟೆಯಲ್ಲಿಟ್ಟು ಟಿಕೆಟ್‌ ಮಾರುವಂತೆ ಮಾಡಿದ್ದರು’ ಎಂದು ಮಂಡ್ಯ ಸಂಸದೆ ಸುಮಲತಾ ಆಪಾದಿಸಿದ್ದಾರೆ.

ಅಲ್ಲದೆ, ‘ಇನ್ನು ಮುಂದೆ ಅಂಬರೀಷ್‌ ಸಾವಿನ ವಿಚಾರ ಪ್ರಸ್ತಾಪಿಸಿದರೆ ಅವರು ಮನುಷ್ಯ ಜಾತಿಗೆ ಸೇರಿದವರಲ್ಲ ಎನ್ನುತ್ತೇನೆ’ ಎಂದೂ ಅವರು ತೀಕ್ಷ$್ಣವಾಗಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಷ್‌ ಎಲ್ಲರಿಗೂ ಆಪ್ತರಾಗಿದ್ದರು. ಎಲ್ಲರಿಗೂ ಅಂಬರೀಷ್‌ ಮೇಲೆ ಪ್ರೀತಿ ಇದ್ದರು. ಇವರೊಬ್ಬರೇ ಆಪ್ತ ಸ್ನೇಹಿತರಲ್ಲ. ಅಂಬರೀಷ್‌ ಚಾಮ್‌ರ್‍ ಎಲ್ಲರಿಗೂ ಬೇಕಾಗಿತ್ತು. ನಿಮಗೆ ಬೇಕಾದಾಗ ಅಂಬರೀಷ್‌ ಹೆಸರು ಬಳಸಿಕೊಂಡು ಈಗ ಬಾಯಿಗೆ ಬಂದಂತೆ ಮಾತನಾಡುತ್ತೀರಾ? ಅಂಬರೀಷ್‌ ಅವರಿಂದ ಎಲ್ಲೆಲ್ಲಿ ಲಾಭ ಪಡೆದಿದ್ದೀರಿ ಎನ್ನುವುದನ್ನು ನೀವು ಮರೆಯಬೇಡಿ ಎಂದು ಕಿಡಿಕಾರಿದರು.

ಸುಮಲತಾರ ಹಾದಿಯಲ್ಲೇ ಹೋರಾಟ ಮಾಡುತ್ತೇನೆ ಎಂದ ಸಚಿವ

ನಾನ್ಯಾವತ್ತೂ ಅವರ (ಕುಮಾರಸ್ವಾಮಿ) ಮನೆಗೆ ಹೋಗಿಲ್ಲ. ಆದರೆ ನಮ್ಮ ಮನೆಗೆ ಅವರು ಎಷ್ಟುಬಾರಿ ಬಂದಿದ್ದಾರೆ ಎಂದು ಲೆಕ್ಕ ತೆಗೆದುಕೊಳ್ಳಲಿ. ಮರ್ಯಾದೆ ಕೊಟ್ಟು ತೆಗೆದುಕೊಳ್ಳುವುದು ಸಂಸ್ಕಾರ. ಮಂಡ್ಯಕ್ಕೆ ಅಂಬರೀಷ್‌ ಮೃತದೇಹವನ್ನು ತೆಗೆದುಕೊಂಡು ಹೋಗುವುದು ಅಭಿಷೇಕ್‌ ತೆಗೆದುಕೊಂಡ ತೀರ್ಮಾನವಾಗಿತ್ತು. ಆ ದಿನ ನನಗೆ ಏನೂ ತೋಚದ ಸ್ಥಿತಿಯಲ್ಲಿದ್ದೆ. ಈಗ ಅವರ ಮಾತುಗಳನ್ನು ಕೇಳಿ ಜಿಗುಪ್ಸೆ ಬರುತ್ತಿದೆ ಎಂದು ನೊಂದು ನುಡಿದರು.

