* ಮಳೆ ಹಾನಿ ಪ್ರದೇಶಗಳಿಗೆ ಕುಮಾರಸ್ವಾಮಿ ಭೇಟಿ* ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರವಾರು ತಾರತಮ್ಯ * ಸರ್ಕಾರ ಹಾಗೂ ಶಾಸಕರಿಗೆ ಕುಮಾರಸ್ವಾಮಿ ವಾರ್ನಿಂಗ್
ಬೆಂಗಳೂರು, (ಮೇ.22): ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರವಾರು ತಾರತಮ್ಯ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನಾಡಪ್ರಭು ಕೆಂಪೇಗೌಡರು ಸರ್ವ ಜನಾಂಗದವರನ್ನು ಸಮಭಾವದಿಂದ ಕಂಡಿದ್ದರು. ಸರ್ವ ಜನಾಂಗದ ತೋಟ ನಿರ್ಮಿಸಿದ್ದರು. ಬೆಂಗಳೂರಿನ ಯಲಹಂಕದಲ್ಲಿ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
HDK City Rounds: ಕುಮಾರಸ್ವಾಮಿ ಎರಡನೇ ದಿನದ ಸಿಟಿ ರೌಂಡ್ಸ್: ಮಾಜಿ ಸಿಎಂ ಬಳಿ ಸಂಕಷ್ಟ ತೋಡಿಕೊಂಡ ಜನ
ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದು, ಅವರು ವಾಸಿಸುವ ಬಡಾವಣೆಯನ್ನು ಕಡೆಗಣಿಸಿ ಟಾರ್ಗೆಟ್ ಮಾಡಲಾಗಿದೆ. ನಿನ್ನೆ(ಶನಿವಾರ) ಯಲಹಂಕ ಕ್ಷೇತ್ರದ ಬೆಳೆ ಹಾನಿ ಪ್ರದೇಶ ವೀಕ್ಷಣೆಗೆ ತೆರಳಿದ್ದೆ, ಆಗ ನನಗೆ 'ರಿಪಬ್ಲಿಕ್ ಆಫ್ ಯಲಹಂಕ'ದ ಮಹಾದರ್ಶನವೇ ಆಯಿತು. ನೈಜ ಸಂತ್ರಸ್ತರೇ ಅಹವಾಲು ಹೇಳಿಕೊಳ್ಳಲು ಮುಂದೆ ಬರಲಿಲ್ಲ. ಸಂತ್ರಸ್ತರು ಬಾರದೇ ಇರುವುದು ನನ್ನನ್ನು ಚಕಿತಗೊಳಿಸಿತು ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಚಿಕ್ಕಬೆಟ್ಟಹಳ್ಳಿ ಜನ ಮತ ಕೊಡಲಿಲ್ಲ ಅಂತ ಕಡೆಗಣಸಲಾಗಿದೆ. ಇದಕ್ಕಿಂತ ಮಿಗಿಲಾದ ಪಾಪದ ಕೆಲಸ ಮತ್ತೊಂದಿಲ್ಲ. ಶಾಸಕರು ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬಾರದು. ನಾನೆಂದೂ, ಎಲ್ಲಿಯೂ ಇಂಥ ಕೆಟ್ಟ ರಾಜಕೀಯ ನೋಡಿಲ್ಲ. ಡಾಂಬರು ಇಲ್ಲದ ರಸ್ತೆಗಳು, ವಿದ್ಯುತ್ ದೀಪಗಳು ಇಲ್ಲದ ಬೀದಿಗಳು, ಕನಿಷ್ಠ ಮೂಲಸೌಕರ್ಯವೂ ಇಲ್ಲದ ಪ್ರದೇಶಗಳು ನನಗೆ ಕಂಡವು. ನನ್ನನ್ನು ಭೇಟಿಯಾಗಿ ದೂರು ನೀಡದಂತೆ ಸ್ಥಳೀಯ ಶಾಸಕರು ಬೆದರಿಕೆ ಹಾಕಿದ್ದಾರೆ. ಶಾಸಕರು & ಅವರ ಪಟಾಲಂ ಹೆದರಿಸಿದ್ದಾರೆನ್ನುವ ಮಾಹಿತಿ ಸಿಕ್ಕಿತು. ದೂರು ಕೊಟ್ಟರೆ ಇಡೀ ಅಪಾರ್ಟ್ಮೆಂಟ್ ನೆಲಸಮ ಮಾಡಿಸುತ್ತೇವೆ. ಅಲ್ಲಿನ ಸ್ಥಳೀಯ ನಿವಾಸಿಗಳನ್ನು ಶಾಸಕ ವಿಶ್ವನಾಥ್ ಬೆದರಿಕೆ ಹಾಕಿದ್ದಾರೆ. ಚಿಕ್ಕಬೆಟ್ಟಹಳ್ಳಿಗೆ ಒಂದು ತಿಂಗಳ ಒಳಗಾಗಿ ಮೂಲಸೌಕರ್ಯ ಕಲ್ಪಿಸಬೇಕು. ತಪ್ಪಿದರೆ ಖುದ್ದು ನಾನೇ ಅಲ್ಲಿಗೆ ಹೋಗಿ ಧರಣಿ ಕೂರಬೇಕಾಗುತ್ತದೆ ಎಂದು ಶಾಸಕ ಎಸ್‌ಆರ್. ವಿಶ್ವನಾಥ್ಗೆ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯನ್ನು ಸ್ವಿಮ್ಮಿಂಗ್ ಪೂಲ್ ಮಾಡಿದ ಹೆಗ್ಗಳಿಕೆ ಬಿಜೆಪಿ ಸರಕಾರಕ್ಕೇ ಸಲ್ಲಬೇಕು. ಅಭಿವೃದ್ಧಿಯಲ್ಲಿ ಕ್ಷೇತ್ರವಾರು ತಾರತಮ್ಮ ಮಾಡಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿ ಖಂಡನೀಯ. ಅನುದಾಲದ ಹೊಳೆ ಹರಿದ ಕ್ಷೇತ್ರಗಳೇ ಈಗ ನೀರಿನಲ್ಲಿ ತೇಲುತ್ತಿವೆ. ದೇಶದ್ರೋಹಿಗಳು, ಇವರು ರಾಷ್ಟ್ರವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಬಿಜೆಪಿ ನಾಯಕರು ಮತ್ತು ಶಾಸಕರು, ಅಭಿವೃದ್ಧಿಯಲ್ಲಿ ನಿರ್ದಿಷ್ಟ ಸಮುದಾಯದ ಜನ ವಾಸಿಸುತ್ತಿರುವ ಪ್ರದೇಶಕ್ಕೆ ತಾರತಮ್ಯ ಎಸಗಿರುವುದೇ ದೊಡ್ಡ ದೇಶದ್ರೋಹ ಎಂದು ಹೇಳಿದ್ದಾರೆ.
