ಲೋಕಸಭಾ ಸೀಟು ಹಂಚಿಕೆ ಚರ್ಚೆಗೆ ಎಚ್.ಡಿ.ಕುಮಾರಸ್ವಾಮಿ ಶೀಘ್ರ ದಿಲ್ಲಿಗೆ
ಎನ್‌ಡಿಎ ಭಾಗವಾಗಿರುವ ಜೆಡಿಎಸ್ ಪಕ್ಷವು ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ಮುಂದುವರಿಸುತ್ತಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶೀಘ್ರದಲ್ಲೇ ದೆಹಲಿಗೆ ತೆರಳುವ ನಿರೀಕ್ಷೆಯಿದೆ.
ಬೆಂಗಳೂರು (ಜ.03): ಎನ್‌ಡಿಎ ಭಾಗವಾಗಿರುವ ಜೆಡಿಎಸ್ ಪಕ್ಷವು ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ಮುಂದುವರಿಸುತ್ತಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶೀಘ್ರದಲ್ಲೇ ದೆಹಲಿಗೆ ತೆರಳುವ ನಿರೀಕ್ಷೆಯಿದೆ. ಕಳೆದ ಸಂಸತ್ ಅಧಿವೇಶನದ ವೇಳೆ ದೆಹಲಿಗೆ ಪ್ರಯಾಣ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂದಿನ ವಾರದ ಹೊತ್ತಿಗೆ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ವಿಚಾರವಾಗಿ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಅಯೋಧ್ಯೆಯಲ್ಲಿ ಇದೇ ತಿಂಗಳ 22ರಂದು ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಇದ್ದು, ಬಿಜೆಪಿ ವರಿಷ್ಠರು ಅದರ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಂದಿರ ಉದ್ಘಾಟನೆಗೂ ಮುನ್ನ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿಯಾಗುವುದು ಕುಮಾರಸ್ವಾಮಿ ಅವರ ಅಭಿಲಾಷೆಯಾಗಿದೆ. ಅಮಿತ್ ಶಾ ಸೀಟು ಹಂಚಿಕೆ ವಿಚಾರವನ್ನು ಪ್ರಸ್ತಾಪಿಸಲಾಗುವುದು. ಕುಮಾರಸ್ವಾಮಿ ಜತೆ ಪಕ್ಷದ ಕೆಲವು ಮುಖಂಡರು ಸಹ ತೆರಳುವ ಸಾಧ್ಯತೆ ಇದೆ. ಸೀಟು ಹಂಚಿಕೆ ವಿಚಾರವಾಗಿ ಕುಮಾರಸ್ವಾಮಿ ಅವರು ಪಕ್ಷದ ಮುಖಂಡರ ಜತೆ ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಎನ್‌ಡಿಎ ಭಾಗವಾಗಿರುವ ಹಿನ್ನೆಲೆಯಲ್ಲಿ ತಮಗೆ ಲಭ್ಯವಾಗುವ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂಬುದರ ನಿಟ್ಟಿನಲ್ಲಿ ಸಿದ್ಧತೆ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ವಿಜಯೇಂದ್ರ ಮೊದಲು ಶಾಸಕ ಯತ್ನಾಳ್‌ಗೆ ಉತ್ತರಿಸಿ: ಸಚಿವ ಮಧು ಬಂಗಾರಪ್ಪ
ಖರ್ಗೆ ಬದಲು ರಾಹುಲ್ ಪ್ರಧಾನಿ ಆಗಲಿ ಎಂದು ಸಿದ್ದು ಹೇಳಿದ್ದೇಕೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬದಲಿಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಸಂಕುಚಿತ ಮನೋಭಾವ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೊಬ್ಬ ಕನ್ನಡಿಗರೊಬ್ಬರು ಪ್ರಧಾನಿಯಾಗಲಿ ಎಂದು ಸಿದ್ದರಾಮಯ್ಯ ಹೇಳಲಿಲ್ಲ. ಒಂದು ವೇಳೆ ಆ ವಿಚಾರ ಪ್ರಸ್ತಾಪ ಮಾಡದೆ ತಟಸ್ಥವಾಗಿದ್ದರೆ ಆಗುತ್ತಿತ್ತು. ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಅವರ ಮನಸ್ಥಿತಿ ಎಂಥದ್ದು ಎಂಬುದನ್ನು ತಿಳಿಸುತ್ತದೆ. ದಲಿತ ಸಮುದಾಯಗಳು ಇದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಂದಿನ ಸಂಪುಟದಲ್ಲಿ ಮಿನಿಸ್ಟರ್ ಆಗುತ್ತಾರೆ ಶಿವಲಿಂಗೇಗೌಡ: ಸಚಿವ ರಾಜಣ್ಣ ಭವಿಷ್ಯ
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗಲಿ ಎಂದು ಇತರೆ ರಾಜ್ಯಗಳ ಮುಖ್ಯಮಂತ್ರಿಗಳು ಬಯಸುತ್ತಾರೆ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಅವರಿಗೆ ರಾಹುಲ್ ಗಾಂಧಿ ಋಣ ತೀರಿಸಬೇಕಾಗಿದೆ. ಕನ್ನಡಿಗರು ಪ್ರಧಾನಿಯಾದರೆ ನನಗೆ ಸಂತೋಷ. ಆದರೆ ಈಗ ಆಗುವ ಪರಿಸ್ಥಿತಿ ಇಲ್ಲ. ಸಿದ್ದರಾಮಯ್ಯ ಅವರದ್ದು ಒಡೆದು ಆಳುವ ನೀತಿ. ಜನತಾದಳದಲ್ಲಿದ್ದು ಗುಳೇ ಹೋಗಿ ಕಾಂಗ್ರೆಸ್ ನಲ್ಲಿ ಜಾಗ ಹಿಡಿದರು. ಕನಿಷ್ಠ ಸೌಜನ್ಯಕ್ಕೆ ಸುಮ್ಮನೆ ಇರಬೇಕಿತ್ತು. ಆ ರೀತಿ ಏಕೆ ಹೇಳಿಕೆ ನೀಡಬೇಕಿತ್ತು? ಅಧಿಕಾರ ಹಿಡಿಯುವ ತನಕ ಅಹಿಂದ, ಅಧಿಕಾರ ಬಂದ ಮೇಲೆ ಅದನ್ನು ಮರೆತರು ಎಂದು ಟೀಕಾಪ್ರಹಾರ ನಡೆಸಿದರು.