Schools Syllabus ಭಗವದ್ಗೀತೆಯನ್ನು ಪಾಠಮಾಡಿದರೆ ಮಕ್ಕಳ ಹೊಟ್ಟೆತುಂಬುತ್ತದೆಯೇ, ಬಿಜೆಪಿಗೆ ಹೆಚ್‌ಡಿಕೆ ಪ್ರಶ್ನೆ!
- ಇಂತಹ ವಿಚಾರಗಳನ್ನು ದೊಡ್ಡದು ಮಾಡುವುದನ್ನು ಬಿಡಲಿ
- ಭಾವನಾತ್ಮಕ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ರಾಜಕಾರಣ
- ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ಚನ್ನಪಟ್ಟಣ(ಮಾ.20): ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್(BJP Congress) ಪಕ್ಷಗಳು ಮತಸೆಳೆಯಲು ಮುಂದಾಗಿವೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನತೆಯೇ ತಕ್ಕ ಪಾಠಕಲಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅಭಿಪ್ರಾಯಪಟ್ಟರು. ತಾಲೂಕಿನ ಕದರಮಂಗಲ ಗ್ರಾಮದ ಕಂಬದ ನರಸಿಂಹಸ್ವಾಮಿ ಬೆಟ್ಟದಲ್ಲಿ ನಡೆದ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿ, ಭಗವದ್ಗೀತೆಯನ್ನು(bhagavad gita) ಪಾಠಮಾಡಿದರೆ ಮಕ್ಕಳ ಹೊಟ್ಟೆತುಂಬುತ್ತದೆಯೇ, ಸರ್ಕಾರ ಇಂತಹ ವಿಚಾರಗಳನ್ನು ದೊಡ್ಡದು ಮಾಡುವುದನ್ನು ಬಿಟ್ಟಿ, ತಮ್ಮ ಮುಂದಿರುವ ಟನ್‌ಗಟ್ಟಲೆ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಲಿ ಎಂದು ಸಲಹೆ ನೀಡಿದರು.
ಬಿಜೆಪಿಯ ರಾಜ್ಯ - ಕೇಂದ್ರ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ, ಅದನ್ನ ಬಗೆಹರಿಸುವುದು ಅವರಿಗೆ ಬೇಕಿಲ್ಲ.ದೇಶದಲ್ಲಿ ಭಾವನಾತ್ಮಕವಾಗಿ ವಿಚಾರಗಳು ನಡೆಯುತ್ತಿವೆ. ಅಧಿಕಾರಕ್ಕಾಗಿ ಅಮಾಯಕರನ್ನು ಭಾವನಾತ್ಮಕವಾಗಿ ದಾರಿತಪ್ಪಿಸುತ್ತಿದ್ದಾರೆ. ಜನ ಸತ್ತರೇನು, ಹಸಿವಾದರೇನು, ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲದಿದ್ದರೇನು ಅದ್ಯಾವುದು ಚಿಂತೆ ಇಲ್ಲ.ನಿಜವಾದ ಸಮಸ್ಯೆ ಬಿಟ್ಟು, ಇಂತಹ ವಿಚಾರಗಳು ದೊಡ್ಡ ಪ್ರಚಾರ ಆಗ್ತಿದೆ. ಯಾವುದೂ ಶಾಶ್ವತ ಅಲ್ಲ ಇದೆಲ್ಲಕ್ಕೂ ಒಂದು ಅಂತಿಮ ಪರಿಹಾರ ಇರುತ್ತದೆ. ರಾಜಮಹಾರಾಜರ ಕಾಲದಿಂದ ನೋಡಿದ್ದೇವೆ. ಅವುಗಳು ಉಳಿದವಾ, ಎಲ್ಲವೂ ನಶಿಸಿಹೋಗಿದೆ. ಇದಕ್ಕೂ ಒಂದು ಅಂತ್ಯವಿದೆ ಅಲ್ಲಿಯವರೆಗೆ ಕಾಯಬೇಕು ಎಂದರು.
ಭಗವದ್ಗೀತೆ ಒಂದು ಧರ್ಮದ ಗ್ರಂಥವಲ್ಲ, ಎಲ್ಲರೂ ಓದಬೇಕಾದ ಪುಸ್ತಕ: ಪ್ರತಾಪ್ ಸಿಂಹ
ಹೆಚ್ಚಿನ ಪರಿಹಾರಕ್ಕೆ ಒತ್ತಾಯ:
ರಾಜ್ಯದ ಅತಿ ಹೆಚ್ಚು ಬರಪೀಡಿತ ಪ್ರದೇಶ ಎನಿಸಿರುವ ಪಾವಗಡ ಬಸ್‌ದುರಂತದಲ್ಲಿ ಸಾವಿಗೀಡಾಗಿರುವವರು ಹಾಗೂ ಗಾಯಗೊಂಡಿರುವವರೆಲ್ಲರೂ ಕೂಲಿಕಾರ್ಮಿಕರಾಗಿದ್ದು, ಇವರಿಗೆ ಸರ್ಕಾರದಿಂದ ಎಲ್ಲಾರೀತಿಯ ಸಹಕಾರ ನೀಡುವ ಜೊತೆಗೆ ಹೆಚ್ಚಿನ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ ಎಚ್‌ಡಿಕೆ, ಸರ್ಕಾರ ಈ ಘಟನೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ತನಿಖೆಗೆ ಆದೇಶಿಸ ಬೇಕು ಎಂದು ಒತ್ತಾಯಿಸಿದರು.
