ಬೆಂಗಳೂರು, (ಮಾ.21): ಕೃಷಿಯಲ್ಲಿ ಆದಾಯ ಗಳಿಸುವುದು ಇರಲಿ, ಕೃಷಿ ಮಾಡಲು ರೈತ ಸಂಕಷ್ಟ ಅನುಭವಿಸಬೇಕಾಗಿರುವುದು ಇವತ್ತಿನ ದುರಂತ. ಇದನ್ನು ನಿವಾರಿಸಲಾಗದೇ ಇರುವುದು ರೈತರ ಆದಾಯ ದ್ವಿಗುಣ ಮಾಡುವ ಕ್ರಮವೇ ಎಂಬುದರ ಬಗ್ಗೆ ನರೇಂದ್ರ ಮೋದಿ ಉತ್ತರಿಸಬೇಕು. ಪರಿಸ್ಥಿತಿ ಹೀಗಿದ್ದು, ಸಮಾವೇಶದಲ್ಲಿ ರೈತರ ಕಲ್ಯಾಣದ ಬಗ್ಗೆ ಮೋದಿ ಅವರು ಆಡುವ ಮಾತುಗಳು ಪ್ರಾಮಾಣಿಕವೇ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಈ ಟ್ವೀಟ್ ಮಾಡಿರುವ ಅವರು, 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಮೋದಿ ಹೇಳಿದ್ದರು. ಆದರೆ, 2021ರ ವೇಳೆಗೇ ರೈತರ ಕೃಷಿ ಖರ್ಚು-ವೆಚ್ಚ ದುಪ್ಪಟ್ಟಾಗಿದೆ. ರಸಗೊಬ್ಬರ ಬೆಲೆ ಏರಿದೆ. ರೈತರು ಬೋರ್‌ವೆಲ್‌ ಕೊರೆಸಲಾಗದಂಥಾ ಪರಿಸ್ಥಿತಿ ಉದ್ಭವವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯು ಪರಿಸ್ಥಿತಿಯನ್ನು ವಿಷಮಗೊಳಿಸಿದೆ. ಇನ್ನು ಆದಾಯ ದ್ವಿಗುಣ ಎಲ್ಲಿ ಎಂದಿದ್ದಾರೆ.

ಬೈ ಎಲೆಕ್ಷನ್‌ಗೆ ಕೊರೋನಾ ರೂಲ್ಸ್ ಅಪ್ಲೈ ಆಗಲ್ಲವೆಂದ ಸಿಎಂಗೆ HDK ಜಬರ್ದಸ್ತ್ ಟಾಂಗ್!

ಇವತ್ತಿನ ಲೆಕ್ಕಾಚಾರದ ಪ್ರಕಾರ ರೈತರು ಬೋರ್‌ವೆಲ್ ಕೊರೆಸಬೇಕಿದ್ದರೆ 1-2ಲಕ್ಷ ಖರ್ಚು ಮಾಡಬೇಕು. ಪಿವಿಸಿ ಪೈಪ್‌ಗಳ ದರ ದುಪ್ಪಟ್ಟಾಗಿದೆ, ಮೋಟರ್‌ ಬೆಲೆಯಲ್ಲಿ ಜಿಗಿತವಾಗಿದೆ. ಕೃಷಿ ಪಂಪ್‌ ಸೆಟ್‌ಗಳಿಗೆ ರೈತರಾದವರೇ ಶೇ. 18ರಷ್ಟು ಜಿಎಸ್‌ಟಿ ಪಾವತಿಸಬೇಕಿರುವುದು ವಿಷಾದಕರ. ಇದು ಕೃಷಿಗೆ ಪೂರಕ ಸ್ಥಿತಿಯೇ ಎಂಬುದರ ಅವಲೋಕನೆಯಾಗಬೇಕಿದೆ ಎಂದಿದ್ದಾರೆ.

ಕೃಷಿ ಪರಿಕರಗಳ ಬೆಲೆ ಏರಿಕೆ ಬಗ್ಗೆ ರಾಜ್ಯದ ಕೃಷಿ ಸಚಿವರು ನೀಡಿರುವ ಹೇಳಿಕೆ ಇಂತಿದೆ, ‘ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಳಕ್ಕೆ ರೈತರು ಹೊಂದಿಕೊಳ್ಳಬೇಕು,’ಎಂದಿದ್ದಾರೆ ಅವರು. ರೈತರ ಕಷ್ಟ ನೀಗಿಸಬೇಕಾದವರು ಬೇಜವಾಬ್ದಾರಿತನ ತೋರುವುದು ಬೇಸರದ ವಿಚಾರ ಎಂದು ಎಚ್ ಡಿಕೆ ಟ್ವೀಟ್ ಮಾಡಿದ್ದಾರೆ.