ಬೆಂಗಳೂರು, (ಫೆ.17): ರಾಮಮಂದಿರ ದೇಣಿಗೆ ಬಗ್ಗೆ ವಿವದಾತ್ಮಕ ಹೇಳಿಕೆ ಕೊಟ್ಟಿದ್ದ ಕುಮಾರಸ್ವಾಮಿ ಅವರು ಇಂದು (ಬುಧವಾರ) ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ.

"

ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಯಾರು ಹಣ ಕೊಡುವುದಿಲ್ಲವೋ ಆರ್​​ಎಸ್​ಎಸ್​ ಅವರ ಮನೆಗೆ ಪ್ರತ್ಯೇಕವಾಗಿ ಗುರುತು ಹಾಕುತ್ತಿದೆ. ಈ ಮೂಲಕ ಜರ್ಮನಿಯ ನಾಜಿಗಳಂತೆ ವರ್ತಿಸುತ್ತಿದೆ ಎಂಬ ಎಚ್​. ಡಿ.ಕುಮಾರಸ್ವಾಮಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಈ ಬಗ್ಗೆ  ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮ ಮಂದಿರ ಕಟ್ಟಲು ನನ್ನ ವಿರೋಧವಿಲ್ಲ. ಆದರೆ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇರಲಿ ಎಂದು ಹೇಳಿದರು.

ರಾಮ ಮಂದಿರ ದೇಣಿಗೆ ವಿವಾದಕ್ಕೆ ಸಮಜಾಯಿಷಿ ಕೊಟ್ಟ ಎಚ್‌ಡಿಕೆ

ಪುಂಡ-ಪೋಕರಿಗಳಿಂದ ಹಣ ಸಂಗ್ರಹ
ದೇಣಿಗೆ ಸಂಗ್ರಹಿಸುವ ಸದಸ್ಯರ ಬಗ್ಗೆ ನಾನು ಮಾತನಾಡಿಲ್ಲ. ದೇಣಿಗೆ ಸಂಗ್ರಹ ವಿಚಾರದಲ್ಲಿ ಸರ್ಕಾರದ ಬಗ್ಗೆ ಮಾತನಾಡಿಲ್ಲ. ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇರಬೇಕು ಎಂದಿದ್ದೆ. ನಾನೇನು ರಾಮನ ಬಗ್ಗೆ ಅಪಮಾನವಾಗಿ ಮಾತನಾಡಿದ್ನಾ? ರಾಮಮಂದಿರ ಕಟ್ಟುವ ಬಗ್ಗೆ ನನ್ನ ಯಾವ್ದೇ ವಿರೋಧವಿಲ್ಲ. ಆದರೆ ರಾಮನ ಹೆಸರಲ್ಲಿ ಪುಂಡ-ಪೋಕರಿಗಳಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ ಅವರಿಗೆ ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ದೇಣಿಗೆ ಸಂಗ್ರಹದ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರ ನಡೆಯುತ್ತಿದೆ. ಹೀಗೆ ದೇಣಿಗೆ ಸಂಗ್ರಹಿಸುವ ಲೆಕ್ಕಾ ಸಿಗುತ್ತಾ ಅಂತಾ ಕೇಳಿದ್ದೆ, ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇರಬೇಕು ಎಂದಿದ್ದೆ. ಈ ವಿಚಾರ ರಾಜಕೀಯವಾಗಿ ಬಳಸಿ ಮಾತನಾಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ರಾಮ ಮಂದಿರ ದೇಣಿಗೆ; ವಿವಾದಾತ್ಮಕ ಹೇಳಿಕೆ ನೀಡಿ ಕೈಸುಟ್ಟುಕೊಂಡ ಹೆಚ್‌ಡಿಕೆ, ಸಿದ್ದು!

'ಹಣ ಹೊಡೆಯುವ ಕೆಲಸ ಮಾಡಬಾರದು'
ರಾಮನ ಹೆಸರಲ್ಲಿ ಹಣ ಹೊಡೆಯುವ ಕೆಲಸ ಮಾಡಬಾರದು ಅಂತ ನಾನು ಹೇಳಿದೆ. ರಾಮ ಮಂದಿರಕ್ಕೆ ನನ್ನ ವಿರೋಧ ಇಲ್ಲ. ಕೆಲ ವರ್ಷದ ಹಿಂದೆ ಹಣ ಸಂಗ್ರಹ ಮಾಡೋ ಕೆಲಸ ಆಯ್ತು. ಅದ್ಹೇನಾಯ್ತು? ಮೊದಲು ಇದುವರೆಗೂ ಅದೆಷ್ಟು ಸಂಗ್ರಹ ಆಗಿದೆ ಎಂದು ಲೆಕ್ಕಕೊಡಿ. ರಾಮ ಮಂದಿರ ಕಟ್ಟೋ ಹೆಸರಲ್ಲಿ ಗಲ್ಲಿ-ಗಲ್ಲಿಗಳಲ್ಲಿರೋರೂ ಹಣ ವಸೂಲಿ ಮಾಡ್ತಿದ್ದಾರೆ ಎಂದು ಆರೋಪಿಸಿದರು. 

