ನಾಗಮಂಗಲದ ಶ್ರೀ ಸೋಮನಹಳ್ಳಿ ಅಮ್ಮನವರ ದೇವಸ್ಥಾನ ಬಳಿ ಆಯೋಜಿಸಿದ್ದ ಜೆಡಿಎಸ್‌ ಸಮಾವೇಶವನ್ನು ದೇವೇಗೌಡರು  ಮನೆಯಿಂದಲೇ ವೀಕ್ಷಿಸುತ್ತಿರುವ ವಿಡಿಯೋ ಎಲ್‌ಇಡಿ ಪರದೆಯಲ್ಲಿ ಪ್ರದರ್ಶನವಾಯಿತು. ಅದನ್ನು ಕಂಡು ಕುಮಾರಸ್ವಾಮಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡವು.

ನಾಗಮಂಗಲ (ಆ.1): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನಾಗಮಂಗಲದಲ್ಲಿ ನಡೆಯುತ್ತಿರುವ ಜೆಡಿಎಸ್‌ ಸಮಾವೇಶ ವೀಕ್ಷಿಸುತ್ತಿರುವ ವಿಡಿಯೋ ಕಂಡು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟರು. ಸಹೋದರ ರೇವಣ್ಣ ಅವರ ಕಣ್ಣಾಲಿಗಳು ಕೂಡ ಈ ವೇಳೆ ಒದ್ದೆಯಾದವು. ತಾಲೂಕಿನ ಸೋಮನಹಳ್ಳಿ ಅಮ್ಮನ ದೇವಾಲಯ ಆವರಣದಲ್ಲಿ ನಡೆಯುತ್ತಿರುವ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡುತ್ತಿದ್ದ ವೇಳೆ ದೇವೇಗೌಡರು ಸಮಾವೇಶ ವೀಕ್ಷಿಸುತ್ತಿರುವ ವಿಡಿಯೋ ಎಲ್‌ಇಡಿ ಮೇಲೆ ಪ್ರದರ್ಶನವಾಯಿತು. ಅದನ್ನು ಕಂಡು ಕುಮಾರಸ್ವಾಮಿ ಕಣ್ಣುಗಳಲ್ಲಿ ನೀರು ತುಂಬಿಕೊಂಡವು. ನಮ್ಮ ಮೇಲೆ ಯಾರದೋ ಕೆಟ್ಟಕಣ್ಣು ಬಿದ್ದಿದೆ. ಅದರಿಂದಲೇ ದೇವೇಗೌಡರು ಕಾರ್ಯಕ್ರಮಕ್ಕೆ ಬರಲು ಆಗದ ಸ್ಥಿತಿ ನಿರ್ಮಾಣವಾಗಿದೆ. ನಾನು ಅಳಬಾರದು ಅಂತಾನೇ ಇದ್ದೆ, ಆದರೆ, ನಮ್ಮದು ಕಟುಕ ಹೃದಯವಲ್ಲ. ತಾಯಿ ಹೃದಯ. ಇದು ನಾಟಕ ಅಲ್ಲ. ದೇವೇಗೌಡರು ಇರುವ ಸ್ಥಿತಿ ನೋಡಿದರೆ ನೋವಾಗುತ್ತದೆ. ಪರಿಸ್ಥಿತಿ ಕಣ್ಣೀರು ತರಿಸುತ್ತದೆ ಎಂದು ಕಂಬನಿಗರೆದರು. ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ನಾವು ಎಂದು ಹಲವರು ಹೇಳುತ್ತಾರೆ. ಆದರೆ, ನಾನು ಸಿಎಂ ಆಗಿದ್ದು ನನ್ನ ತಂದೆ ತಾಯಿ ಆಶೀರ್ವಾದ ಹಾಗೂ ಜನರ ಬೆಂಬಲದಿಂದ ಎಂದು ಟಾಂಗ್‌ ನೀಡಿದರು. ದೇವೇಗೌಡರನ್ನು ಕಂಡು ಭಾವುಕರಾದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಾಂತ್ವನ ಹೇಳಿದರು.

ಮನೆಯಲ್ಲೇ ಕುಳಿತು ವೀಕ್ಷಣೆ: ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಮನೆಯಲ್ಲೇ ಕುಳಿತು ನಾಗಮಂಗಲ ತಾಲೂಕಿನ ಸೋಮನಹಳ್ಳಿ ಅಮ್ಮನ ದೇವಾಲಯದ ಎದುರು ನಡೆದ ಜೆಡಿಎಸ್‌ ಸಮಾವೇಶವನ್ನು ವೀಕ್ಷಿಸಿದರು. ಅದರ ಲೈವ್‌ ವಿಡಿಯೋವನ್ನು ಸಮಾವೇಶದಲ್ಲಿ ಹಾಕಿದ್ದ ಎಲ್‌ಇಡಿ ಸ್ಕ್ರೀನ್‌ ಮೇಲೆ ಪ್ರದರ್ಶಿಸಲಾಯಿತು.