‘ಅಂಬರೀಷ್‌ ಸಾವನ್ನು ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತೀರಲ್ಲ, ನಿಮ್ಮನ್ನು ಏನಂತ ಕರೆಯಬೇಕು. ಒಂದು ಕಡೆ ಸ್ನೇಹಿತ ಅನ್ನುತ್ತೀರಾ ಮತ್ತೊಂದು ಕಡೆ ಹಗುರವಾಗಿ ಮಾತನಾಡುತ್ತೀರಿ. ನಿಮಗೆ ಅಂಬರೀಷ್‌ ರಾಜಕೀಯವಾಗಿ ಉಪಯೋಗಿಸುವ ಅಸ್ತ್ರವಾಗಿರಬಹುದು. ಆದರೆ ನನಗೆ ಅಂಬರೀಷ್‌ ಪಂಚ ಪ್ರಾಣವಾಗಿದ್ದರು. ನಾನು ಮಾತ್ರವಲ್ಲ ಲಕ್ಷಾಂತರ ಜನರು ದೇವರಂತೆ ಅಂಬರೀಷ್‌ರನ್ನು ಆರಾಧಿಸುತ್ತಾರೆ’ ಎಂದು ಸುಮಲತಾ ಭಾವುಕರಾದರು.

ದೊಡ್ಡಣ್ಣ, ಶಿವರಾಂ, ಅಂಬಿಗೆ ಎಚ್‌ಡಿಕೆ ಅವಮಾನ:

‘ಅಂಬರೀಷ್‌ ಅವರು ಮೃತಪಟ್ಟನಾಲ್ಕೈದು ದಿನಕ್ಕೆ ಸ್ಮಾರಕ ನಿರ್ಮಾಣ ಸಂಬಂಧ ಚರ್ಚಿಸಲು ವಿಧಾನಸೌಧಕ್ಕೆ ಚಲನಚಿತ್ರ ರಂಗದ ಹಿರಿಯ ನಟರಾದ ದೊಡ್ಡಣ್ಣ ಮತ್ತು ಶಿವರಾಂ ತೆರಳಿದ್ದರು. ಆಗ ತಾವು (ಕುಮಾರಸ್ವಾಮಿ) ತೋರಿಸಿದ ವರ್ತನೆ ಹೇಗಿತ್ತು. ಹೇಗೆಲ್ಲ ಮಾತನಾಡಿದ್ದರು ಎಂಬುದನ್ನು ಅವರು (ಕುಮಾರಸ್ವಾಮಿ) ಸ್ವಲ್ಪ ನೆನಪು ಮಾಡಿಕೊಳ್ಳಲಿ. ಅವರು ನೀಡಿದ್ದ ನೀಡಿದ ಪತ್ರವನ್ನು ಮುಖದ ಮೇಲೆ ಎಸೆದು ಅವಮಾನಿಸಿ ಕಳುಹಿಸಿದ್ದರು. ಅಷ್ಟೇ ಅಲ್ಲ. ‘ಏನು ಸಾಧನೆ ಮಾಡಿದ್ದಾನೆ ಅಂತ ಆತನ (ಅಂಬರೀಷ್‌) ಹೆಸರಿನಲ್ಲಿ ನಾನು ಸ್ಮಾರಕ ಮಾಡಬೇಕು’ ಎಂದಿದ್ದರು ಎಂದು ಸುಮಲತಾ ಗಂಭೀರವಾಗಿ ಆರೋಪಿಸಿದರು.

ಅಯ್ಯೋ ಅವರಿಗೆ ಸೋಲೆ ಇಲ್ಲ - ಗೆಲ್ತಾನೆ ಇರ್ತಾರೆ ಬಿಡಿ : ಎಚ್‌ಡಿಕೆ ಲೇವಡಿ

ಅಂಬರೀಷ್‌ ಅವರ ಸ್ಮಾರಕ ನಿರ್ಮಾಣ ಯೋಜನೆಗೆ ಸಹಿ ಹಾಕಿದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು. ಆದರೆ ಸ್ಮಾರಕ ಸ್ಥಾಪನೆ ನಾನು ಮಾಡಿದೆ ಅಂತ ಕೆಲವರು ಹೇಳಿಕೊಳ್ಳುತ್ತಾರೆ ಎಂದೂ ಅವರು ಟಾಂಗ್‌ ನೀಡಿದರು.