ನಮ್ಮ ಮನೆಗೂ ಮೂರು ಜನ ಹಣ ಕೇಳೋಕೆ ಬಂದಿದ್ದರು. ಅದರಲ್ಲಿ ಒಂದು ಹೆಣ್ಣು ಮಗಳೂ ಇದ್ದಳು. ಯಾವುದೇ ಸಂಸ್ಥೆ ಹೆಸರೇಳದೆ ನನ್ನ ಬಳಿ ದೇಣಿಗೆ ಕೇಳಿದ್ರು. ಆ ತಂಡದಲ್ಲಿದ್ದ ಒಬ್ಬ ಮಹಿಳೆ ಬೆದರಿಸುವ ರೀತಿಯಲ್ಲಿ ಹಣ ಕೇಳಿದ್ರು. ಹಣ ಸಂಗ್ರಹಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ಯಾ? ಹಣ ಕೇಳೋಕೆ ಬರೋರು ವಿಹಿಂಪ ದವರೇ ಎಂದು ನಮಗೆ ಹೇಗೆ ಗೊತ್ತಾಗುತ್ತೆ. ಅವರ ಬಳಿ ಏನಾದ್ರೂ ದಾಖಲೆ ಇದ್ಯಾ? ಧರ್ಮದ ಹೆಸರಲ್ಲಿ ಭ್ರಷ್ಟಾಚಾರ ಆಗ್ಬಾರ್ದು? ರಾಮನ ಹೆಸ್ರಲ್ಲಿ ಯಾರ್ಯಾರೋ ಹಣ ವಸೂಲಿ ಮಾಡಿಕೊಂಡು ಲಾಭ ಮಾಡಿಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಹೇಳಿದೆ. ಅದು ತಪ್ಪೇ? ಎಂದು ಎಚ್​ಡಿಕೆ ಪ್ರಶ್ನಿಸಿದರು.

ರಾಮ ಮಂದಿರ ದೇಣಿಗೆ ದಂಗಲ್: ಕಿಡಿ ಹೊತ್ತಿಸಿದ ಎಚ್‌ಡಿಕೆಗೆ ಕೇಸರಿ ನಾಯಕರ ತಿರುಗೇಟು

"

'ಮುಕ್ತವಾಗಿ ಚರ್ಚಿಸಲು ಸಿದ್ಧ'
ನಾನು ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ನಾನು ಲಘುವಾಗಿ ಯಾವುದನ್ನ ಹೇಳಿಲ್ಲ. ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ ಅಷ್ಟೇ. ಮುಗ್ಧ ಜನರ ಜೊತೆ ಚೆಲ್ಲಾಟವಾಡ್ತಿದ್ದಾರೆ. ಈ ಬಗ್ಗೆ ಎಲ್ಲಿ ಬೇಕಾದರೂ ಮುಕ್ತವಾಗಿ ಚರ್ಚಿಸಲು ಸಿದ್ಧವಾಗಿದ್ದೇನೆ. ನಮ್ಮ ಪಕ್ಷಕ್ಕೆ ಅನುಕೂಲ ಆಗಲು ಈ ಹೇಳಿಕೆಗಳನ್ನ ನೀಡಿಲ್ಲ. ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ನಾವು ಎಂದೂ ಹೋರಾಟ ಮಾಡಿಲ್ಲ. ನಮ್ಮದು ವಿಷಯಾಧಾರಿತ ಹೋರಾಟ ಎಂದರು.

ದೇಣಿಗೆ ಸಂಗ್ರಹದಲ್ಲಿ ಲೂಟಿ ಆಗ್ತಿದೆ, ಪಾರದರ್ಶಕತೆ ಇಲ್ಲ. ಯಾವುದೇ ಲೈಸೆನ್ಸ್ ಇಲ್ಲದೆ ಯಾರೋ ಹಣ ಸಂಗ್ರಹಿಸ್ತಾರೆ. ಹಿಂದೆ ಹೀಗೆ ದೇಣಿಗೆ ಸಂಗ್ರಹದಲ್ಲಿ ಎಷ್ಟೆಲ್ಲಾ ಮೋಸ ನಡೆದಿದೆ. ಇಷ್ಟೆಲ್ಲಾ ಅನುಭವಕ್ಕೆ ಬಂದ ಮೇಲೂ ಸುಮ್ಮನಿದ್ದರೆ ಸರಿಯಲ್ಲ. ಹೀಗಾಗಿ ಪ್ರಶ್ನೆ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.