'ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೀತಿಲ್ಲ, ಬದಲಿಗೆ ತಮ್ಮ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ತಿದ್ದಾರೆ'
* ಬಿಜೆಪಿ- ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
* ಕಾಂಗ್ರೆಸ್ ನಾಯಕರ ನಡವಳಿಕೆಗೆ ಕುಮಾರಸ್ವಾಮಿ ಬೇಸರ
* ಸಿದ್ದರಾಮಯ್ಯ ಹಾಗೂ ಸಚಿವ ಡಿಕೆಶಿ ವಿರುದ್ಧ ಎಚ್‌ಡಿಕೆ ಕೆಂಡಾಮಂಡಲ
ಹುಬ್ಬಳ್ಳಿ, (ಜೂನ್.04): ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೀತಿಲ್ಲ. ಬದಲಿಗೆ ತಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ನಿಲ್ಲಿಸೋ ವಿಷಯದಲ್ಲಿ ಕಾಂಗ್ರೆಸ್ ನ ನಾಯಕರ ಜೊತೆ ಚರ್ಚಿಸಿಲ್ಲ. ನಾನು ನಡುಗುವ ಪ್ರಶ್ನೆಯಿಲ್ಲ, ತಳಮಳ ಪ್ರಶ್ನೆಯೂ ಇಲ್ಲ. ಕಾಂಗ್ರೆಸ್ ನಾಯಕರ ನಡವಳಿಕೆ, ನಿರ್ಧಾರಕ್ಕೆ ಬೇಸರವಾಗುತ್ತೆ. ಸಿದ್ಧರಾಮಯ್ಯ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ ಅಂತಾರೆ. ಅವರು ಎರಡು ಹಕ್ಕಿ ಹೊಡೀತಾರೋ, ಅವರೇ ಕಲ್ಲು ತಗೊಂಡು ಹೊಡಕೊಂತಾರೋ ಅಂತ ಜೂನ್ 10ಕ್ಕೆ ಗೊತ್ತಾಗುತ್ತೆ. ಬಿಜೆಪಿಯ ಬಿ ಟೀಂ ನಾಯಕ ಯಾರು ಅಂತ ರಾಜ್ಯಸಭಾ ಚುನಾವಣಾ ಫಲಿತಾಂಶದ ನಂತರ ಗೊತ್ತಾಗುತ್ತೆ ಎಂದರು.
ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಮುಗಿಸೋಕೆ ಹೊರಟಿದ್ದಾರೆ ಎಂಬ ವಿಶ್ಲೇಷಣೆಗಳು ಬಂದಿವೆ. ನಮ್ಮ ಪಕ್ಷದ 32 ಮತಗಳು ಇರೋದ್ರಿಂದ ಅಭ್ಯರ್ಥಿಯನ್ನು ಹಾಕಿದ್ದೇವೆ. ಕೆಲವೊಬ್ಬರಿಗೆ ಅಸಮಾಧಾನ ಇರಬಹುದು. ಹಿಂದೆ ಮಾಡಿದ್ದನ್ನು ರಿಪೀಟ್ ಮಾಡ್ತೀವಿ ಅಂದುಕೊಂಡರೆ ಅದು ಅಸಾಧ್ಯದ ಮಾತು. ಬಿಜೆಪಿಗೆ 32 ಮತ್ತು ನಮಗೆ 32 ಮತಗಳು ಬರುತ್ತೆ. ಕ್ರಾಸ್ ವೋಟಿಂಗ್ ಲೆಕ್ಕಾಚಾರದಲ್ಲಿ ಹೊರಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೊದಲ ಸುತ್ತಿನಲ್ಲಿಯೇ ಹೊರಟು ಹೋಗ್ತಾರೆ. ಅವತ್ತು ಕೇಂದ್ರದ ಹೈಕಮಾಂಡ್ ಒಬ್ಬನೇ ಅಭ್ಯರ್ಥಿಯನ್ನು ಹಾಕೋಕೆ ತೀರ್ಮಾನಿಸಿದ್ದರು. ನನಗೆ ಯಾವುದೇ ರೀತಿಯ ಗೊಂದಲವಿಲ್ಲ, ಗೆಲ್ಲೋಕೆ ಪ್ರಯತ್ನಿಸ್ತೇನೆ. ಯಾರು ಕ್ರಾಸ್ ವೋಟ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆ: ದೇವೇಗೌಡರ ‘ಖರ್ಗೆ ಅಸ್ತ್ರ’ ವಿಫಲಗೊಳಿಸಿದ್ಹೇಗೆ ಸಿದ್ದು-ಡಿಕೆಶಿ.?
