ಮೇ 1 ರಿಂದ ಪ್ರಾರಂಭವಾಗಬೇಕಿದ್ದ ಮೂರನೇ ಹಂತದ ವ್ಯಾಕ್ಸಿನೇಷನ್​ ಮುಂದೂಡಿಕೆಯಾಗುವ ಕುರಿತು ಚರ್ಚೆಗಳು ಹುಟ್ಟಿಕೊಂಡಿವೆ. ಇದಕ್ಕೆ ಮಾಜಿ ಸಿಎಂ ಎಚ್‌ಡಿಕೆ ಗರಂ ಆಗಿದ್ದಾರೆ.

ಬೆಂಗಳೂರು, (ಏ.0): ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕೆಂಡ ಕಿಡಿಕಾರಿದ್ದಾರೆ. 

ಸರಣಿ ಟ್ವೀಟ್ ಮಾಡಿರುವ ಎಚ್‌ಡಿಕೆ, ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಏದುಸಿರು ಬಿಡುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಕೊಡಲು ಹೆಣಗಾಡುತ್ತಿದೆ ಎಂದು ಎಚ್‌ಡಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. 

'ಅಪ್ಪನ ಮನೆಯಿಂದ ಕೊಡ್ತಾರಾ, ಕ್ಯಾಬಿನೆಟ್‌ನಿಂದ ಒದ್ದು ಹೊರಗಾಕಿ'

ಕೇಂದ್ರ ಮತ್ತು ರಾಜ್ಯ ಪುಕ್ಕಟೆ ಪುಂಗಿ ಊದಿದ್ದೇ ಬಂತು
ಮೇ ಒಂದರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂದು ಬೊಬ್ಬೆ ಹೊಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುಕ್ಕಟೆ ಪುಂಗಿ ಊದಿದ್ದೇ ಬಂತು. ಲಸಿಕೆಯ ದಾಸ್ತಾನಿಲ್ಲದೆ, ಸೂಕ್ತ ಮುನ್ನೆಚ್ಚರಿಕೆ, ವ್ಯವಸ್ಥೆ ಮಾಡಿಕೊಳ್ಳದೆ ಬರೀ ಪ್ರಚಾರ ತೆಗೆದುಕೊಂಡ ಕೇಂದ್ರ, ರಾಜ್ಯ ಸರ್ಕಾರಗಳ ನಿಲುವು ಅಕ್ಷಮ್ಯ ಮತ್ತು ಖಂಡನೀಯ. ಲಭ್ಯವಿರುವ ಮಾಹಿತಿ ಪ್ರಕಾರ ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಏದುಸಿರು ಬಿಡುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಲು ಹೆಣಗಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to load tweet…

ರಾಜ್ಯ ಸರ್ಕಾರದ ಹೊಣೆಗೇಡಿತನ ಮತ್ತು ತಿಕ್ಕಲುತನ
18 ವರ್ಷ ಮೇಲ್ಪಟ್ಟ ದೇಶದ ಕೋಟ್ಯಾಂತರ ಮಂದಿಗೆ ಲಸಿಕೆ ನೀಡುವುದಾಗಿ ಬಾಯಿಮಾತಿನ ಉಪಚಾರ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗೇಡಿತನ ಮತ್ತು ತಿಕ್ಕಲುತನವನ್ನು ದೇಶದ ಜನತೆ ಎಂದಿಗೂ ಕ್ಷಮಿಸರು ಎಂದು ವಾಗ್ದಾಳಿ ನಡೆಸಿದರು.

ಆತುರಗಾರನಿಗೆ ಬುದ್ಧಿ ಕಡಿಮೆ ಎಂಬಂತೆ ಕೇವಲ ಮಾತಿನಲ್ಲಿ ಜನರನ್ನು ಓಲೈಸುವ ಇಂತಹ ಬೂಟಾಟಿಕೆಯನ್ನು ಸರ್ಕಾರ ಬಿಡಬೇಕು. 'ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ' ಎನ್ನುವ ಸರ್ಕಾರ ಇದ್ದರೇನು? ಇಲ್ಲದಿದ್ದರೇನು? ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ? ಅವರಲ್ಲಿ ಎಷ್ಟು ಮಂದಿಗೆ ಎರಡನೇ ಹಂತದಲ್ಲಿ ಲಸಿಕೆ ಕೊಡಲಾಗಿದೆ ಎಂಬ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಎಂದು ಒತ್ತಾಯಿಸಿದರು.

Scroll to load tweet…

ದೇಶದಾದ್ಯಂತ ಕೊರೋನಾ ಸೋಂಕಿತರು ಬೆಡ್, ಆಕ್ಸಿಜನ್, ಅಂಬುಲೆನ್ಸ್, ಔಷಧಿಗಳಿಲ್ಲದೆ ಪರದಾಡುತ್ತಿದ್ದಾರೆ. ಸತ್ತವರ ಅಂತ್ಯಸಂಸ್ಕಾರಕ್ಕೂ ಪಾಳಿಯಲ್ಲಿ ನಿಲ್ಲಬೇಕಾದ ವ್ಯವಸ್ಥೆ ಸೃಷ್ಟಿಸಿದ ಕೇಂದ್ರ- ರಾಜ್ಯ ಸರ್ಕಾರಗಳ ದಯನೀಯ ವೈಫಲ್ಯದ ಬಗ್ಗೆ ದೇಶದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.

ಲಸಿಕೆ ನೀಡುವ ವಿಷಯದಲ್ಲಿ ಜನತೆ ಸಿನಿಕರಾಗದಂತೆ ಎಚ್ಚರವಹಿಸುವುದು ಸರ್ಕಾರಗಳ ಜವಾಬ್ದಾರಿ. ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉಡಾಫೆಯ ಧೋರಣೆ ತಳೆಯುವುದು ಸರಿಯಲ್ಲ ಎಂದಿದ್ದಾರೆ.

Scroll to load tweet…