‘ಆಗಿನ್ನೂ ನಾನು ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿರಲಿಲ್ಲ. ಅದಾಗಲೇ ಅವರ ಕೀಳು ನಡವಳಿಕೆ ಗೊತ್ತಾಯಿತು. ಇದಾದ ಕೆಲ ದಿನಗಳಲ್ಲಿ ಸಿಂಗಾಪುರದಲ್ಲಿ ನಡೆದ ವಿಶ್ವ ಒಕ್ಕಲಿಗರ ಸಮ್ಮೇಳನಕ್ಕೆ ಆಹ್ವಾನದ ಮೇರೆಗೆ ನಾನು ಪಾಲ್ಗೊಂಡಿದ್ದೆ. ಅಂದು ಕಾರ್ಯಕ್ರಮಕ್ಕೆ ಬಂದಿದ್ದ ಆದಿಚುಂಚನಗಿರಿ ಶ್ರೀಗಳಿಗೆ ಸ್ಮಾರಕ ವಿಚಾರವಾಗಿ ಆದ ಅವಮಾನವನ್ನು ಹೇಳಿ ಕಣ್ಣೀರಿಟ್ಟಿದ್ದೆ. ಈ ಘಟನೆ ತಿಳಿದು ಶ್ರೀಗಳು ಕೂಡಾ ತುಂಬಾ ಬೇಸರಪಟ್ಟಿದ್ದರು. ‘ಅಂಬರೀಷ್‌ನಂತಹ ದೊಡ್ಡ ಮನುಷ್ಯನಿಗೆ ಅವಮಾನ ಮಾಡಿದ್ದು ತಪ್ಪು’ ಎಂದು ಶ್ರೀಗಳು ಹೇಳಿದ್ದರು. ಆದರೆ ಇವತ್ತು ಸ್ಮಾರಕ ಸ್ಥಾಪನೆಗೆ ನನ್ನದು ಪಾಲಿದೆ ಎನ್ನುತ್ತಾರೆ ಚನ್ನಪಟ್ಟಣ ಶಾಸಕರು. ಸ್ಮಾರಕ ಸಂಬಂಧ ನಾವು ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಿ ಯಡಿಯೂರಪ್ಪನವರು ವಿಶೇಷ ಕಾಳಜಿವಹಿಸಿ ಹಣ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಮೈಸೂರಿನಲ್ಲಿ ದಿ.ಡಾ.ವಿಷ್ಣುವರ್ಧನ್‌ ಅವರ ಸ್ಮಾರಕಕ್ಕೆ ಕೂಡಾ ಯಡಿಯೂರಪ್ಪನವರು ಸಹಕರಿಸಿದ್ದಾರೆ’ ಎಂದು ಹೇಳಿದರು.

‘ಡಾ.ರಾಜ್‌ ಕುಮಾರ್‌, ವಿಷ್ಣುವರ್ಧನ್‌ ಹಾಗೂ ಅಂಬರೀಷ್‌ ಅವರ ಬಗ್ಗೆ ಮಾತನಾಡುವವರಿಗೆ ಸಂಸ್ಕಾರ ಬೇಕು. ರಾಜ್‌ ಕುಮಾರ್‌ ಅವರು ಮೃತಪಟ್ಟಾಗ ಮುಖ್ಯಮಂತ್ರಿ ಆಗಿದ್ದವರು ಯಾರು ಎಂಬುದನ್ನು ಮೊದಲು ಅವರು ತಿಳಿದುಕೊಳ್ಳಲಿ. ಅಂಬರೀಷ್‌ ಅವರ ಹೆಸರನ್ನು ಪದೇ ಪದೇ ಕೀಳು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಅವರು ನಿಲ್ಲಿಸಲಿ’ ಎಂದು ಸುಮಲತಾ ಆಗ್ರಹಿಸಿದರು.

