ಸಿದ್ದರಾಮಯ್ಯಗೆ ಎಚ್‌ಡಿಕೆ ಟಕ್ಕರ್, ಬಾದಾಮಿಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ
* ಬಾದಾಮಿ ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಎಚ್‌ಡಿಕೆ
* ಬಾದಾಮಿಯಲ್ಲಿ ನಡೆದ ಜೆಡಿಎಸ್ 'ಜನತಾ ಜಲಧಾರೆ ಸಂಕಲ್ಪ ಸಮಾವೇಶ'ದಲ್ಲಿ ಘೋಷಣೆ
* ಸಿದ್ದರಾಮಯ್ಯಗೆ ಎಚ್‌ಡಿ ಕುಮಾರಸ್ವಾಮಿ ಟಕ್ಕರ್
ಬಾಗಲಕೋಟೆ,(ಮೇ.09) : 2023ರ ವಿಧಾನಸಭಾ ಚುನಾವಣಗೆ ಒಂದು ವರ್ಷ ಬಾಕಿ ಇದೆ. ಆಗಲೇ ಕಾಂಗ್ರೆಸ್, ಬಿಜೆಪಿ ಭರ್ಜರಿ ತಯಾರಿ ನಡೆಸಿವೆ. ಇದರ ಮಧ್ಯೆ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಜೆಡಿಎಸ್ ಸಹ ಎರಡು ಪಕ್ಷಗಳ ವಿರುದ್ಧ ಹೋರಾಟಕ್ಕೆ ತಯಾರಿ ನಡೆಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ 2023ಕ್ಕೆ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಸಿದ್ದರಾಮಯ್ಯನವರಿಗೆ ಸ್ವಕ್ಷೇತ್ರದಲ್ಲೇ ಟಕ್ಕರ್ ಕೊಡೋಕೆ ಇದೀಗ ಜೆಡಿಎಸ್ ಪಕ್ಷ ಮಾತ್ರ ಸನ್ನದ್ದವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಷ್ಟೇನು ಪ್ರಭಾವ ಹೊಂದಿರದಿದ್ದರೂ ಸಹ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರನ್ನೇ ಟಾರ್ಗೆಟ್ ಮಾಡಿದ್ದಾರೆ. ಅದಕ್ಕೆ ಅವರು ಸಿದ್ದರಾಮಯ್ಯನವರ ಬಾದಾಮಿ ಕ್ಷೇತ್ರದಲ್ಲಿ ಜನತಾ ಜಲಧಾರೆ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಬಾದಾಮಿ ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಎಚ್‌ಡಿಕೆ
ಬಾದಾಮಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹನುಮಂತ ಮಾವಿನ ಮರದ್ ಅವರ ಹೆಸರನ್ನು ಎಚ್‍ಡಿಕೆ ಘೋಷಣೆ ಮಾಡಿದ್ದಾರೆ. ಸದ್ಯ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಅಭ್ಯರ್ಥಿಯಾಗಿ ಸರಳ ವ್ಯಕ್ತಿತ್ವದ ಹನುಮಂತ ಕಣಕ್ಕಿಳಿಯಲಿದ್ದಾರೆ. ಅವರಲ್ಲಿರುವ ಸರಳತೆ-ಬದ್ಧತೆ ಮೆಚ್ಚುವಂತಹದ್ದು. ಇಂತಹ ನಾಯಕರು ಇಂದು ರಾಜ್ಯಕ್ಕೆ ಬೇಕಾಗಿದೆ. ನಿಮ್ಮ ನೋವಿಗೆ ಸ್ಪಂದಿಸುವ ಸರ್ಕಾರ ತರಲು ಹೊರಟಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘದ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಜೆಡಿಎಸ್ ಸಜ್ಜು, ಎಚ್‌ಡಿಕೆಗೆ ಬಾದಾಮಿಯೇ ಟಾರ್ಗೆಟ್
ನಾನು ಬಾದಾಮಿಯ ತಂದೆ-ತಾಯಂದಿರ ಮುಖಾಂತರ ನಾಡಿನ ಜನತೆಗೆ ಮನವಿ ಮಾಡುತ್ತೇನೆ. ನಮ್ಮ ಪಕ್ಷಕ್ಕೆ ಒಂದು ಅವಕಾಶ ಕೊಟ್ಟು ನೋಡಿ. ಇಡೀ ರಾಜ್ಯವನ್ನೇ ಅಭಿವೃದ್ಧಿ ಮಾಡುತ್ತೇವೆ. ಯಾರಿಗೆ ಮನೆಯಿಲ್ಲವೋ ಎಲ್ಲರಿಗೂ ಮನೆ ಕಟ್ಟಿಸಿಕೊಡುತ್ತೇವೆ. ಒಂದು ವೇಳೆ ಕೊಡದಿದ್ದರೆ ಮತ್ತೆಂದೂ ನಾನು ನಿಮ್ಮ ಬಳಿ ಮತ ಕೇಳುವುದಕ್ಕೆ ಬರುವುದಿಲ್ಲ. ನಮಗೆ ದುಡ್ಡು ಬೇಕಾಗಿಲ್ಲ ನಿಮ್ಮ ಸೇವೆ ಮಾಡುವ ಅವಕಾಶ ಬೇಕು ಎಂದು ಹೇಳಿದರು.
10 ಕೆಜಿ ಉಚಿತ ಅಕ್ಕಿ ಕೊಟ್ಟು ನಾವು ನಿಮ್ಮನ್ನು ಬಿಕಾರಿ ಮಾಡುವುದಿಲ್ಲವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟಕ್ಕರ್ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ನಡೆದ ಜೆಡಿಎಸ್ 'ಜನತಾ ಜಲಧಾರೆ ಸಂಕಲ್ಪ ಸಮಾವೇಶ'ದಲ್ಲಿ ಸೋಮವಾರ ಮಾತನಾಡಿರುವ ಅವರು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.