ಕುಮಾರಸ್ವಾಮಿ ಆರೋಪ ಹಿಟ್‌ ಅಂಡ್‌ ರನ್‌ ಇದ್ದಂತೆ, ವರ್ಗಾವಣೆ ದಂಧೆ ಆರೋಪಕ್ಕೆ ಸಿಎಂ ತೀಕ್ಷ್ಣ ಪ್ರತಿಕ್ರಿಯೆ,. ಎಚ್‌ಡಿಕೆ ಸಿಎಂ ಆಗಿದ್ದಾಗ ಅವರ ಕುಟುಂಬ ಭ್ರಷ್ಟಾಚಾರ ಮಾಡುತ್ತಿತ್ತಾ?: ಸಿಎಂ ಸಿದ್ದರಾಮಯ್ಯ

ಬೆಂಗಳೂರು(ಜು.07):  ‘ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ. ಅವರ ಆರೋಪಗಳು ಹಿಟ್‌ ಅಂಡ್‌ ರನ್‌ ಇದ್ದಂತೆ. ಹೀಗಾಗಿ ಕುಮಾರಸ್ವಾಮಿ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಅಲ್ಲದೆ, ಅವರು ತಮ್ಮ ರಾಜಕೀಯ ಜೀವನದಲ್ಲಿ ಈವರೆಗೆ ಮಾಡಿರುವ ಯಾವುದೇ ಒಂದು ಆರೋಪವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ. ನಾನು ಮುಖ್ಯಮಂತ್ರಿ ಆಗಿರುವ ಕಾರಣಕ್ಕೆ ನನ್ನ ಪುತ್ರ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎನ್ನುವುದಾದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕುಟುಂಬ ಸದಸ್ಯರೆಲ್ಲರೂ ಭ್ರಷ್ಟಾಚಾರ ಮಾಡುತ್ತಿದ್ದರೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

'ನಾಚಿಕೆ ಆಗುವಂಥದ್ದು ನಾನೇನ್‌ ಮಾಡಿದ್ದೇನೆ..ಸುಮ್ನೆ ಕುಂತ್ಕೋ' ಚಲುವರಾಯಸ್ವಾಮಿಗೆ ಎಚ್‌ಡಿಕೆ ಸಿಟ್ಟು

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದೇನೆ ಎಂದ ಮಾತ್ರಕ್ಕೆ ನನ್ನ ಪುತ್ರ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎನ್ನುವುದು ಕುಮಾರಸ್ವಾಮಿ ಅವರ ಕಲ್ಪನಾ ವಿಲಾಸ. ಇದೇ ವಾದವನ್ನು ಅವರಿಗೆ ಮತ್ತು ಅವರ ಕುಟುಂಬಕ್ಕೆ ಅನ್ವಯಿಸಬಹುದಾ? ಕುಮಾರಸ್ವಾಮಿ ಅವರ ಅಣ್ಣ ಸಚಿವರಾಗಿದ್ದರು, ಈಗ ಶಾಸಕ. ಕುಮಾರಸ್ವಾಮಿ ಪತ್ನಿ ಶಾಸಕಿಯಾಗಿದ್ದರು, ತಂದೆ ಪ್ರಧಾನಮಂತ್ರಿಗಳಾಗಿದ್ದರು. ಅಣ್ಣನ ಮಗ ಸಂಸದರಾಗಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅವರ ಕುಟುಂಬದ ಸದಸ್ಯರೆಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದರೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ. ಹೊಸ ಸರ್ಕಾರ ಬಂದಾಗ ಆಡಳಿತ ದೃಷ್ಟಿಯಿಂದ ವರ್ಗಾವಣೆ ಮಾಡಲೇಬೇಕಾಗುತ್ತದೆ. ಕಳೆದ ಮಾಚ್‌ರ್‍-ಏಪ್ರಿಲ್‌ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ವರ್ಗಾವಣೆಯಾಗಿರಲಿಲ್ಲ. ಈಗ ಆ ಸಾಮಾನ್ಯ ವರ್ಗಾವಣೆ ನಡೆಯುತ್ತಿದೆ. ಇದು ನಮ್ಮಿಂದ ಶುರುವಾಗಿರುವುದಲ್ಲ. ಹಿಂದಿನ ಸರ್ಕಾರದಲ್ಲಿಯೂ ನಡೆದಿದೆ, ಮುಂದೆಯೂ ನಡೆಯುತ್ತದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಮಾಡಿದ್ದಾರೆ. ಅವರು ವರ್ಗಾವಣೆ ನಡೆಸಿರಲಿಲ್ಲವೇ? ಅವರು ಹಣ ಪಡೆದೇ ವರ್ಗಾವಣೆ ನಡೆಸಿದ್ದರೇ ಎಂದು ಪ್ರಶ್ನಿಸಿದರು.