ಪಾವಗಡ ಅಪಘಾತದಲ್ಲಿ ವಿದ್ಯಾರ್ಥಿಗಳು ಸಾವಿಗೀಡಾಗಿರುವುದು ವಿಷಾದನೀಯ. ಮೆಕಾನಿಕಲ್ ಸಮಸ್ಯೆ ಸೇರಿದಂತೆ ಯಾವ ಕಾರಣಕ್ಕೆ ಅಪಘಾತ ಸಂಭವಿಸಿದೆ ಎಂಬಬಗ್ಗೆ ಮಾಹಿತಿ ಪಡೆಯಲು ಉನ್ನತಮಟ್ಟದ ತನಿಖೆಗೆ ಆದೇಶಿಸ ಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರಿ ಸಾರಿಗೆ ವ್ಯವಸ್ಥೆ ಸರಿಇಲ್ಲದೇ ಇರುವುದು ಇಂದು ನಡೆದಿರುವ ಸಾವುನೋವುಗಳಿಗೆ ಕಾರಣವಾಗಿದ್ದು, ಸರಿಯಾದ ಸಾರಿಗೆ ವ್ಯವಸ್ಥೆ ಇದ್ದರೆ. ವಿದ್ಯಾರ್ಥಿಗಳು ಮತ್ತು ಜನರು ಸಿಕ್ಕ ಸಿಕ್ಕ ಬಸ್‌ಹತ್ತಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲ ಎಂದರು.
'ಭಗವದ್ಗೀತೆಯಲ್ಲಿ ಇನ್ನೊಬ್ಬರ ಕೈ ಕಡೀರಿ, ಕಾಲು ತೆಗೀರಿ ಅಂತಾ ಹೇಳಿಲ್ಲ'
ಕೆಟ್ಟಪರಿಸ್ಥಿತಿಯಲ್ಲಿ ಸಾರಿಗೆ ಇಲಾಖೆ:
ಕೋವಿಡ್ ಬಳಿಕ ಸಾರಿಗೆ ಇಲಾಖೆ ಕೆಟ್ಟಪರಿಸ್ಥಿತಿ ಎದುರಿಸುತ್ತಿದೆ. 2006 ರಲ್ಲಿ ನಾನು ಸಿಎಂ ಆಗಿದ್ದಾಗ ಸಾರಿಗೆ ಇಲಾಖೆ ಲಾಭದಲ್ಲಿತ್ತು. 10 ವರ್ಷದಲ್ಲಿ ಏನೇನಾಯ್ತು ಎಂದು ನಾನು ಚರ್ಚಿಸಲು ಹೋಗುವುದಿಲ್ಲ. ಸಾರಿಗೆ ನೌಕರರು, ಹಾಗೂ ಪ್ರಯಾಣಿಕರಿಗೆ ಕೆಟ್ಟಪರಿಸ್ಥಿತಿ ಎದುರಿಸುತ್ತಿದ್ದಾರೆ. ಯಾರೋ ಪ್ರತಿಭಟನೆ ಮಾಡಿಸಿ ಸಾರಿಗೆ ನೌಕರರನ್ನ ಬೀದಿಪಾಲ ಮಾಡಿದರು. ಸಾರಿಗೆ ನೌಕರರು ಇದೀಗ ಕಣ್ಣೀರು ಹಾಕುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಕುಮಾರಸ್ವಾಮಿ, ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಕೊಡುವುದು ಬೇಡ, ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಸರ್ಕಾರ ಕ್ರಮಕೈಗೊಳ್ಳ ಬೇಕು ಎಂದು ಸಲಹೆ ನೀಡಿದ ಅವರು, ಉಡುಪಿ ಮತ್ತು ಬಳ್ಳಾರಿಯಲ್ಲಿ ಆಕ್ಸಿಜನ್ ಪ್ಲಾಂಟ್‌ನಲ್ಲಿ ಅವಘಡ ಸಂಭವಿಸಿದೆ. ಈ ಬಗ್ಗೆಯೂ ಸರ್ಕಾರ ಗಮನಹರಿಸ ಬೇಕು ಎಂದು ಒತ್ತಾಯಿಸಿದರು.
ಚನ್ನಪಟ್ಟಣದ ಕದರಮಂಗಲ ಕಂಬದ ನರಸಿಂಹ ಸ್ವಾಮಿ ಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡು ದೇವರಿಗೆ ಪೂಜೆಸಲ್ಲಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಅವರ ಬಳಿ ಕುಂದುಕೊರತೆಯನ್ನು ತೋಡಿಕೊಂಡರು.