ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇರುವಾಗಲೇ ಮಂಡ್ಯದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಮಾಡುವ ಮೂಲಕ ರಣಕಹಳೆ ಮೊಳಗಿಸಿದೆ. ಇನ್ನು ಸಮಾವೇಶದಲ್ಲಿ ಕಾಂಗ್ರೆಸ್ ನಾಯರು ಜೆಡಿಎಸ್ ಸೇರ್ಪಡೆಯಾದರು. ಅಲ್ಲದೇ ಕುಮಾರಸ್ವಾಮಿ ಕಣ್ಣೀರು ಹಾಕಿದರು.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.

ಮಂಡ್ಯ, (ಜುಲೈ.31):
ಮಂಡ್ಯದಲ್ಲಿ ಲೋಕಸಭಾ ಚುನಾವಣೆಯಿಂದ ಆರಂಭವಾದ ಜೆಡಿಎಸ್ ಸೋಲಿನ ಸರಣಿ ಕೆಆರ್ ಪೇಟೆ ಉಪ ಚುನಾವಣೆ, 2 ವಿಧಾನ ಪರಿಷತ್ತಿನ ಚುನಾವಣೆಯಲ್ಲೂ ಮುಂದುವರಿದಿತ್ತು. ವಿರೋಧಿಗಳು ಜೆಡಿಎಸ್‌ ಭದ್ರಕೋಟೆ ಭೇದಿಸಿದ ಖುಷಿಯಲ್ಲಿ ತೇಲಾಡ್ತಿದ್ರು. ಆದ್ರೆ, ದಳಪತಿಗಳು ತನ್ನ ಭದ್ರಕೋಟೆ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. 

ಈ ಹಿನ್ನೆಲೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ರಣಕಹಳೆ ಊದಿದ್ದಾರೆ. ನಾಗಮಂಗಲದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ಚುನಾವಣಾ ತಯಾರಿಗೆ ಚಾಲನೆ ನೀಡಿದ್ದಾರೆ. ಸಮಾವೇಶಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನ ಸೇರಿಸುವ ಮೂಲಕ ಮಂಡ್ಯದಲ್ಲಿ ಜೆಡಿಎಸ್ ಶಕ್ತಿ ಕುಗ್ಗಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.ಆದ್ರೆ, ಈ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅನಾರೋಗ್ಯ ಹಿನ್ನಲೆಯಲ್ಲಿ ದೇವೇಗೌಡ್ರು ಈ ಸಮಾವೇಶದಲ್ಲಿ ಪಾಲ್ಗೊಂಡಿಲ್ಲ.

ಜೆಡಿಎಸ್‌ ಬೃಹತ್ ಸಮಾವೇಶಕ್ಕೆ ದೇವೇಗೌಡ ಗೈರು: ತಂದೆ ಸ್ಥಿತಿ ಕಂಡು ಕುಮಾರಸ್ವಾಮಿ ಕಣ್ಣೀರು

ಚಲುವರಾಯಸ್ವಾಮಿ ಆಪ್ತರು ಜೆಡಿಎಸ್ ಸೇರ್ಪಡೆ
ಕಾರ್ಯಕರ್ತರ ಸಭೆ ಜೊತೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿದ್ದ ಜೆಡಿಎಸ್. ನಾಗಮಂಗಲ ಕ್ಷೇತ್ರದ ಹಲವು ನಾಯಕರನ್ನ ಪಕ್ಷಕ್ಕೆ ಬರಮಾಡಿಕೊಂಡಿತು. ನಾಗಮಂಗಲ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ಮಾಜಿ ಸಿಎಂ‌ ಕುಮಾರಸ್ವಾಮಿ ಜೆಡಿಎಸ್‌ ಶಾಲು ಹೊದಿಸಿ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡ್ರು. ಮಾಜಿ ಸಚಿವ ಚಲುವರಾಯಸ್ವಾಮಿ ಆಪ್ತರಾಗಿದ್ದ ಕಾಂಗ್ರೆಸ್ಸಿನ ಅನೇಕ ಮುಖಂಡರು, ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್‌ ಸೇರ್ಪಡೆಯಾಗಿದ್ದು ಗಮನಾರ್ಹವಾಗಿದೆ.

