ಚನ್ನಪಟ್ಟಣ (ನ.20):  ಸಂಸದ ಡಿ.ಕೆ.ಸುರೇಶ್‌ ವಿರುದ್ಧ ಗರಂ ಆಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ವೇಳೆ ಸಹ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಕ್ಷೇತ್ರಕ್ಕೆ 30 ಕೋಟಿ ರು. ವೆಚ್ಚದ ಹೆರಿಗೆ ಆಸ್ಪತ್ರೆಯನ್ನು ಸರ್ಕಾರದ ಜತೆ ಮಾತುಕತೆ ನಡೆಸಿ ಮಂಜೂರು ಮಾಡಿಸಿದ್ದೇನೆ. ದೆಹಲಿಯಿಂದ ಅನುಮತಿ ಬರಲಿದ್ದು, ಬಂದ ಬಳಿಕ ಇದನ್ನು ನಾನು ಮಾಡಿದ್ದು ಎಂದು ಸಂಸದರು ಹೇಳಿಕೊಳ್ಳಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ವಲಯದಿಂದ ಮಹತ್ವದ ಸುದ್ದಿ : ಬಿಜೆಪಿಗೆ ಕೈ ಜೋಡಿಸಲು ಮುಂದಾದ್ರ ಗೌಡ್ರು ...

ಕ್ಷೇತ್ರಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ. ಗುದ್ದಲಿ ಪೂಜೆಗೆ ಬರುವ ಹವ್ಯಾಸವನ್ನೇ ನಾನು ಇಟ್ಟುಕೊಂಡಿಲ್ಲ, ಆದರೆ, ನಾನು ಅನುಷ್ಟಾನಗೊಳಿಸಿದ ಯೋಜನೆಗಳನ್ನು ನಾನು ಮಾಡಿದ್ದೇನೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ. ಈ ಕಾರಣದಿಂದ ಪಕ್ಷದ ಮುಖಂಡರು ನಾನೇ ಬಂದು ಭೂಮಿಪೂಜೆ ನೆರವೇರಿಸುವಂತೆ ಒತ್ತಾಯಿಸಿದರು ಎಂದು ಹೆಸರೇಳದೆ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

ಸತ್ತೇಗಾಲ ಯೋಜನೆಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸತ್ತೆಗಾಲ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ನಾನು ಅಲ್ಲಿಗೆ ಹೋಗಿ ಫೋಟೊ ತೆಗೆಸಿಕೊಳ್ಳಬೇಕಿಲ್ಲ ಎಂದು ರಾಜಕೀಯ ಎದುರಾಳಿಗಳ ವಿರುದ್ಧ ಪರೋಕ್ಷವಾಗಿ ಅಣಕ ವಾಡಿದರು.