ಮಲ್ಲಿಕಾರ್ಜುನ ಖರ್ಗೆ ಮತ್ತು ಕುಪೇಂದ್ರ ರೆಡ್ಡಿಗೂ ಮೊದಲಿನಿಂದಲೂ ನಂಟಿದೆ. ಅವರಿಗೆ ಕಾಂಗ್ರೆಸ್ ನಾಯಕರ ನಂಟಿತ್ತು. ಆ ಹಿನ್ನೆಲೆಯಲ್ಲಿ ಕುಪೇಂದ್ರ ರೆಡ್ಡಿ ಖರ್ಗೆ ಅವರನ್ನು ಸಂಪರ್ಕಿಸಿರಬಹುದು. ಆದರೆ ನಾವಂತೂ ಪ್ರಯತ್ನ ಮಾಡಿಲ್ಲ. ನೂರು ಜನ್ಮ ಎತ್ತಿದರೂ ಜೆಡಿಎಸ್ ಮುಗಿಸೋಕೆ ಆಗಲ್ಲ. ಬಹಳ ಜನ ಪಕ್ಷ ಬಿಟ್ಟು ಹೋಗಿದಾರೆ. ಲೀಡರ್ ಗಳು ಹೋಗ್ತಿರ್ತಾರೆ, ಬರುತ್ತಿರುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಸೃಷ್ಟಿಸಿರೋ ಧರ್ಮ –ಧರ್ಮಗಳ ನಡುವಿನ ಕಿತ್ತಾಟ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ದೇವಸ್ಥಾನ ಇರೋದು ನಿಜ ಎಂದಿರುವ ಕುಮಾರಸ್ವಾಮಿ, ನಾನು ಇತಿಹಾಸ ಓದಿ ತಿಳಿದುಕೊಂಡಿದ್ದೆನೆ. ಇವಾಗ ನಡಿತಿದಿಯಲ್ಲಾ ನಡಿಲಿ. ಎಲ್ಲಿಗೆ ಹೋಗುತ್ತೋ ನೋಡೊಣ. ಅಲ್ಲಿಯ ಜನ ಮನೆ ಕಟ್ಟಿಕೊಳ್ಳೋಕೆ ಅವಕಾಶ ಕೊಡಿ ಅಂತಿದ್ದಾರೆ. ಇವರೆಲ್ಲಾ ಹೊರಗಿಂದ ಬಂದು ದೇವಸ್ಥಾನ ಕಟ್ಟುತ್ತೇವೆ ಅಂತಿದ್ದಾರೆ. ನಾವು ಧರ್ಮ ಉಳಿಸೋಕೆ ಬದ್ದ. ಇವರ ಹೋರಾಟ ಧರ್ಮ ಉಳಿಸೋದಕ್ಕಲ್ಲ. ಬೇರೆಯ ಉದ್ದೇಶವೇ ಇದೆ ಎಂದು ಟಾಂಗ್ ಕೊಟ್ಟರು.
ದೇಶದಲ್ಲಿ ಧರ್ಮ ಉಳಿಯಬೇಕು.ಸರ್ವಜನಾಂಗದ ಶಾಂತಿಯ ತೋಟ ಉಳಿಬೇಕು. ಇವರಿಂದ ಏನು ಡ್ಯಾಮೆಜ್ ಆಗಲ್ಲ. ದೇಶದಲ್ಲಿ ಎಲ್ಲಾ ಧರ್ಮ ಉಳಿಯಬೇಕು ಎನ್ನೋದು ನಮ್ಮ ಉದ್ದೇಶ. 2023 ಕ್ಕೆ ಜನತಾ ಪರಿವಾರದ ಸರ್ಕಾರ ಬರುತ್ತೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ಧರ್ಮ ಧರ್ಮದ ನಡುವಿನ ಕಿತ್ತಾಟಕ್ಕೆ ರಾಜ್ಯದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ತೇವೆ. ಬಿಜೆಪಿಯವರು ಎಷ್ಟೇ ಗಲಭೆ ಉಂಟು ಮಾಡೋ ಕೆಲಸ ಮಾಡಲಿ. ಅದರ ಲಾಭ ಮಾತ್ರ ಜೆಡಿಎಸ್‌ಗೆ ಆಗಲಿದೆ. ಮುಳುಗುವ ಹಡಗು ಜೆಡಿಎಸ್ ಅಲ್ಲ ಬಿಜೆಪಿ. ಬಿಜೆಪಿಯ ಬುಡ ಅಲುಗಾಡುತ್ತಿದೆ. ಕಾಂಗ್ರೆಸ್ ನದ್ದೂ ಇದೇ ಸ್ಥಿತಿ ಇದೆ ಎಂದು ಹೇಳಿದರು.
