Hijab Row 'ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ'

* ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕಿಚ್ಚು
* ಕಾಂಗ್ರೆಸ್, ಬಿಜೆಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ
* ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ ಎಚ್‌ಡಿಕೆ

HD Kumaraswamy Hits out at Congress and BJP Over Hijab Row rbj

ಹಾಸನ, (ಫೆ.14): ಹಿಜಾಬ್ (Hijab Row)ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಏನು ಬರುತ್ತದೋ ನೋಡೋಣ. ಆದರೆ, ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಹೃದಯದಲ್ಲಿ ವಿಷ ತುಂಬುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ,ಕುಮಾರಸ್ವಾಮಿ(HD Kumaraswamy) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಇಂದು(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ದೊಡ್ಡ ಮಟ್ಟದಲ್ಲಿ ಹರಡಿದರೆ ಇದರ ಮೆಲೆ ಭಾವನಾತ್ಮಕ ವಿಚಾರ ಇಟ್ಟು ಮತಗಳನ್ನಾಗಿ ಪರಿವರ್ತನೆ ಮಾಡಬಹುದು ಎನ್ನುವ ದುರಾಲೋಚನೆ ಇದರ ಹಿಂದೆ ಅಡಗಿದೆ. ಅದಕ್ಕಾಗಿ ಎಲ್ಲಾ ದುಷ್ಟ ಪ್ರಯತ್ನಗಳು ನಡೆಯುತ್ತಿವೆ. ಆದರೆ ಯಾವ ಕ್ಷಣದಲ್ಲಿ ಇದು ಯಾರಿಗೆ ತಿರಗುಬಾಣ ಆಗುತ್ತದೆ ಎನ್ನುವುದನ್ನು ನೋಡೊಣ ಎಂದು ಮಾರ್ಮಿಕವಾಗಿ ಹೇಳಿದರು.

Hijab Row: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಜನರ ಕ್ಷಮೆ ಕೇಳಬೇಕು: ಡಿಕೆಶಿ

ಸಣ್ಣ ಪ್ರಮಾಣದಲ್ಲಿದ್ದ ಹಿಜಾಬ್ ವಿವಾದವನ್ನು ದೊಡ್ಡದು ಮಾಡಿದ್ದಾರೆ. ಇದರಲ್ಲಿ ಎಲ್ಲಾ ಸಮಾಜದ ಸಂಘಟನೆಗಳ ಪಾತ್ರವೂ ಇದೆ. ಇದು ವ್ಯವಸ್ಥಿತವಾಗಿ ಶುರುವಾಗಿದ್ದು, ಇದರ ಹಿಂದೆ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಇದೆ. ಅದಕ್ಕೆ ಈ ವಿಷಯವನ್ನು ದೇಶವ್ಯಾಪಿ ಹರಡುವಂತೆ ಮಾಡಲಾಗುತ್ತಿದೆ. ಹಾಗಾಗಿ ಜನ ಇಂಥ ಭಾವನಾತ್ಮಕ ವಿಷಯಗಳಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದರು. 

ನಮಗೆಲ್ಲರಿಗೂ ಬೇಕಿರುವುದು ಬದುಕು ಮಾತ್ರ. ಬದುಕು ಕಟ್ಟುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಸಮಾಜವನ್ನು ಹಾಳು ಮಾಡುವ ಕೆಲಸ ಆಗಬಾರದು ಎಂದರು.

ರಾಜ್ಯದಲ್ಲಿ ಹಿಜಾಬ್ ವಿವಾದ ಯಾಕೆ ಪ್ರಾರಂಭವಾಯಿತು? ಇದರ ಹಿಂದಿನ ದುರುದ್ದೇಶವೇನು? ಶಿಕ್ಷಣ ಕ್ಷೇತ್ರಕ್ಕೂ ಇದನ್ನು ಯಾಕೆ ತಂದರು? ಮಕ್ಕಳ ಹೃದಯ ಹಾಳು ಮಾಡಲು ಈ ರೀತಿ ಮಾಡಬೇಕಿತ್ತಾ? ಯಾವುದೋ ಒಂದು ಶಾಲೆಯಲ್ಲಿ ಆರಂಭವಾದ ವಿವಾದವನ್ನು ಅಲ್ಲಿಯೇ ಮುಗಿಸಬೇಕಿತ್ತು. ಆದರೆ ಅದನ್ನು ಅಲ್ಲಿಗೇ ಬಿಡುವುದು ಕೆಲವರಿಗೆ ಬೇಕಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೋಷಕರು ಎಚ್ಚರ ವಹಿಸಬೇಕು. ನಿಮ್ಮ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವ ಯಾವುದೇ ಸಂಘಟನೆ ಇರಲಿ, ಅಂಥವರಿಗೆ ಅವಕಾಶ ಕೊಡಬೇಡಿ. ನಿಮ್ಮ ಮಕ್ಕಳನ್ನು ಅಂತಿಮವಾಗಿ ದಾರಿ ತಪ್ಪಿಸುತ್ತಿದ್ದಾರೆ. ಆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ನೈಜ ವಾತಾವರಣ ಏನಿದೆ ಎಂಬ ಬಗ್ಗೆ ಮಕ್ಕಳಿಗೆ ಬುದ್ದಿ ಹೇಳಿ. ಚಿಕ್ಕ ಮಕ್ಕಳಲ್ಲಿ ದ್ವೇಷದ ಮನೋಭಾವನೆ ಬೆಳೆಸುವಂಥ ಕೆಲಸ ಬೇಡ. ಸಮಾಜವನ್ನು ದಾರಿ ತಪ್ಪಿಸುವಂತಹ ಸಂಘಟನೆಗಳಿಗೆ ಯಾರೂ ಬಲಿಯಾಗುವುದು ಬೇಡ ಎಂದು ಅವರು ಕಿವಿಮಾತು ಹೇಳಿದರು.

ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ಆಗುತ್ತಿಲ್ಲ
ವಿಧಾನಮಂಡಲ ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಹೇಳಿದ ಅವರು, ಪ್ರತಿ ಬಾರಿಯೂ ಅನಗತ್ಯ ವಿಷಯಗಳ ಮೂಲಕ ಕಲಾಪದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ . ಕಲಾಪಗಳಲ್ಲಿ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನ ಚರ್ಚೆ ನಡೆಯುತ್ತಿಲ್ಲ. ಪ್ರತಿ ಬಾರಿಯೂ ಸದನದ ಸಮಯ ಬೇಡದ ವಿಚಾರಗಳಿಗೆ ಬಲಿಯಾಗುತ್ತಿದೆ. ನಾನು ಈ ಬಾರಿ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ತೊರೆದಿರುವ ಸಿಎಂ ಇಬ್ರಾಹಿಂ ಅವರಿಗೆ ಜೆಡಿಎಸ್ ಪಕ್ಷ ಸೇರುವಂತೆ ಮುಕ್ತ ಆಹ್ವಾನ ನೀಡಿದ್ದೇನೆ. ಆದರೆ, ಅವರು ತಮ್ಮ ಹಿತೈಷಿಗಳ ಜತೆ ಚರ್ಚೆ ನಡೆಸುತ್ತಿದ್ದಾರೆ. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡುತ್ತೇವೆ ಎಂದರು.
 

Latest Videos
Follow Us:
Download App:
  • android
  • ios