*  ಸದನದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಜಟಾಪಟಿ*  ಬಜೆಟ್‌ ಬಗ್ಗೆ ಮಾತಾಡುತ್ತಿದ್ದೀರೋ? ಸಿದ್ದು ವಿರುದ್ಧವೋ?*  ಜೆಡಿಎಸ್‌ ನಾಯಕನಿಗೆ ಕಾಂಗ್ರೆಸಿಗರ ಪ್ರಶ್ನೆ: ಬಿಜೆಪಿ ಆಕ್ಷೇಪ 

ಬೆಂಗಳೂರು(ಮಾ.10): ಜೆಡಿಎಸ್‌(JDS) ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರು ತಮ್ಮ ಮಾತಿನುದ್ದಕ್ಕೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಬಜೆಟ್‌ ಬಗ್ಗೆ ಮಾಡಿದ್ದ ಟೀಕೆಗಳನ್ನು ಉಲ್ಲೇಖಿಸುತ್ತಾ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಮಾತನಾಡಿದ್ದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪಿಸಿದಾಗ ಸದನದಲ್ಲಿ ಬುಧವಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ನಡುವೆ ತೀವ್ರ ವಾಗ್ವಾದ, ಗದ್ದಲ ಏರ್ಪಟ್ಟಿತು.

ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್‌(UT Khader) ಮತ್ತಿತರ ಕಾಂಗ್ರೆಸ್‌(Congress) ಸದಸ್ಯರು ‘ಕುಮಾರಸ್ವಾಮಿ ಅವರೇ, ನೀವು ಬಜೆಟ್‌ ಮೇಲೆ ಚರ್ಚೆ ಮಾಡುತ್ತಿದ್ದೀರೋ ಇಲ್ಲಾ ನಮ್ಮ ನಾಯಕ ಸಿದ್ದರಾಮಯ್ಯ ಅವರ ಭಾಷಣದ ಮೇಲೆ ಚರ್ಚೆ ಮಾಡುತ್ತಿದ್ದೀರೋ?’ ಎಂದು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಕುಮಾರಸ್ವಾಮಿ, ನಿಮ್ಮ ನಾಯಕರು (ಸಿದ್ದರಾಮಯ್ಯ) ಮಾಡಿದ್ದು ಬರೀ ರಾಜಕೀಯ ಭಾಷಣ. ವಾಸ್ತವಾಂಶ ಹೇಳಿದರೆ ನಮ್ಮನ್ನು ಬಿಜೆಪಿ(BJP) ಬಿ ಟೀಂ ಎಂಬಿತ್ಯಾದಿ ಆರೋಪ, ಟೀಕೆ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.

HD Kumaraswamy ಇನ್ಮುಂದೆ ತಾಜ್‌ ವೆಸ್ಟೆಂಡ್‌ಗೆ ಹೋಗಲ್ಲ!

ಆಗ ಕಾಂಗ್ರೆಸ್ಸಿಗರು, ನೀವು ಬಜೆಟ್‌ ಬಗ್ಗೆ ಮಾತನಾಡುವುದು ಬಿಟ್ಟು ಸಿದ್ದರಾಮಯ್ಯ ಅವರನ್ನು ಟೀಕಿಸಿ ಸರ್ಕಾರದ ಪರ ಮಾತನಾಡಿದರೆ ನಿಮ್ಮನ್ನು ‘ಬಿಜೆಪಿ ಬಿ ಟೀಂ ಎನ್ನದೆ ಇನ್ನೇನನ್ನುತ್ತಾರೆ ಎಂದು ಕಿಚಾಯಿಸಿದರು. ಆಗ ಆಡಳಿತ ಪಕ್ಷದವರು ಕುಮಾರಸ್ವಾಮಿ ಅವರ ನೆರವಿಗೆ ನಿಂತರು. ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಕಳೆದ ಎರಡು ದಿನ ನಮ್ಮ ಸರ್ಕಾರದ ಬಜೆಟ್‌(Budget) ಮೇಲೆ ಮಾತನಾಡಿದರೋ, ಇಲ್ಲಾ ಹಿಂದಿನ ತಮ್ಮದೇ ಸರ್ಕಾರದ ಬಜೆಟ್‌ ಬಗ್ಗೆ ಮಾತನಾಡಿದರೋ ಅರ್ಥವಾಗಲಿಲ್ಲ. ಎಲ್ಲರಿಗೂ ಅವರ ಅಭಿಪ್ರಾಯ ತಿಳಿಸಲು ಹಕ್ಕಿದೆ. ನೀವು ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಬಗ್ಗೆ ಮಾತನಾಡುತ್ತೀರಿ, ಪಾಪ ಈಗ ಕುಮಾರಸ್ವಾಮಿ ಅವರು ಈ ಸದನದ ಸದಸ್ಯರ ಬಗ್ಗೆ ಮಾತನಾಡಿದರೆ ಯಾಕೆ ಅಡ್ಡಿಪಡಿಸುತ್ತೀರಿ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಕೂಡ ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಂಡು, ಸಿದ್ದರಾಮಯ್ಯ 13 ಬಜೆಟ್‌ ಮಂಡಿಸಿದ ಅನುಭವಿ. ಅವರು ಬಜೆಟ್‌ ಮೇಲೆ ಮಾತನಾಡುವಾಗ ಕೆಲ ವಿಚಾರಗಳನ್ನು ಹೇಳಿದ್ದಾರೆ. ಆದರೆ, ಅವರು ನಮ್ಮ ಬಜೆಟ್‌ ಮೇಲೆ ಮಾತನಾಡಿದ್ದಕ್ಕಿಂತ ತಮ್ಮ ಸರ್ಕಾರದ ಬಜೆಟ್‌ ಬಗ್ಗೆ ಮಾತನಾಡಿದ್ದೇ ಹೆಚ್ಚು. ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಅದೆಲ್ಲದಕ್ಕೂ ಸಮರ್ಥವಾಗಿ ಉತ್ತರ ಕೊಡುತ್ತೇನೆ. ಕುಮಾರಸ್ವಾಮಿ ಅವರಿಗೂ ಮಾತನಾಡುವ ಹಕ್ಕಿದೆ. ಮಾತನಾಡಲಿ ಬಿಡಿ. ಎಲ್ಲವೂ ಚರ್ಚೆ ಆಗಲಿ. ನಾವೂ ಉತ್ತರ ಕೊಡಲು ಸಿದ್ಧ ಎಂದು ಹೇಳಿ ತೆರೆ ಎಳೆದರು.

ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ಸಾಧ್ಯತೆ

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿರುವ (Budget 2022) ಅಂಶಗಳನ್ನು ಗಮನಿಸಿದರೆ ರಾಜ್ಯ ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಗಳು ಗೋಚರವಾಗಿವೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದರು.

ಮೇಕೆದಾಟು ಯೋಜನೆಗೆ ಕೇಂದ್ರದಿಂದಲೇ 'ವಿವಾದ' ಪದ ಬಳಕೆ, ಕುಮಾರಸ್ವಾಮಿ ಆಕ್ರೋಶ

ಮಾ.6 ರಂದು ಕಲಬುರಗಿಯಲ್ಲಿ (Kalaburagi) ಸುದ್ದಿಗಾರರೊಂದಿಗೆ ಮಾನಾಡಿದ್ದ ಅವರು, ಬಜೆಟ್‌ನಲ್ಲಿ ಗಟ್ಟಿಅಂಶಗಳು ಯಾವುವೂ ಇಲ್ಲ. ಎಲ್ಲವೂ ಜನಪ್ರೀಯತೆಯ ಹಿನ್ನೆಲೆಯಲ್ಲಿಯೇ ಇವೆ. ಹೀಗಾಗಿ ಇದು ಚುನಾವಣೆಯ ಬಜೆಟ್‌ ಎಂಬಂತಾಗಿದೆ ಎಂದ ಅವರು, ಅವಧಿಗೂ ಮುನ್ನ ಅಥವಾ ಅವಧಿಪೂರ್ಣ ಯಾವುದೇ ರೀತಿಯಲ್ಲಿ ಚುನಾವಣೆ ಬಂದರೂ ಜೆಡಿಎಸ್‌ ಎದುರಿಸಲು ಸಿದ್ಧ ಎಂದು ತಿಳಿಸಿದ್ದರು. 

ಬೊಮ್ಮಾಯಿಯವರು ತಾವೇ ನೀರಾವರಿ ತಜ್ಞರೆಂದು ಹೇಳಿಕೊಂಡವರು, ಬಜೆಟ್‌ನಲ್ಲಿ ನೀರಾವರಿ ವಿಚಾರ ಗಮಸಿದರೆ ನೀರಾವರಿ ಹೆಸರಲ್ಲಿ ರಾಜ್ಯದ ಜನತೆಗೆ ಮೂರು ನಾಮ ಹಾಕಲು ಸಿದ್ಧವಾಗಿದ್ದಾರೆಂದು ಲೇವಡಿ ಮಾಡಿದರು. ಯುವಕರಿಗೆ ಉದ್ಯೋಗ ಕೊಡುವ ದಿಶೆಯಲ್ಲಿಯೂ ಬಜೆಟ್‌ನಲ್ಲಿ ಹೊಸತು ಯಾವುದೂ ಇಲ್ಲ, ಬಜೆಟ್‌ ರಾಜ್ಯದ ಪ್ರಗತಿಗೆ ಒದಗದೆ ಚುನಾವಣೆ ಲಕ್ಷದಲ್ಲಿಟ್ಟೇ ಸಿದ್ಧಪಡಿಸಿದಂತಿದೆ ಎಂದರು. ಜೆಡಿಎಸ್‌ (JDS) ಯಾವುದೇ ಪಕ್ಷಗಳಿಗೆ ಹತ್ತಿರವಾಗಿಲ್ಲ, ಬಿಜೆಪಿ (BJP) ಹಾಗೂ ಕಾಂಗ್ರೆಸ್‌ (Congress) ಜೊತೆ ಹೋಗಿ ಅನಭವವಾಗಿದೆ. ನಮಗೆ ಇವೆರಡೂ ಬೇಡ. ನಾವೀಗ ನೇರವಾಗಿ ಹೋಗೋಣವೆಂದು ಸಿದ್ಧರಾಗಿದ್ದೇವೆಂದರು.