ಕೋಲಾರ ಜೆಡಿಎಸ್ ನಾಯಕರ ಜತೆ ಕುಮಾರಸ್ವಾಮಿ ಮಾತುಕತೆ
ಕೋಲಾರ ಜಿಲ್ಲೆಯ ರಾಜಕೀಯ ಪರಿಸ್ಥಿತಿ ಅವಲೋಕನ ಮಾಡಿ, ಈ ವೇಳೆ ಹಲವು ಮಾಹಿತಿಗಳನ್ನು ಸಂಗ್ರಹಿಸಿ, ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು(ಮಾ.08): ಲೋಕಸಭಾ ಚುನಾವಣೆಗೆ ಸಿದ್ಧತೆ ಕೈಗೊಂಡಿರುವ ಜೆಡಿಎಸ್ ಕ್ಷೇತ್ರವಾರು ಸರಣಿ ಸಭೆಗಳನ್ನು ನಡೆಸುವ ಕಾರ್ಯ ಮುಂದುವರಿಸಿದ್ದು, ಕೋಲಾರ ಜಿಲ್ಲೆಯ ಮುಖಂಡರ ಜತೆ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು. ಗುರುವಾರ ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಕೋಲಾರ ಜಿಲ್ಲೆಯ ಮುಖಂಡರ ಜತೆ ಸಮಾಲೋಚನೆ ನಡೆಸಿ, ಲೋಕಸಭೆ ಚುನಾವಣೆಯಲ್ಲಿ ಕಾರ್ಯತಂತ್ರ ರೂಪಿಸುವ ಕುರಿತು ಸಮಾಲೋಚನೆ ನಡೆಸಿದರು.
ಜಿಲ್ಲೆಯ ರಾಜಕೀಯ ಪರಿಸ್ಥಿತಿ ಅವಲೋಕನ ಮಾಡಿದರು. ಈ ವೇಳೆ ಹಲವು ಮಾಹಿತಿಗಳನ್ನು ಸಂಗ್ರಹಿಸಿ, ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಜೆಡಿಎಸ್ ಎಲ್ಲಿದೆ? ಬಿಜೆಪಿ ಸ್ಪೋಕ್ಸ್ ಪರ್ಸನ್ ಆದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್
ಜಿಲ್ಲೆಯ ಬಿಜೆಪಿ ಮುಖಂಡರು, ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮತ್ತು ಘೋಷಣೆ ಮಾಡಲಾಗುತ್ತದೆ. ಅಭ್ಯರ್ಥಿ ಯಾರೇ ಆದರೂ ಅವರು ಮೈತ್ರಿಕೂಟದ ಅಭ್ಯರ್ಥಿಯಾಗಲಿದ್ದಾರೆ. ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಘೋಷಣೆಯಾಗುವ ಅಭ್ಯರ್ಥಿ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಜಿ.ಕೆ.ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಮೇಲೂರು ರವಿ, ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಕೆ.ಎಂ.ಕೃಷ್ಣಾರೆಡ್ಡಿ ಇತರರು ಉಪಸ್ಥಿತರಿದ್ದರು.