HD Kumaraswamy ಇನ್ಮುಂದೆ ತಾಜ್ ವೆಸ್ಟೆಂಡ್‌ಗೆ ಹೋಗಲ್ಲ!
- ಕೇತಗಾನಹಳ್ಳಿಯೇ ನನ್ನ ಕರ್ಮಭೂಮಿ: ಎಚ್‌ಡಿಕೆ
- ‘ಕೆಲಸವಿದ್ದರೆ ಮಾತ್ರ ಬೆಂಗಳೂರಿಗೆ ಬರುತ್ತೇನೆ’
- ರಾಜ್ಯ ಸಾಲದಲ್ಲಿ ಸಿಲುಕಲು ಕೇಂದ್ರ ಕಾರಣ
ಬೆಂಗಳೂರು (ಮಾ.9) ನನ್ನ ವಾಸ್ತವ್ಯ ಏನಿದ್ದರೂ ಕೇತಗಾನಹಳ್ಳಿಯಲ್ಲಿರುವ (Kethaganahalli) ನನ್ನ ಜಮೀನಿನಲ್ಲಿ. ಅದೇ ನನ್ನ ಕರ್ಮಭೂಮಿ. ಇನ್ಮುಂದೆ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ (Taj West End Hotel) ಹೋಗುವುದಿಲ್ಲ. ಕೆಲಸವಿದ್ದರೆ ಮಾತ್ರ ಬೆಂಗಳೂರಿಗೆ ಬರುತ್ತೇನೆ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (JDS Leader HD Kumaraswamy ) ಹೇಳಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಇವರೇನು ರೈತರ ಮಕ್ಕಳಾ, ಮಣ್ಣಿನ ಮಕ್ಕಳಾ ಎಂದು ಕೇಳ್ತಾರೆ. ರಾಜಕಾರಣಕ್ಕೆ (Politics) ಬರುವ ಮೊದಲೇ 1984-85ರಲ್ಲಿ 4.5 ಲಕ್ಷ ರು. ಕೊಟ್ಟು ಜಮೀನು ಖರೀದಿಸಿದ್ದೆ. ಒಂದೇ ವರ್ಷದಲ್ಲಿ 4.30 ಲಕ್ಷ ಮೌಲ್ಯದ ಬಾಳೆ ಬೆಳೆದು ಹಾಪ್‌ಕಾಮ್ಸ್‌ಗೆ ಹಾಕಿ ಚೆಕ್ ಮೂಲಕ ಹಣ ಪಡೆದಿದ್ದೇನೆ. ಈಗ ಅದೇ ಜಮೀನಿನಲ್ಲಿ ವಾಸ ಮಾಡುತ್ತಿದ್ದೇನೆ. ಈಗ ವೆಸ್ಟೆಂಡ್ ಹೋಟೆಲ್‌ನಲ್ಲಿಲ್ಲ, ಮುಂದಕ್ಕೂ ಇರುವುದಿಲ್ಲ. ಇನ್ನೇನಿದ್ದರೂ ನನ್ನ ವಾಸ್ತವ್ಯ ಜಮೀನಿನಲ್ಲಿಯೇ ಎಂದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (law minister jc madhuswamy), ತಾಜ್ ವೆಸ್ಟೆಂಡ್‌ನಲ್ಲಿ ರೈತರ ಮಕ್ಕಳಿಗೆ ಶೇ.10 ರಿಯಾಯಿತಿ ಕೊಡಿಸಿ ಎಂದಿದ್ದು ಸಭೆಯನ್ನು ನಗೆಗಡಲಲ್ಲಿ ತೇಲಿಸಿತು. ಅಲ್ಲಿ ನನಗೂ ಕನ್ಸಿಷನ್ ಕೊಟ್ಟಿಲ್ಲ. ನನ್ನದೊಬ್ಬನದೇ ಪ್ರಚಾರ ಬಂದಿದ್ದು. ನಾನು ಮಾತ್ರವಲ್ಲ, ಬೇರೆಯವರೂ ಹೋಗ್ತಾರೆ. ಆದರೆ ನಿಮಗೆ ಅಭ್ಯಾಸ ಇಲ್ಲವೇನೋ...ನೀವು ಇಲ್ಲಿ ಬಿಟ್ಟರೆ ಸೀದಾ ಚಿಕ್ಕನಾಯಕನಹಳ್ಳಿಗೇನೋ ಹೋಗೋದು ಎಂದು ಹೇಳಿದರು. ಆ ಭೂಮಿಯ ಮೇಲೆ ಸುಮ್ಮನೆ ಕೇಸು ಹಾಕಿದರು. 25 ವರ್ಷ ಸತಾಯಿಸಿದರು. ಒಂದೊಮ್ಮೆ ನಾನು ಆ ಭೂಮಿಯನ್ನು ದಾನ ಮಾಡೋಣ ಅಂತಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸಾಲದಲ್ಲಿ ಸಿಲುಕಲು ಕೇಂದ್ರ ಕಾರಣ: ಎಚ್‌ಡಿಕೆ
