ಬೆಂಗಳೂರು (ನ.24):  ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್‌ ಸಜ್ಜಾಗುತ್ತಿದ್ದು, ನ.28ರಂದು ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಮುಖಂಡರ, ಶಾಸಕರ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಕರೆದಿದ್ದಾರೆ.

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಶಾಸಕರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ ಮುಖಂಡರು ಸಹ ಸಭೆಯಲ್ಲಿ ಭಾಗವಹಿಸಬೇಕು ಎಂದು ಎಚ್‌.ಕೆ.ಕುಮಾರಸ್ವಾಮಿ ಸೂಚಿಸಿದ್ದಾರೆ.

ಡಿ.ಕೆ.ಸುರೇಶ್‌ ವಿರುದ್ಧ ಎಚ್‌ಡಿಕೆ ಗರಂ : ನಂದೆ ಅಂತಾರೆಂದು ವ್ಯಂಗ್ಯ

ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರವು ಅವಧಿ ಪೂರ್ಣಗೊಳಿಸಿರುವ ಗ್ರಾಮ ಪಂಚಾಯಿತಿಗಳಿಗೆ ನಡೆಸಬೇಕಾಗಿದ್ದ ಚುನಾವಣೆಯನ್ನು ಮುಂದೂಡಿತು. ಆದರೆ, ಹೈಕೋರ್ಟ್‌ ಚುನಾವಣೆ ನಡೆಸುವಂತೆ ಆದೇಶಿಸಿದೆ. ಅದರಂತೆ ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿನ 5800 ಗ್ರಾಮ ಪಂಚಾಯಿತಿಗಳಿಗೆ ಕೆಲವೇ ದಿನದಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸಲಿದೆ. ಈ ಬಗ್ಗೆ ಆಂತರಿಕವಾಗಿ ಪಕ್ಷದಲ್ಲಿ ತುರ್ತಾಗಿ ಚರ್ಚೆ ನಡೆಸಬೇಕಾದ ಅಗತ್ಯ ಇದೆ. 

ಅಲ್ಲದೇ, ಇತ್ತೀಚಿನ ದಿನದಲ್ಲಿ ಸರ್ಕಾರವು ಚುನಾವಣೆಯಲ್ಲಿ ನಡೆಸಿರುವ ಅಕ್ರಮ ಮತ್ತು ಅವ್ಯವಹಾರ ಬಗ್ಗೆ ಹಾಗೂ ಮುಂದಿನ ದಿನದಲ್ಲಿ ಕೆಳ ಹಂತದಿಂದ ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಸಬೇಕಾದ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ನ.28ರಂದು ಸಭೆ ಕರೆಯಲಾಗಿದ್ದು, ಎಲ್ಲರೂ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.