Bidadi Township Project: ವಿಧಾನಸೌಧಕ್ಕೆ ಬರುವ ಬದಲು, ಯೋಜನೆಯಿಂದ ನೇರವಾಗಿ ಪರಿಣಾಮಕ್ಕೆ ಒಳಗಾಗುತ್ತಿರುವ ಜನರ ಮಧ್ಯೆ ಚರ್ಚೆ ನಡೆಸೋಣ ಎಂದು ಡಿಕೆಶಿಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬೆಂಗಳೂರು (ಜೂ.22): ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಯೋಜನೆ ಕುರಿತು ವಿಧಾನಸೌಧದಲ್ಲಿ ಮುಖಾಮುಖಿ ಚರ್ಚೆಗೆ ಆಹ್ವಾನ ನೀಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವಿಧಾನಸೌಧಕ್ಕೆ ಬರುವ ಬದಲು, ಯೋಜನೆಯಿಂದ ನೇರವಾಗಿ ಪರಿಣಾಮಕ್ಕೆ ಒಳಗಾಗುತ್ತಿರುವ ಜನರ ಮಧ್ಯೆ ಚರ್ಚೆ ನಡೆಸೋಣ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಕಳುಹಿಸಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಬಿಡದಿ ಅಥವಾ ಭೈರಮಂಗಲದಲ್ಲಿ ಸಾರ್ವಜನಿಕ ಸಭೆ ಆಯೋಜಿಸಿ, ರೈತರು, ಗ್ರಾಮಸ್ಥರು ಮತ್ತು ಯೋಜನೆಯಿಂದ ಬಾಧಿತರಾಗಿರುವ ಎಲ್ಲರ ಸಮ್ಮುಖದಲ್ಲಿ ಮುಕ್ತ ಚರ್ಚೆ ನಡೆಸೋಣ ಎಂದು ಪ್ರಸ್ತಾಪಿಸಿದ್ದಾರೆ.
ಪತ್ರದಲ್ಲೇನಿದೆ?
ತಮ್ಮ ಪತ್ರದಲ್ಲಿ, ಬಿಡದಿ ಸಮಗ್ರ ಉಪನಗರ ಯೋಜನೆಯಿಂದ ರಾಮನಗರ ಜಿಲ್ಲೆಯ ಹಲವು ಗ್ರಾಮಗಳ ರೈತರು ಮತ್ತು ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಪರಿಸರದ ಮೇಲೂ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಉಲ್ಲೇಖಿಸಿದ್ದಾರೆ. ಈ ಕಾರಣದಿಂದಲೇ ವಿಧಾನಸೌಧದ ನಾಲ್ಕು ಗೋಡೆಗಳ ಮಧ್ಯೆ ಅಲ್ಲ, ಜನರ ನಡುವೆ ಚರ್ಚೆ ನಡೆದರೆ ಮಾತ್ರ ಸತ್ಯ ಹೊರಬರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕುಮಾರಸ್ವಾಮಿ, "ಈ ಯೋಜನೆಯಲ್ಲಿ ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರೈತರು ಮತ್ತು ಬಾಧಿತರನ್ನು ಹೊರಗಿಟ್ಟು ನಡೆಸುವ ಯಾವುದೇ ಸಭೆ ಫಲಪ್ರದವಾಗುವುದಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ನಿಲುವಿನ ಮೇಲೂ ಪ್ರಶ್ನೆ ಎತ್ತಿದ್ದಾರೆ. ಜೂನ್ 26ರಂದು ತಮಗೆ ಪೂರ್ವನಿಗದಿತ ಕಾರ್ಯಕ್ರಮಗಳಿರುವುದರಿಂದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿರುವ ಅವರು, ಜೂನ್ 27ರಂದು ಬಿಡದಿ ಅಥವಾ ಭೈರಮಂಗಲದಲ್ಲಿ ಬಾಧಿತ ಜನರ ಸಮ್ಮುಖದಲ್ಲಿ ಸಭೆ ನಡೆಸಲು ಸಿದ್ಧ ಎಂದು ತಿಳಿಸಿದ್ದಾರೆ.
ಈ ಮೂಲಕ ಬಿಡದಿ ಟೌನ್‌ಶಿಪ್ ವಿವಾದ ಇದೀಗ ಕೇವಲ ರಾಜಕೀಯ ನಾಯಕರ ನಡುವಿನ ವಾಕ್ಸಮರವಾಗಿರದೆ, ರೈತರು, ಪರಿಸರ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಯಾಗಿ ರೂಪಾಂತರಗೊಂಡಿದೆ. ಇದೀಗ ಕುಮಾರಸ್ವಾಮಿ ನೀಡಿರುವ ಸಾರ್ವಜನಿಕ ಚರ್ಚೆಯ ಆಹ್ವಾನವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವೀಕರಿಸುತ್ತಾರೆಯೇ ಎಂಬುದರತ್ತ ರಾಜ್ಯ ರಾಜಕೀಯದ ಚಿತ್ತ ನೆಟ್ಟಿದೆ.


