Asianet Suvarna News Asianet Suvarna News

ಎಚ್‌ಡಿಕೆ, ಅಶೋಕ್‌, ವಿಜಯೇಂದ್ರ ಜಂಟಿ ಸಮರತಂತ್ರ ಶುರು..!

ಸರ್ಕಾರದ ವಿರುದ್ಧ ಯಾವೆಲ್ಲಾ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಬೇಕು ಮತ್ತು ಹೋರಾಟದ ರೂಪುರೇಷೆ ಹೇಗಿರಬೇಕು ಎಂಬುದರ ಕುರಿತು ಮಾತುಕತೆ ನಡೆಸಲಾಗಿದೆ. ಈ ಮೂಲಕ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಪ್ರತಿಪಕ್ಷಗಳು ಸಜ್ಜಾಗಿವೆ. 

HD Kumaraswamy R Ashok and BY Vijayendra Joint Strategy Starts in Karnataka grg
Author
First Published Dec 2, 2023, 4:06 AM IST

ಬೆಂಗಳೂರು(ಡಿ.02):  ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವನ್ನು ಕಟ್ಟಿ ಹಾಕುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್‌ ಮಹತ್ವದ ಸಭೆ ನಡೆಸಿದ್ದು, ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳು, ಜನ ವಿರೋಧಿ ನೀತಿಗಳ ವಿರುದ್ಧ ಜಂಟಿಯಾಗಿ ಹೋರಾಟ ನಡೆಸಲು ತೀರ್ಮಾನಿಸಿವೆ.

ಶುಕ್ರವಾರ ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರ ನಿವಾಸದಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್‌.ಅಶೋಕ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಉಭಯ ಪಕ್ಷಗಳ ಇತರೆ ನಾಯಕರು ಭಾಗವಹಿಸಿದ್ದರು.

ರೈತರು ಬದುಕಿದ್ದಾಗ ಪರಿಹಾರ ನೀಡಿ: ಸ್ವಾಮೀಜಿಗಳೊಂದಿಗೆ ಬರ ಅಧ್ಯಯನ ಮಾಡಿದ ಜೆಡಿಎಸ್

ಸರ್ಕಾರದ ವಿರುದ್ಧ ಯಾವೆಲ್ಲಾ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಬೇಕು ಮತ್ತು ಹೋರಾಟದ ರೂಪುರೇಷೆ ಹೇಗಿರಬೇಕು ಎಂಬುದರ ಕುರಿತು ಮಾತುಕತೆ ನಡೆಸಲಾಗಿದೆ. ಈ ಮೂಲಕ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಪ್ರತಿಪಕ್ಷಗಳು ಸಜ್ಜಾಗಿವೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೈಫಲ್ಯ, ಬರ ನಿರ್ವಹಣೆಯಲ್ಲಿ ವಿಫಲವಾಗಿರುವುದು, ಗುತ್ತಿಗೆದಾರರಿಂದ ಕಮೀಷನ್ ಪಡೆಯುತ್ತಿರುವ ಆರೋಪ, ಗುತ್ತಿಗೆದಾರರ ಆತ್ಮಹತ್ಯೆ- ಸಾವು ಪ್ರಕರಣಗಳು, ಶಾಸಕರಿಗೆ ಅನುದಾನ ಬಿಡುಗಡೆ ಮಾಡದಿರುವುದು, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದಿರುವುದು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರ ವಿರುದ್ಧ ಸದನದಲ್ಲಿ ಹೋರಾಟ ನಡೆಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿದು ಗೌರವ ಕೊಡುವಂತೆ ಮಾಡಿದ್ದೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ಕುರಿತು ಸದನದಲ್ಲಿ ಪ್ರಸ್ತಾಪಿಸಿ ಕ್ಷಮೆಯಾಚನೆಗೆ ಪಟ್ಟುಹಿಡಿಯುವ ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟಾರೆ ಈ ಬಾರಿಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಅದಕ್ಕಾಗಿ ಒಟ್ಟಾಗಿ ಹೋರಾಟ ಮಾಡಬೇಕು. ವಿಷಯಗಳ ಮೇಲಿನ ಚರ್ಚೆಯ ವೇಳೆ ಪರಸ್ಪರ ಸಹಕಾರ ಕೊಟ್ಟು ಸರ್ಕಾರದ ವಿರುದ್ಧ ನಿಲ್ಲಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸಲಾಯಿತು ಎಂದು ಹೇಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸದನದಲ್ಲಿನ ಹೋರಾಟದ ಬಗ್ಗೆ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಯಾವ ರೀತಿಯ ಹೋರಾಟ ಎಂಬುದನ್ನು ಮುಂದೆ ಹೇಳುತ್ತೇವೆ. ಈ ಸರ್ಕಾರ ಬಂದ ನಂತರ ಜನತೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿದ್ದು, ಕಾನೂನಿನ ವ್ಯವಸ್ಥೆ ಹದಗೆಟ್ಟಿದೆ ಎಂದರು. ಆದರೆ, ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡದೆ ತೆರಳಿದರು. ಈ ವೇಳೆ ಆರ್‌.ಅಶೋಕ್‌ ಅವರು ಎಚ್‌.ಡಿ.ಕುಮಾರಸ್ವಾಮಿ ಅವರ ಕಾರ್‌ನಲ್ಲಿ ತೆರಳಿದ್ದು ವಿಶೇಷವಾಗಿತ್ತು.

ಈ ಸರ್ಕಾರದಲ್ಲಿ ಹೆದರುವ ಪರಿಸ್ಥಿತಿ

ಈ ಸರ್ಕಾರ ಬಂದ ನಂತರ ಜನತೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಕಾನೂನಿನ ವ್ಯವಸ್ಥೆ ಹದಗೆಟ್ಟಿದೆ. ಇದರ ವಿರುದ್ಧ ಸದನದಲ್ಲಿ ಹೋರಾಡುತ್ತೇವೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

'ಸಿಎಂ ಇಬ್ರಾಹಿಂಗೂ ಹಣ ಕೊಟ್ಟಿದ್ದೆ'; ಎಚ್‌ಡಿಕೆ ಹಣ ಪಡೆದಿದ್ದಾರೆ ಎಂಬ ಇಬ್ರಾಹಿಂ ಆರೋಪಕ್ಕೆ ಶರವಣ ತಿರುಗೇಟು!

ಯಾವ್ಯಾವ ವಿಷಯ ಮುಂದಿಟ್ಟು ಹೋರಾಟ?

- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೈಫಲ್ಯ
- ಬರ ನಿರ್ವಹಣೆ ವೈಫಲ್ಯ

ಗುತ್ತಿಗೆದಾರರಿಂದ ಕಮೀಷನ್ ಪಡೆಯುತ್ತಿರುವ ಆರೋಪ
ಗುತ್ತಿಗೆದಾರರ ಆತ್ಮಹತ್ಯೆ, ಸಾವು ಪ್ರಕರಣಗಳು
ಶಾಸಕರಿಗೆ ಅನುದಾನ ಬಿಡುಗಡೆ ಮಾಡದಿರುವುದು
ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದಿರುವುದು

Follow Us:
Download App:
  • android
  • ios