ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಹತ್ವದ ಸಲಹೆ ಕೊಟ್ಟ ಕುಮಾರಸ್ವಾಮಿ
* ಕರ್ನಾಟಕದಲ್ಲಿ ಕೊರೋನಾ 3ನೇ ಅಲೆ ಭೀತಿ
* ಸಲಹೆ ಕೊಟ್ಟ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
* ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಿ ಎಂದ ಎಚ್‌ಡಿಕೆ
ಬೆಂಗಳೂರು, (ಜು.31): ರಾಜ್ಯದಲ್ಲಿ ಒಂದೆಡೆ ಕೊರೋನಾ 3ನೇ ಅಲೆ ಭೀತಿ ಎದುರಾಗಿದೆ ಮತ್ತೊಂದೆಡೆ ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆಯತ್ತ ಗಮನಕೊಟ್ಟಿದ್ದಾರೆ. ಶಾಸಕರಿಗೆ ಮೊದಲು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ, ಜನರ ಸಮಸ್ಯೆ ಆಲಿಸುವಂತೆ ಸೂಚಿಸಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಬೆಂಗಳೂರಿನ ಸೋಮಶೆಟ್ಟಿಹಳ್ಳಿಯಲ್ಲಿ ಇಂದು (ಶನಿವಾರ) ಮಾತನಾಡಿದ ಕುಮಾರಸ್ವಾಮಿ, ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಲಾಕ್ ಡೌನ್ ಮಾಡುವಂತೆ ನಾನು ಹೇಳಿದ್ದೆ. ಆದರೆ ನಾನು ಕೊಟ್ಟ ಸಲಹೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷ ಮಾಡಿತ್ತು. ಪರಿಣಾಮ ಅನಾಹುತಗಳನ್ನು ಎದುರಿಸಬೇಕಾಯಿತು. ಈಗ ಮೂರನೇ ಅಲೆ ಆರಂಭವಾಗುತ್ತಿದೆ ಈಗಲಾದರೂ ಸರ್ಕಾರ ಎಚ್ಚೆತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಿ ಎಂದರು.
ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ನೆರೆ ರಾಜ್ಯ ಕೇರಳದಲ್ಲಿ ಕೊರೊನಾ 3ನೇ ಅಲೆ ಸ್ಫೋಟವಾಗಿದೆ. ರಾಜ್ಯದಲ್ಲೂ ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಮೂರನೇ ಅಲೆ ಆರಂಭವಾಗಲಿದೆ ಎಂದು ತಜ್ನರು ಎಚ್ಚರಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 50-100 ಕೇಸ್ ಹೆಚ್ಚಾಗುತ್ತಿದೆ. ದೊಡ್ಡಮಟ್ಟದಲ್ಲಿ ಮೂರನೇ ಅಲೆ ಹರಡುವ ಮೊದಲು ಈಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
2 ವರ್ಷಗಳಿಂದ ಸಿಎಂ ಭೇಟಿಗೆ ಜನಸಾಮಾನ್ಯರಿಗೆ ಅವಕಾಶ ದೊರೆಯುತ್ತಿಲ್ಲ. ಜನಸಾಮಾನ್ಯರು ಕಷ್ಟವನ್ನು ಯಾರೂ ನೇರವಾಗಿ ಕೇಳುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅದನ್ನು ಸರಿಪಡಿಸಬೇಕಾಗಿದೆ ಎಂದು ಆಗ್ರಹಿಸಿದರು.