ನನ್ನ ಫೋನ್‌ ಕದ್ದಾಲಿಕೆ ಮಾಡಿದ್ರು:

‘ಆದಿಚುಂಚನಗಿರಿ ಶ್ರೀಗಳು ಹಾಗೂ ನನ್ನ ಪೋನ್‌ ಅನ್ನು ಕದ್ದಾಲಿಕೆ ಮಾಡಿಸಿದ್ದರು. ಈ ಪ್ರಕರಣ ಸಂಬಂಧ ನನ್ನನ್ನು ದೆಹಲಿ ಮತ್ತು ಬೆಂಗಳೂರಿನಲ್ಲಿ ಎರಡು ಬಾರಿ ಸಿಬಿಐ ಎಸ್ಪಿ ಹಾಗೂ ಅಧಿಕಾರಿಗಳ ತಂಡ ಭೇಟಿಯಾಗಿತ್ತು. ಆಗ ಕೆಲವು ನಂಬರ್‌ಗಳನ್ನು ತೋರಿಸಿ ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ನನಗೆ ಶಾಕ್‌ ಆಯಿತು’ ಎಂದು ಇದೇ ವೇಳೆ ಸುಮಲತಾ ಹೇಳಿದರು.

‘ಆದರೆ ತಾನು ಪೋನ್‌ ಟ್ಯಾಪಿಂಗ್‌ ಮಾಡಿಲ್ಲ ಎಂದು ಅವರು (ಕುಮಾರಸ್ವಾಮಿ) ಹೇಳಿದ್ದಾರೆ. ಆದರೆ ಕಳ್ಳ ಯಾವತ್ತೂ ತಾನು ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವುದಿಲ್ಲ. ಕಳ್ಳನಾದವನು ಪೊಲೀಸರ ಮೇಲೆ ಆರೋಪ ಮಾಡಿದಂತೆ ಕೆಲವು ನಡೆದುಕೊಳ್ಳುತ್ತಾರೆ’ ಎಂದು ಅವರು ಮಾರ್ಮಿಕವಾಗಿ ನುಡಿದರು.

ಸ್ಮಾರಕಕ್ಕೆ ಮನವಿ ಮಾಡಿದರೆ ಅವಮಾನಿಸಿ ಕಳುಹಿಸಿದ್ದರು

ಅಂಬರೀಷ್‌ ಮೃತಪಟ್ಟನಾಲ್ಕೈದು ದಿನಕ್ಕೆ ಸ್ಮಾರಕ ನಿರ್ಮಾಣ ಸಂಬಂಧ ಚರ್ಚಿಸಲು ಹಿರಿಯ ನಟರಾದ ದೊಡ್ಡಣ್ಣ ಮತ್ತು ಶಿವರಾಂ ತೆರಳಿದ್ದರು. ಆಗ ತಾವು (ಕುಮಾರಸ್ವಾಮಿ) ತೋರಿಸಿದ ವರ್ತನೆ ಹೇಗಿತ್ತು. ಹೇಗೆಲ್ಲ ಮಾತನಾಡಿದ್ದರು ಎಂಬುದನ್ನು ಅವರು (ಕುಮಾರಸ್ವಾಮಿ) ಸ್ವಲ್ಪ ನೆನಪು ಮಾಡಿಕೊಳ್ಳಲಿ. ಮನವಿ ಪತ್ರವನ್ನು ಮುಖದ ಮೇಲೆ ಎಸೆದು ಅವಮಾನಿಸಿ ಕಳುಹಿಸಿದ್ದರು. ಅಷ್ಟೇ ಅಲ್ಲ, ‘ಏನು ಸಾಧನೆ ಮಾಡಿದ್ದಾನೆ ಅಂತ ಆತನ (ಅಂಬರೀಷ್‌) ಹೆಸರಿನಲ್ಲಿ ನಾನು ಸ್ಮಾರಕ ಮಾಡಬೇಕು’ ಎಂದಿದ್ದರು.

- ಸುಮಲತಾ ಅಂಬರೀಷ್‌, ಮಂಡ್ಯ ಸಂಸದೆ