ತಮಗೂ ಒಂದು ಅವಕಾಶ ಕೊಡಿ ಅಂತ ಒಬ್ರು ಕೇಳ್ತಿದ್ದಾರೆ, ಜೆಡಿಎಸ್‌ ಸಮಾವೇಶದಲ್ಲಿ ಡಿಕೆಶಿಗೆ ಕುಮಾರಸ್ವಾಮಿ ಟಾಂಗ್‌: ಚುನಾವಣೆ ಸಮಯದಲ್ಲಿ ಕೆಲವರು ಜಾತಿ ರಾಜಕೀಯ ಆರಂಭಿಸಿದ್ದಾರೆ. ನಾನೂ ಒಕ್ಕಲಿಗ, ನನಗೂ ಒಮ್ಮೆ ಅವಕಾಶ ಕೊಡಿ ಎಂದು ಒಬ್ಬರು ಕೇಳುತ್ತಿದ್ದಾರೆ. ಆದರೆ, ಸಮುದಾಯಕ್ಕೆ ಅವರು ನೀಡಿದ ಕೊಡುಗೆ ಏನೆನ್ನುವುದನ್ನು ಯೋಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೆಸರೇಳದೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟಾಂಗ್‌ ನೀಡಿದರು.

ತಾಲೂಕಿನ ಸೋಮನಹಳ್ಳಿ ಅಮ್ಮನ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಜೆಡಿಎಸ್‌ ಸಮಾವೇಶದಲ್ಲಿ ಭಾನುವಾರ ಮಾತನಾಡಿ, ನಾನು ಮುಖ್ಯಮಂತ್ರಿಯಾಗೋದು ಮುಖ್ಯವಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ನಿಮಗೆ ಉಪಯೋಗ ಆಗುತ್ತದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದಿರಿ. ಅಂದು ನನ್ನನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸುವಲ್ಲಿ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿತ್ತು ಎಂದು ಸ್ಮರಿಸಿದರು.

ದೇವೇಗೌಡ ಬಳಿ ಇರೋದು 4 ಪಂಚೆ, ಜುಬ್ಬಾ, ಸ್ವಂತ ಮನೆ ಇಲ್ಲ: ಇಬ್ರಾಹಿಂ

ಕೆ.ಆರ್‌.ಪೇಟೆಯಲ್ಲಿ ಮೊನ್ನೆ ಭಾಷಣ ಮಾಡಿದ ಮಾಜಿ ಸಿಎಂ (ಯಡಿಯೂರಪ್ಪ) ಒಬ್ಬರು ನಾನು ಬಜೆಟ್‌ ಭಾಷಣ ಮಾಡುವಾಗ ಮಂಡ್ಯ ಬಜೆಟ್‌ ಎಂದು ನಗುತ್ತಿದ್ದರು. ನಾನು ಕೊಟ್ಟಅನುದಾನ ವಾಪಸ್‌ ಪಡೆದುಕೊಂಡರು. ನಾನು ಜಿಲ್ಲೆಗೆ ಸೀಮಿತವಾಗಿ ಆಡಳಿತ ನಡೆಸಿಲ್ಲ, ಇಡೀ ರಾಜ್ಯದ ಅಭಿವೃದ್ಧಿಗೆ ಪೂರಕ ಆಡಳಿತ ಕೊಟ್ಟಿದ್ದೇವೆಂದರು.

ಮಂಡ್ಯ ಹಿಡಿದಿಟ್ಟುಕೊಳ್ಳಲು ದಳಪತಿ ಶಕ್ತಿ ಪ್ರದರ್ಶನ, ಕಾಂಗ್ರೆಸ್‌ ನಾಯಕರು ಜೆಡಿಎಸ್ ಸೇರ್ಪಡೆ

ಮುಂದಿನ ತಿಂಗಳಿನಿಂದ ಪಂಚರತ್ನ ರಥ ಅಭಿಯಾನ ಆರಂಭಿಸುತ್ತೇನೆ. 120 ದಿನ ರಾಜ್ಯಾದ್ಯಂತ ಸಂಚಾರ ಮಾಡುವೆ. ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿ ಜನರ ಕಷ್ಟ-ಸುಖಗಳನ್ನು ಅರಿಯುತ್ತೇನೆ. ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿಯಾಗಿದೆ ಎಂದರು.

ನಿಖಿಲ್‌ ಚುನಾವಣೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಮಂಡ್ಯ ಜನರು ನಮ್ಮನ್ನು ಚುನಾವಣೆಯಲ್ಲಿ ಸೋಲಿಸಲಿಲ್ಲ. ಬಿಜೆಪಿ, ಕಾಂಗ್ರೆಸ್‌, ರೈತ ಸಂಘ ಹಾಗೂ ಕೆಲ ಮಾಧ್ಯಮಗಳು ಚಕ್ರವ್ಯೂಹ ರಚಿಸಿ ನಮ್ಮನ್ನು ಸೋಲಿಸಿದರು ಎಂದು ಹೇಳಿದರು.