ಜೆಡಿಎಸ್ ರಾಜ್ಯ ಘಟಕಗಳನ್ನು ವಿಸರ್ಜಿಸಿದ ಹೆಚ್.ಡಿ. ದೇವೇಗೌಡ: ಹೊಸ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ!
ಜೆಡಿಎಸ್ ರಾಜ್ಯ ಘಟಕವನ್ನು ವಿಸರ್ಜನೆ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ನೂತನ ರಾಜ್ಯಾಧ್ಯಕ್ಷರನ್ನಾಗಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿದರು.
ಬೆಂಗಳೂರು (ಅ.19): ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರೋಧ ವ್ಯಕ್ತಪಡಿಸಿದ್ದು, ತಾವು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಹೀಗಾಗಿ, ಇಬ್ರಾಹಿಂ ಅವರನ್ನು ಪಕ್ಷದಿಂದ ಹೊರ ಹಾಕುವ ದೃಷ್ಟಿಯಿಂದ ಜೆಡಿಎಸ್ ರಾಜ್ಯ ಘಟಕಗಳನ್ನೇ ವಿಸರ್ಜನೆ ಮಾಡಲಾಗುತ್ತಿದೆ. ಮುಂದುವರೆದು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 19 ಜನ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡಂತೆ 2 ಸಭೆಗಳನ್ನು ಮಾಡಲಾಗಿದ್ದು, ಅದರಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬಗ್ಗೆ ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ನಾವು ಸರ್ಕಾರದಲ್ಲಿ ಭಾಗಿಯಾಗಿದ್ದೇವೆ, ಮಂತ್ರಿಗಳೂ ಆಗಿದ್ದೇವೆ. ಆದರೆ, ನಾವು ಯಾವ ಕಾರಣದಿಂದ ಭಾರತೀಯ ಜನತಾ ಪಾರ್ಟಿಯೊಂದಿಗೆ ಹೋಗುವ ಸನ್ನಿವೇಶವನ್ನು ತಂದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಿಂದಿನ ಅಧ್ಯಕ್ಷರ ಬಗ್ಗೆ ಎಲ್ಲರ ಅಭಿಪ್ರಾಯವನ್ನು ಪಡೆದು ಈಗ ಬದಲಾವಣೆ ಮಾಡಲಾಗುತ್ತಿದೆ ಎಂದರು.
ಒರಿಜಿನಲ್ ಜೆಡಿಎಸ್‌ಗೆ ನಾನೇ ಅಧ್ಯಕ್ಷ, ಇಂಡಿಯಾಕ್ಕೆ ನಮ್ಮ ಬೆಂಬಲ: ಇಬ್ರಾಹಿಂ
ಬಿಜೆಪಿ ಜೊತೆಗೆ ಮೈತ್ರಿ ಗೆ ಎಲ್ಲ ರಾಜ್ಯ ಘಟಕಗಳ ಸಮ್ಮತಿ ಇತ್ತು. ಅನೇಕ ಮುಸ್ಲಿಂ ಮುಖಂಡರು ನಮ್ಮ ಜೊತೆ ಇದ್ದಾರೆ. ನಾವು ಧೃತಿಗೆಡಬೇಕಿಲ್ಲ. ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನಾಯಕರ ಸಮ್ಮತಿಯಂತೆ ರಾಜ್ಯದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತಿದೆ. ಜೊತೆಗೆ ಕೆಲವು ಪದಾಧಿಕಾರಿಗಳ ನೇಮಕ ಮಾಡ್ತೀವಿ. ಮುಖಂಡರ ಜೊತೆ ಚರ್ಚೆ ಮಾಡಿ ಇನ್ನು ಮೂರು ದಿನಗಳ ಒಳಗೆ ಮಾಡಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಪಕ್ಷದಿಂದ ಇಬ್ರಾಹಿಂ ಉಚ್ಛಾಟನೆ ಇಲ್ಲ: ಪ್ರಸ್ತುತ ಪಕ್ಷದ ಎಲ್ಲರ ಅಭಿಪ್ರಾಯದಂತೆ ಜೆಡಿಎಸ್ ರಾಜ್ಯ ಘಟಕವನ್ನು ವಿಸರ್ಜನೆ ಮಾಡಲಾಗಿದೆ. ಆದರೆ, ಈ ಹಿಂದಿನ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗವಹಿಸಬಹುದು. ಪಕ್ಷದ ಸಂವಿಧಾನದ ಪ್ರಕಾರ ಹೊಸ ಅಧ್ಯಕ್ಷ ರ ನೇಮಕ ಮಾಡಿದ್ದೀವಿ ಎಂದು ತಿಳಿಸಿದರು.
ಡಿಸಿಎಂ ಡಿಕೆಶಿವಕುಮಾರ್‌ಗೆ ಬಿಗ್ ಶಾಕ್: ಅಕ್ರಮ ಆಸ್ತಿ ಪ್ರಕರಣ ಸಿಬಿಐ ತನಿಖೆಗೆ ಮುಂದುವರೆಸಲು ಹೈಕೋರ್ಟ್ ಅಸ್ತು
ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ವಿಧಾನಸಭಾ ಚುನಾವಣೆ ನಂತರ ಕೆಲವು ರಾಜಕೀಯ ಘಟನೆಗಳು ನಡೆದಿದ್ದಾವೆ. ಅದರ ಹಿನ್ನಲೆ ಯಲ್ಲಿ ಹಳೆ ಘಟಕವನ್ನು ವಿಸರ್ಜನೆ ಮಾಡಿದ್ದಾರೆ. ಪಕ್ಷದಲ್ಲಿ ಹೊಸದಾಗಿ ಅಡಾಕ್ ಕಮಿಟಿ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯ ಮಾಡಲಾಗುವುದು. ಇದಕ್ಕೆ ಎಲ್ಲರ ಸಹಕಾರವನ್ನೂ ಪಡೆಯಲಾಗುತ್ತದೆ. ಜೊತೆಗೆ, ನಾಳೆ (ಶುಕ್ರವಾರ) ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದು, ಕಾಂಗ್ರೆಸ್ ಸರ್ಕಾರದಿಂದ ವಿದ್ಯುತ್ ಕೊರತೆ ವಿಚಾರವನ್ನು ಮುಂದಿಟ್ಟುಕೊಂಡು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದರು.