* ಎಚ್‌ಡಿ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ್‌ ನಡುವೆ ವಾಕ್ಸಮರ* ಯೋಗೇಶ್ವರ್​ಗೆ  ಎಚ್​ಡಿಕೆ ತಿರುಗೇಟು ಕೊಟ್ಟ ಎಚ್​ಡಿಕೆ* ಕುಮಾರಸ್ವಾಮಿ ಆ ಹೋಟೆಲ್ ನಲ್ಲಿ ರಾಸಲೀಲೆ ಆಡಿಕೊಂಡಿದ್ದ ಎಂದಿದ್ದ ಯೋಗೇಶ್ವರ್

ಬೆಂಗಳೂರು, (ಮಾ.14): ನನ್ನದು ಕದ್ದುಮುಚ್ಚಿ ಯಾವುದು ಇಲ್ಲ. ಈಗಲೂ ಅಲ್ಲಿಗೆ ಹೋಗ್ತೀನಿ ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ (HD Kumaraswam) ಅವರು ಸಿಪಿ ಯೋಗೇಶ್ವರ್​ಗೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿಯವರು 14 ತಿಂಗಳು ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ, ಆ ಹೋಟೆಲ್ ನಲ್ಲಿ ರಾಸಲೀಲೆ ಆಡಿಕೊಂಡಿದ್ದರು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ (CP Yogeeshwar) ಸ್ಫೋಟಕ ಆರೋಪ ಮಾಡಿದ್ದರು.

ಆ ಹೋಟೆಲ್​ನಲ್ಲಿ ಕುಮಾರಸ್ವಾಮಿ ರಾಸಲೀಲೆ ಮಾಡಿಕೊಂಡಿದ್ದ, ಬಿಜೆಪಿ ನಾಯಕ ಗಂಭೀರ ಆರೋಪ

ಇನ್ನು ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಾನು ತಾಜ್ ವೆಸ್ಟೆಂಡ್‌ ಹೋಟೆಲ್​ಗೆ ರಾಸಲೀಲೆ ಮಾಡಲು ಹೋಗ್ತಿರಲಿಲ್ಲ. ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ರೆಸ್ಟ್ ಮಾಡಲು ಹೋಗ್ತಿದ್ದೆ. ಈಗಲೂ ಅಲ್ಲಿಗೆ ಹೋಗ್ತೀನಿ. ನನ್ನದು ತೆರೆದ ಪುಸ್ತಕ. ನನ್ನೊಂದಿಗೆ ನನ್ನ ಪಿಎ ಈಗಲೂ ಇರ್ತಾರೆ ಎಂದು ಸಿಪಿ ಯೋಗೇಶ್ವರ್‌ಗೆ ತಿರುಗೇಟು ನೀಡಿದರು.

ಸಾ.ರಾ. ಮಹೇಶ್ ಇರ್ತಿದ್ರು. ನಾನೇನು ಇವನತ್ರ ನೋಡಿ ಕಲಿಯಬೇಕಿತ್ತಾ? ಇವನು ಗುಡಿಸಲಲ್ಲಿ ಇದ್ದನಾ? ಇಲ್ಲೇ ಯುಬಿ ಸಿಟಿ ಪಕ್ಕದಲ್ಲಿ ಇದ್ನಲ್ಲ. ನನ್ನದು ಕದ್ದುಮುಚ್ಚಿ ಯಾವುದೂ ಇಲ್ಲ… ಎಂದು ಸಿ.ಪಿ.ಯೋಗೇಶ್ವರ್​ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.

 ನಾನು ಕಣ್ಣೀರು ಹಾಕ್ಕೊಂಡ್ ಚನ್ನಪಟ್ಟಣಕ್ಕೆ ಹೋಗಿಲ್ಲ. ನಾನು ಸಿಎಂ ಆಗಿದ್ದು ಚನ್ನಪಟ್ಟಣಕ್ಕೆ ಅಲ್ಲ, ಇಡೀ ರಾಜ್ಯಕ್ಕೆ. ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಕೆಲಸ ಮಾಡಿಸಬೇಕೋ ಎಲ್ಲಾ ಮಾಡಿರುವೆ. ಈ ಬಗ್ಗೆ ಇವನು ಸರ್ಟಿಫಿಕೇಟ್ ಕೊಡೋದಲ್ಲ, ನನ್ನನ್ನು ಆಯ್ಕೆ ಮಾಡಿದ ಜನರು ಕೊಡಬೇಕು ಎಂದರು.

ಮೆಗಾಸಿಟಿ ಅಂತ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನ ಬೀದಿ ಪಾಲು ಮಾಡಿದ. ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ. ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ. ಇವನು ನನ್ನ ವಿರುದ್ಧ ಆರೋಪ ಮಾಡ್ತಾನಾ? ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ ಚನ್ನಪಟ್ಟಣದಲ್ಲೇ ಚರ್ಚೆ ಮಾಡೋಣ. ಮೆಗಾಸಿಟಿ ಮಾಡಿ, ಲೂಟಿ ಹೊಡೆದು ಜನರನ್ನ ಬೀದಿ ಪಾಲು ಮಾಡಿದ್ದಾನೆ. ಸೈನಿಕ ಅಂತ ಸಿನಿಮಾ ಮಾಡಲು ಹೋಗಿದ್ದ. ಇಂದಿಗೂ ಹಣ ಕೊಟ್ಟವರು ಬೀದಿಪಾಲಾಗಿದ್ದಾರೆ. ಇವನು ಚಡ್ಡಿ ಹಾಕಿದ್ನೋ ಇಲ್ಲವೋ, ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣದ ಜತೆ ಸಂಬಂಧ ಇತ್ತು. ಓಪನ್ ಚರ್ಚೆಗೆ ನಾನು ಸಿದ್ಧ, ಬರಲಿ ಯಾವ ವಿಚಾರ ಚರ್ಚೆ ಮಾಡ್ತಾರೆ ಮಾಡಲಿ ಎಂದು ಯೋಗೇಶ್ವರ್​ಗೆ ಎಚ್​ಡಿಕೆ ಟಾಂಗ್ ಕೊಟ್ಟರು.

ಚನ್ನಪಟ್ಟಣಕ್ಕೆ ಬರಲಿ, ಬಸ್ ಸ್ಟಾಂಡ್ ಕರ್ಮಕಾಂಡ ನಂದಾ? ಖಾಸಗಿ ಬಸ್ ನಿಲ್ದಾಣಕ್ಕೆ 30 ಕೋಟಿ ಪ್ರಾಜೆಕ್ಟ್ ಮಾಡಿ ಎಸ್ಟಿಮೇಟ್ ಮಾಡಿದ್ರು. ಅವನ್ಯಾರೋ ಕಂಟ್ರ್ಯಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದಾನೆ. ಅದಕ್ಕೆ ನಾನು ಹಣ ಕೊಡಿಸಬೇಕಾ? ಅಲ್ಲಿ ಹೋಗಿ ನೋಡಿ ತಗಡು ಹೊಡೆಸಿ ಇಟ್ಟಿದ್ದಾನೆ. ಅಂಬೇಡ್ಕರ್ ಭವನ ಗುಂಡಿ ಆಗಿದೆ, ನೀರು ನಿಂತಿದೆ. ಅದನ್ನ ನಾನು ಹೋಗಿ ಕ್ಲೀನ್ ಮಾಡಿಸಬೇಕು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸೋಮವಾರ ಬೆಳಗ್ಗೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್​ ಸಿಡಿಸಿದ್ದ ಯೋಗೇಶ್ವರ್​, ಎಚ್​ಡಿಕೆ 14 ತಿಂಗಳು ಸಿಎಂ ಆಗಿದ್ದ ವೇಳೆ ರಾಸಲೀಲೆ ಆಡಿಕೊಂಡಿದ್ದರು. ರಾಸಲೀಲೆ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ, ಅವರು ಹೇಳಿಲ್ಲ ಅಂದ್ರೆ ನಾನೇ ಹೇಳ್ತೀನಿ ಎಂದು ಸವಾಲು ಹಾಕಿದ್ದರು.

ನಿನ್ನ ಹೆಂಡತಿ ವಿರುದ್ಧ ಗೆದ್ದೆ, ನಿನ್ನ ವಿರುದ್ಧ ಸೋತೆ, ಮತ್ತೆ ನಿನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ರೆಡಿಯಾಗಿದ್ದೀನಿ ಎಂದು ಯೋಗೇಶ್ವರ್ ಹೇಳಿದ್ದಾರೆ.