ರಾಜ್ಯಸಭೆ ಚುನಾವಣೆ ನಮಗೆ ಮುಖ್ಯವಲ್ಲ. ನಮ್ಮದೇನಿದ್ದರೂ ವಿಧಾನಸಭೆ ಚುನಾವಣೆ ಟಾರ್ಗೆಟ್. ಪಂಚರತ್ನ ರಥಯಾತ್ರೆಗೆ ಸಿದ್ಧತೆ ಮಾಡಿಕೊಳ್ತಿದೇನೆ. ನಮ್ಮ ಕಾರ್ಯಕ್ರಮಳನ್ನು ಜನತೆಯ ಮುಂದಿಡ್ತೇವೆ. ನಾನು ಸಮಾಜ ಒಡೆಯೋಕೆ ರಥಯಾತ್ರೆ ಮಾಡ್ತಿಲ್ಲ. ಪ್ರತಿ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ಇತ್ಯಾದಿ ಪಂಚರತ್ನ ಕಾರ್ಯಕ್ರಮದಲ್ಲಿದೆ. ಚಾಲೆಂಜ್ ತಗೊಂಡಿದೇನೆ. ಐದು ವರ್ಷ ಪೂರ್ಣಾವಧಿಗೆ ಅಧಿಕಾರಕ್ಕೆ ಬರೋ ವಿಶ್ವಾಸದಲ್ಲಿದ್ದೇವೆ. ಹಾಗೊಂದು ವೇಳೆ ಅಧಿಕಾರಕ್ಕೆ ತರಲಾಗದಿದ್ದಲ್ಲಿ ಪಕ್ಷವನ್ನೇ ವಿಸರ್ಜಿಸ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ
ಹೊರಟ್ಟಿ ವಿರುದ್ಧ ಎಚ್.ಡಿ.ಕೆ. ವಾಗ್ದಾಳಿ
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ಹೊರಟ್ಟಿ ಅವರು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಶಿಕ್ಷಕರ ನೇಮಕ, ಪಿಯು ಕಾಲೇಜು ಆರಂಭ, ಖಾಸಗಿ ಶಾಲೆಗಳಿಗೆ ಅನುದಾನ ದೊರಕಿಸಿಕೊಟ್ಟಿದ್ದಾಗಿ ಇತ್ಯಾದಿ ಜಾಹೀರಾತು ನೀಡಿದ್ದಾರೆ. ಆದ್ರೆ ತಾವು ಶಿಕ್ಷಕರಾಗಿದ್ದಾಗ ಇದೆಲ್ಲವನ್ನೂ ಏಕೆ ಮಾಡಲಿಲ್ಲ. ನಾನು ಸಿಎಂ ಆಗಿದ್ದಾಗ ಇದೆಲ್ಲವನ್ನೂ ಮಾಡಿದ್ದೇನೆ. ನನ್ನ ವೈಯಕ್ತಿಕ ತೀರ್ಮಾನವೇ ಹೊರತು ಯಾರೋ ಒತ್ತಡ ಹಾಕಿದ್ದಲ್ಲ. ಈಗ ಹೊರಟ್ಟಿ ಹೇಳಿಕೆ ನೀಡ್ತಿದಾರೆ, ಹಳೆ ಪೆನ್ಶನ್ ಸ್ಕೀಂ ಜಾರಿಗೆ ತರೋದಾಗಿ ಭರವಸೆ ನೀಡ್ತಿದಾರೆ. ಸ್ಪೀಕರ್ ಆಗಿದ್ದಾಗ ಹೊರಟ್ಟಿ ಮಾಡಬಹುದಿತ್ತಲ್ಲವೆ ಎಂದು ಪ್ರಶ್ನಿಸಿದರು. ನನ್ನ ಕೈ ಬಲಪಡಿಸೋಕೆ ಹೊಸ ಮುಖಕ್ಕೆ ಅವಕಾಶ ನೀಡುವಂತೆ ಶಿಕ್ಷಕರಿಗೆ ಮನವಿ ಮಾಡಿದರು.