ರಾಜ್ಯದ 5 ಮಂದಿಗೆ ಮಂತ್ರಿಗಿರಿ; ಕುಮಾರಣ್ಣ, ಸೋಮಣ್ಣ, ಜೋಶಿ ಮತ್ತು ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಚಿವ ಸಂಪುಟಕ್ಕೆ ರಾಜ್ಯದ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ವಿ. ಸೋಮಣ್ಣ ಸೇರ್ಪಡೆ ಆಗಲಿದ್ದಾರೆ.
ಬೆಂಗಳೂರು (ಜೂ.09): ಲೋಕಸಭಾ ಚುನಾವಣೆಯ ಬೆನ್ನಲ್ಲಿಯೇ ಎನ್‌ಡಿಎ ಮೈತ್ರಿಕೂಟದ ನೇತೃತ್ವದಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಪದಗ್ರಹಣ ಸ್ವೀಕಾರ ಮಾಡಲಿದ್ದಾರೆ. ರಾಜ್ಯದ ಐವರಿಗೆ ಸಂಸದರಿಗೆ ಸಚಿವ ಸ್ಥಾನ ಸಿಗಲಿದೆ. ಅದರಲ್ಲಿ ನಿರ್ಮಲಾ ಸೀತಾರಾಮನ್, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಶಿ ಅವರು ಕ್ಯಾಬಿನೆಟ್ ದರ್ಜೆಯ ಸಚಿವರಾಗಲಿದ್ದಾರೆ. ಉಳಿದಂತೆ ಶೋಭಾ ಕರಂದ್ಲಾಜೆ ಹಾಗೂ ವಿ. ಸೋಮಣ್ಣ ಅವರನ್ನು ರಾಜ್ಯ ಖಾತೆ ಸಚಿವ ಸ್ಥಾನ ನೀಡಲಾಗುವುದು ಎಂದು ತಿಳಿದುಬಂದಿದೆ.
ರಾಜ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 17 ಹಾಗೂ ಜೆಡಿಎಸ್ 2 ಸೇರಿ ಒಟ್ಟು 19 ಮಂದಿ ಗೆದ್ದು ಸಂಸದರಾಗಿ ಲೋಕಸಭೆಗೆ ಪ್ರವೇಶ ಮಾಡಿದ್ದಾರೆ. ಅದರಲ್ಲಿ ಮಂತ್ರಿಗಿರಿ ಹಂಚಿಕೆಯಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಹೋದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಮಂತ್ರಗಿರಿ ಸ್ಥಾನ ನೀಡಲಾಗುತ್ತಿದೆ. ಉಳಿದಂತೆ ಕಳೆದೆರಡು ಬಾರಿ ಕೇಂದ್ರ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಲಾಗುತ್ತಿದೆ.
ಮೋದಿ ಪ್ರಧಾನಮಂತ್ರಿ ಪದಗ್ರಹಣಕ್ಕೆ ಕೌಂಟ್‌ಡೌನ್; ಮಂತ್ರಿಗಿರಿಗಾಗಿ ರಾಜ್ಯದ ನಾಲ್ವರು ಸೇರಿ 43 ಮಂದಿಗೆ ಕರೆ
ಸಮುದಾಯವಾರು ಸಚಿವಸ್ಥಾನ ಹಂಚಿಕೆ:
ರಾಜ್ಯದಿಂದ ಸಂಸತ್ತಿಗೆ ಆಯ್ಕೆಯಾದ ಎನ್‌ಡಿಎ ಮೈತ್ರಕೂಟದ 19 ಜನರ ಪೈಕಿ ನಾಲ್ವರಿಗೆ ಮಂತ್ರಿಗಿರಿ ಸ್ಥಾನ ನೀಡಲಾಗುತ್ತಿದೆ. ಬಿಜೆಪಿಯ ಸಂಸದರ ಪೈಕಿ ಒಕ್ಕಲಿಗ ಸಮುದಾಯದಲ್ಲಿ ಶೋಭಾ ಕರಂದ್ಲಾಜೆ, ಬ್ರಾಹ್ಮಣ ಸಮುದಾಯದಲ್ಲಿ ಪ್ರಹ್ಲಾದ್ ಜೋಶಿ, ಲಿಂಗಾಯತ ಸಮುದಾಯದಲ್ಲಿ ವಿ. ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಳಿದಂತೆ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿ ಎನ್‌ಡಿಎ ಮೈತ್ರಿಕೂಟ ಸೇರ್ಪಡೆಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ (ಒಕ್ಕಲಿಗ ಸಮುದಾಯ) ನೀಡಲಾಗಿದೆ. ಉಳಿದಂತೆ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗುತ್ತದೆ.
ಮೋದಿ 3.O ಸಂಪುಟದಲ್ಲಿ ಅಣ್ಣಾಮಲೈ? ಸಿಂಗಂಗೆ ಸಿಗುವ ಖಾತೆ ಯಾವುದು?
ಸಚಿವಸ್ಥಾನ ನಿರೀಕ್ಷೆ ಇಟ್ಟುಕೊಂಡವರು: ಇನ್ನು ರಾಜ್ಯದಿಂದ ಆಯ್ಕೆಯಾದ 17 ಬಿಜೆಪಿ ಸಂಸದರ ಪೈಕಿ ಇನ್ನೂ ಹಲವರು ತಾವು ಕೇಂದ್ರ ಸಚಿವರಾಗುತ್ತೇವೆ ಎಂಬ ವಿಶ್ವಾಸ ಹೊಂದಿದ್ದರು. ಈ ಪೈಕಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರು ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರಕೋಟೆ ಬೇಧಿಸಿ ಗೆದ್ದ ಡಾ.ಸಿ.ಎನ್. ಮಂಜುನಾಥ್ ಅವರಿಗೂ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ನಂಬಿಕೆಯಿತ್ತು. ಆದರೆ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಇತರೆ ಪಕ್ಷಗಳ ಮುಖಂಡರಿಗೂ ಸಚಿವ ಸ್ಥಾನ ಹಂಚಿಕೆ ಮಾಡಬೇಕಾದ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ನಾಯಕರಿಗೆ ಕೇಂದ್ರ ಮಂತ್ರಿ ಸ್ಥಾನ ಸಿಗದೇ ವಂಚಿತರಾಗಿದ್ದಾರೆ ಎಂದು ಹೇಳಬಹುದು.