ಬೃಹತ್ ವೇದಿಕೆ, ಸಹಸ್ರಾರು ಕಾರ್ಯಕರ್ತರು

ನಾಗಮಂಗಲ ವಿಧಾನಸಭಾ ಕ್ಷೇತ್ರದ ಸೋಮನಹಳ್ಳಿ ಅಮ್ಮ ದೇವಾಲಯದ ಆವರಣದಲ್ಲಿ ಜೆಡಿಎಸ್‌ ಸಮಾವೇಶಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಕ್ಷೇತ್ರದ ಮೂಲೆ ಮೂಲೆಯಿಂದ ಸಹಸ್ರಾರು ಜನರು ಆಗಮಿಸಿದ್ರು. ಸಮಾವೇಶದಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಆಯೋಜನೆ ಮಾಡಲಾಗಿತ್ತು. ಸಮಾವೇಶ ಆರಂಭಕ್ಕೂ ಮೊದಲಿಂದ ಕೊನೆಯವರೆಗೂ ನೆರೆದಿದ್ದ ಎಲ್ಲರಿಗೂ ಬಾಡೂಟ ಬಡಿಸಲಾಯಿತು. ಅದಕ್ಕಾಗಿ ಆರೂವರೆ ಟನ್ ಮಟನ್, ಎರಡೂವರೆ ಟನ್ ಚಿಕನ್ ನಿಂದ ಬೋಟಿ, ಮಟನ್ ಕುರ್ಮ, ಚಿಕನ್ ಫ್ರೈ, ಮುದ್ದೆ, ಅನ್ನ, ಸಾಂಬಾರ್ ಸೇರಿದಂತೆ ವಿವಿಧ ಖಾದ್ಯವನ್ನ ಚನ್ನರಾಯಪಟ್ಟಣ ಮೂಲದ ಸುನಿಲ್ ನೇತೃತ್ವದ ಬಾಣಸಿಗರು ಸಿದ್ಧಪಡಿಸಿದ್ರು. 

ಹೆಚ್ಡಿಕೆಗೆ ಅದ್ದೂರಿ ಸ್ವಾಗತ
ಸಮಾವೇಶಕ್ಕೆ ಆಗಮಿಸಿದ‌ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವ್ರನ್ನ ಜಿಲ್ಲೆಯ ಗಡಿಭಾಗ ನೆಲ್ಲಿಗೆರೆ ಟೋಲ್ ನಿಂದ ಬೈಕ್ ರ‍್ಯಾಲಿಯಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯ್ತು. ದಾರಿಯುದ್ದಕ್ಕೂ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಡಿಕೆ, ಹೆಚ್ಡಿಡಿ, ಜೆಡಿಎಸ್‌ ಪರ ಘೋಷಣೆ ಮೊಳಗಿಸಿದ್ರೆ, ಪ್ರತಿ ಹಳ್ಳಿಗಳಲ್ಲೂ ಪಟಾಕಿ ಸಿಡಿಸಿ, ಪುಷ್ಪವೃಷ್ಟಿ ಹರಿಸಿ ಸ್ವಾಗತಿಸಿದ್ರು.

ತಂದೆ ಅನಾರೋಗ್ಯ ನೆನೆದು ಕುಮಾರಸ್ವಾಮಿ ಕಣ್ಣೀರು

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತೆ ಬಹಿರಂಗ ವೇದಿಕೆಯಲ್ಲೇ ಕಣ್ಣೀರಿಟ್ರು. ತಮ್ಮ ತಂದೆ ದೇವೇಗೌಡರ ಅನಾರೋಗ್ಯ ಹಾಗೂ ಸಮಾವೇಶದಲ್ಲಿ ಪಾಲ್ಗೊಳ್ಳಲಾಗದೆ ಮನೆಯಲ್ಲೇ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸುತ್ತಿರುವ ಅಸಹಾಯಕ ದೃಶ್ಯ ಕಂಡು ಕುಮಾರಸ್ವಾಮಿ ಮತ್ತು ರೇವಣ್ಣ ಸಹೋದರರು ಭಾವುಕರಾದರು.