ಬೆಂಗಳೂರು: ರಾಜ್ಯದ ಒಟ್ಟು ಸಾಲ ಈ ವರ್ಷ 5.18 ಲಕ್ಷ ಕೋಟಿ ರು.ಗೆ ಏರಿಕೆಯಾಗಲಿದೆ ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ತಿಳಿಸಿದ್ದಾರೆ. ರಾಜ್ಯವು ಸಾಲದ ಸುಳಿಗೆ ಸಿಲುಕಲು ಕೇಂದ್ರ ಸರ್ಕಾರ ಕಾರಣ. ರಾಜ್ಯದಲ್ಲಿ ಸಂಪನ್ಮೂಲಗಳಿಗೆ ಕೊರತೆಯಾಗಿಲ್ಲ. ಆದರೆ ರಾಜ್ಯಕ್ಕೆ ಅನುದಾನ, ತೆರಿಗೆ ಪಾಲು, ಪರಿಹಾರವನ್ನು ಕಡಿತಗೊಳಿಸಿರುವುದರಿಂದ ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬುಧವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘ನಮ್ಮ ರಾಜ್ಯದಿಂದ ಸಂಗ್ರಹವಾಗುವ ತೆರಿಗೆಯನ್ನು ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ನಮ್ಮ ರಾಜ್ಯ ಆರ್ಥಿಕ ಶಿಸ್ತು ಕಾಪಾಡಿರುವುದು, ನಮ್ಮ ಜನರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುವುದೇ ತಪ್ಪೇ?’ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಕೊರೋನಾ, ಪ್ರವಾಹದಿಂದಾಗಿ ಆರ್ಥಿಕವಾಗಿ ಸವಾಲು ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಇದೇ ಪರಿಸ್ಥಿತಿಯನ್ನು ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಎದುರಿಸಿದ್ದೇನೆ. ಸಾಲವು ಕಳೆದ ಮೂರು ವರ್ಷದಲ್ಲಿ ಹೆಚ್ಚಾಗಿಲ್ಲ. 2013-14ರಿಂದಲೂ ಹಂತ-ಹಂತವಾಗಿ ಹೆಚ್ಚಾಗುತ್ತಾ ಬಂದಿದೆ ಎಂದರು.
HD Kumaraswamy: ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ಸಾಧ್ಯತೆ
ಪ್ರಸ್ತುತ 4.52 ಲಕ್ಷ ಕೋಟಿ ರು. ಸಾಲದ ಹೊರೆ ರಾಜ್ಯದ ಮೇಲಿದ್ದು, 2022-23ರ ಅಂತ್ಯಕ್ಕೆ 5.18 ಲಕ್ಷ ಕೋಟಿ ರು. ಆಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದಕ್ಕೆ ಕೇಂದ್ರದಿಂದ ಅನುದಾನ ಕಡಿಮೆಯಾಗಿದ್ದು, ಜಿಎಸ್‌ಟಿ ಪಾಲು, ಪರಿಹಾರ ಕಡಿಮೆಯಾಗಿದ್ದು ಕಾರಣ. 15ನೇ ಹಣಕಾಸು ಆಯೋಗವು 5 ಸಾವಿರ ಕೋಟಿ ರು. ಪರಿಹಾರವನ್ನು ರಾಜ್ಯಕ್ಕೆ ನೀಡುವಂತೆ ಶಿಫಾರಸು ಮಾಡಿದ್ದರೂ ಕೇಂದ್ರವು ನೀಡಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು.
ಮೇಕೆದಾಟು ಯೋಜನೆಗೆ ಕೇಂದ್ರದಿಂದಲೇ 'ವಿವಾದ' ಪದ ಬಳಕೆ, ಕುಮಾರಸ್ವಾಮಿ ಆಕ್ರೋಶ
ನಮ್ಮ ರಾಜ್ಯದಲ್ಲಿ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಪ್ರತಿ ವರ್ಷ 3 ಲಕ್ಷ ಕೋಟಿ ರು. ತೆರಿಗೆಯನ್ನು ಕೇಂದ್ರ ಸಂಗ್ರಹಿಸುತ್ತಿದೆ. ಆದರೆ 100 ರು. ತೆರಿಗೆ ಸಂಗ್ರಹಿಸಿದರೆ ಎಲ್ಲಾ ರೂಪದಲ್ಲೂ 40 ರು. ಮಾತ್ರ ವಾಪಸು ನೀಡುತ್ತದೆ. ಆದರೆ, ರಾಜಸ್ಥಾನ, ಗುಜರಾತ್‌ಗಳಿಗೆ ಸಂಗ್ರಹವಾಗುವುದಕ್ಕಿಂತ ಹೆಚ್ಚು ಅನುದಾನ ನೀಡುತ್ತದೆ. ಉತ್ತರ ಪ್ರದೇಶ ರಾಜ್ಯಕ್ಕಂತೂ 100 ರು. ತೆರಿಗೆ ಸಂಗ್ರಹವಾದರೆ 250 ರು. ಅನುದಾನ ನೀಡುತ್ತಿದೆ ಎಂದು ಆಕ್ಷೇಪಿಸಿದರು.